ನನ್ನ ಸಮಕಾಲೀನ ಲೇಖಕರಲ್ಲಿ ವಿಶಿಷ್ಟರಾದ ಚಂದ್ರಶೇಖರ ಕಂಬಾರರ ಕಾವ್ಯದ ಮ್ಯಾಜಿಕನ್ನು ನಾನು ಯಾವತ್ತೂ ವಿಶ್ಲೇಷಿಸದಂತೆ ಅನುಭವಿಸಿದ್ದೇನೆ. ವಿಶ್ಲೇಷಣೆಗೆ ಸಿಗುವಂತೆ ಯೋಚಿಸಿ ಬರೆಯುವ ಕವಿ ಕಂಬಾರರಲ್ಲ. ಇಂಗ್ಲಿಷ್‌ನ ಬಹುದೊಡ್ಡ ಕಾದಂಬರಿಕಾರ ಹೆನ್ರಿ ಜೇಮ್ಸ್‌ ಬಗ್ಗೆ ಎಲಿಯೆಟ್‌ ಒಂದು ಮಾತು ಹೇಳುತ್ತಾನೆ: ‘ನಮ್ಮ ಕಾಲದಲ್ಲಿ ಈತನೊಬ್ಬನಿಗೆ ಮಾತ್ರ ಅಬ್‌ಸ್ಟ್ರಾಕ್ಟ್‌ (abstract) ಆಗಿ ಯಾವ ಅಭಿಪ್ರಾಯಗಳೂ ಹೊಳೆಯುವುದಿಲ್ಲ. ಅವನು ಎಲ್ಲವನ್ನೂ ನಿಜದ ವಸ್ತುಗಳನ್ನಾಗಿಯೇ ಕಾ ಣುತ್ತಾನೆ.’

ಕಂಬಾರರನ್ನು ಬೇಂದ್ರೆಗೆ ಹೋಲಿಸುವುದುಂಟು. ಇದು ಸರಿಯಲ್ಲ. ಕಂಬಾರರು ಮೈಮರೆತು ಆಧ್ಯಾತ್ಮಿಕವಾದ ತುಡಿತದಲ್ಲಿ ಬರೆಯುವವರಲ್ಲ. ಅವರಿಗೆ ಆತ್ಮದಷ್ಟೇ ದೇಹವೂ ನಿಜ. ಆದರೆ ಜಡವೆಂದು ನಾವು ತಿಳಿಯುವ ಜಗತ್ತು ಇವರ ಕಾವ್ಯದೊಳಗೆ ಕುಣಿದಾಡಿಕೊಂಡು ಪ್ರವೇಶಿಸುತ್ತದೆ. ಬೇಂದ್ರೆಯಲ್ಲಿ-ಹಿನ್ನೆಲೆಯಲ್ಲಿ ಹೊಳೆಯುತ್ತದೆ.

