ನಮ್ಮೂರೆಂದರೆ ಘಟಪ್ರಭೆಯೆಂಬ ನದಿ.
ಓಂಪ್ರಥಮದಲ್ಲಿ ಈ ನದಿಯಲ್ಲಿ
ಕಾಲಿಳಿಬಿಟ್ಟು ಕೂತದ್ದೇ ನಮ್ಮ ಹಳ್ಳಿ!

ಎಷ್ಟು ತಿಳಿಯಾಗಿತ್ತು ನಮ್ಮೂರ ಹೊಳೆ ಆಗ!
ಹೆಸರು ಗೊತ್ತಿಲ್ಲದ ಹಸಿರು ದೇವರೆಷ್ಟೋ ಮಂದಿ
ನದಿಯಲ್