ನಾನು ಅಡಿಗರಲ್ಲೂ, ಕಂಬಾರರಲ್ಲೂ ಒಂದು ಸಂಗತಿಯನ್ನು ಗುರುತಿಸಿದ್ದೇನೆ. ಅಡಿಗರ ಕವಿತೆಗಳ ನಾಯಕ ಕೆಲವೊಮ್ಮೆ ಸರ್ಕಸ್‌ನ ಬಫೂನನಂತೆ ತನ್ನನ್ನೇ ಗೇಲಿಮಾಡಿಕೊಳ್ಳಬಲ್ಲ. ಸರ್ಕಸ್‌ನ ಉಳಿದ ಪಾತ್ರಗಳು ದೇಹಾಪಾಯ ಲೆಕ್ಕಿಸದೆ ಮಾಡುವ ಎಲ್ಲ ಸಾಹಸಗಳನ್ನು ತಾನೇ ಮಾಡಿ ತೋರಿಸಿ ಬಫೂನ್‌ ಸಾಹಸಪ್ರಿಯರಾದ ನಮ್ಮ ದಡ್ಡತನ ನೋಡಿ ನಗುತ್ತಾನೆ. ಅವನು ಎಲ್ಲರಿಗಿಂತ ಕೀಳೂ ಹೌದು. ಎಲ್ಲರಿಗಿಂತ ಮೇಲೂ ಹೌದು. ಕಂಬಾರರ ಪಾತ್ರಗಳು ಅಡಿಗರಿಗಿಂತಲೂ ಹೆಚ್ಚಾಗಿ ತನ್ನನ್ನೇ ತಾನು ಹಾಸ್ಯಮಾಡಿಕೊಳ್ಳಬಲ್ಲವರು. ಅಡಿಗರಿಗಾದರೂ ನೇರವಾಗಿ ಹೇಳಿಕೊಳ್ಳುವ ವೈಯಕ್ತಿಕ ಆರ್ತತೆಯ ಹಲವು ಭಾವನಾತ್ಮಕ ವಿಷಯಗಳಿವೆ. ಕಂಬಾರರಿಗೂ ಇವೆ. ಆದರೆ ಅವೆಲ್ಲವೂ ಹಾಸ್ಯದ ಮುಖವಾಡ ತೊಟ್ಟು ನಮಗೆ ಎದುರಾಗುತ್ತವೆ. ಯಾಕೆ ಇಡೀ ಜಗತ್ತನ್ನೇ ಅವಾಕ್ಕಾಗಿಸಿದ ಮಾವೋತ್ಸೆ ತುಂಗ ಈ ಕವಿಯ ನಾಯಕನಿಗೆ ದೇವತಾ ಸದೃಶನಾದ ಆತ್ಮರತ ಮೂರ್ಖನೂ, ಹೀಗೆ ನಮಗೆ ತೋರುವುದಕ್ಕಾಗಿ ತುಡಿಯುವ ಬಫೂನನೂ ಆದ ಒಬ್ಬ ವ್ಯಕ್ತಿಯಾಗುತ್ತಾನೆ. ನಾನು ಚೀನಾಕ್ಕೆ ಹೋದಾಗ ನನಗೆ ಅನ್ನಿಸಿತ್ತು-ಕಂಬಾರರಂತೆ ಚೀನೀಯರು ಬರೆಯಬಲ್ಲವರಾಗಿದ್ದರೆ ಮಾವೋನಿಂದ ಎಂದಾದರೂ ಬಿಡುಗಡೆ ಪಡೆಯಬಹುದಿತ್ತು ಎಂದು.

ಕಂಬಾರರನ್ನು ಎಲ್ಲಿ ಎತ್ತಿ ಓದಿದರೂ ವಕ್ರ ನೋಟದಿಂದ ಕಂಡ ಸತ್ಯಗಳೇ ಎದುರಾಗುತ್ತವೆ. ಈ ಕಂಬಾರ-ಲೋಕದಲ್ಲಿ ಸತ್ಯವನ್ನು ಯಾರೂ ಮರೆ ಮಾಚುವಂತಿಲ್ಲ. ಇಲ್ಲಿ ಬರುವ ವ್ಯಕ್ತಿಗಳು ಅತಿ ಹಿಗ್ಗಬಲ್ಲವರೂ ಹೌದು; ಅತಿ ಕುಗ್ಗಬಲ್ಲವರೂ ಹೌದು. ಜೊತೆಗೆ ಇವರು ಬಡಪಾಯಿಗಳೂ ಹೌದು. ಈ ಬಗ್ಗುವ/ಕುಗ್ಗುವ ನಿರಹಂಕಾರ ಗುಣದಿಂದಾಗಿ ಇವರು ಬಚಾವ್‌ ಆಗುತ್ತಾರೆ . ಬಫೂನ್‌ಗಿರಿಯೂ ಬಚಾವ್‌ ಆಗುವ ಒಂದು ಕ್ರಮ.

ಸರ್ವನಾಶವಾಗುತ್ತಿರುವ ಇಂದಿನ ಜಗತ್ತಿನಲ್ಲಿ ನಾವು ಸಾಮಾನ್ಯನೆಂದು ತಿಳಿಯುವ ನರಜೀವಿಗೆ ಪಾರಾಗಬಲ್ಲ ಹಲವು ಉಪಾಯಗಳು ಇವೆ ಎಂಬುದನ್ನು ಕಂಬಾರರ ಇಡೀ ಕಾವ್ಯ ತೋರಿಸುತ್ತದೆ.

ರಾಷ್ಟ್ರಗಳು ಅಳಿದರೂ ಶಿವಾಪುರ ಅಳಿಯುವುದಿಲ್ಲ.

ನಾನೊಂದು ಪದ್ಯ ಬರೆದಿದ್ದೆ . ‘ಊರು ಮತ್ತು ದೇಶ’ ಎಂದು ಪದ್ಯದ ಹೆಸರು. ಊರು ಎನ್ನುವುದು ನಿಜದ ಸಂಬಂಧಗಳ ಪ್ರದೇಶ. ದೇಶ ಎನ್ನುವುದು ನಾವು ಭಾವನಾತ್ಮಕವಾಗಿ ಮೇಲು ಕೀಳಿನ ಆಟವಾಡಲು, ಆಳಲು, ಅಳಿಸಿಕೊಳ್ಳಲು ಕಟ್ಟಿಕೊಳ್ಳುವ ವೈಚಾರಿಕತೆಯ ಲೋಕ. ಕಂಬಾರರು ಅಚ್ಚಕನ್ನಡವಾಗಿರುವ ಒಂದು ಸಣ್ಣ ಪ್ರದೇಶದ ಬಾಳುವ ಶಕ್ತಿಯನ್ನು ಬಿಂಬಿಸಬಲ್ಲ ಕವಿ. ನಮ್ಮೂರಿನ-ಗಾಢವಾದ ಲೋಕಪ್ರಜ್ಞೆಯ-ಕವಿ, ಜನರ ನಡುವಿನಿಂದ ಹುಟ್ಟಿಬಂದ, ಹಾಡುವ, ಕುಣಿಯುವ, ಅಣಕಿಸುವ, ಅಪರೂಪದ ಕವಿ ಈ ಕಾಲದಲ್ಲಿ ಕಂಬಾರ ಒಬ್ಬರೇ . ತನ್ನ ಅಣಕದಿಂದ ದೇವರನ್ನೂ ಹೊರತುಪಡಿಸದವರು ಇವರು. ಊರಿನವನೇ ಆದ  ಈ ದೇವರನ್ನು ಪ್ರೀತಿಸಬಲ್ಲವರೂ ಇವರು.

ಕಾವ್ಯದ ಜೀವಾಳ ಧ್ವನಿ ಎನ್ನುತ್ತಾರೆ.  ತನ್ನ ಧ್ವನಿಯಲ್ಲಿ ಸತ್ಯವನ್ನು ಹೊಮ್ಮುವ ಮಾತಿನ ಪರಿಯಲ್ಲಿ ಒಳಗೊಂದು ಹೊರಗೊಂದು ಎನ್ನಿಸುವ ಬಿರುಕು ಇರುತ್ತದೆ . ಕಂಬಾರರಲ್ಲಿ ಒಳಗೊಂದು ಹೊರಗೊಂದು ಎಂಬ ಅಂತರವೇ ಇಲ್ಲ. ಆತಂಕವೂ ಇಲ್ಲ. ಸ್ವೀಕಾರದ ಹಿಗ್ಗಿನಲ್ಲಿ ವಿಸ್ತಾರವಾಗುತ್ತ ಇರುವ ಕಂಬಾರರ ಲೋಕ ಮೋಹಕವಾದ ನಾಟಕೀಯ ಪ್ರದರ್ಶನದ್ದು. ಈ ಪ್ರದರ್ಶನದಲ್ಲಿ ದಯ ದಾಕ್ಷಿಣ್ಯದ ನಾಗರಿಕ ಸಂಕೋಚವಿಲ್ಲ. ಒಂದು ದೇಶ ಹಳ್ಳಿಯಾಗಿಯೂ ಉಳಿಯದ ನಾಡಿನಲ್ಲಿ ಕಂಬಾರನಂಥ ಕವಿ ಹುಟ್ಟುವುದಿಲ್ಲ.

ಯು.ಆರ್. ಅನಂತಮೂರ್ತಿ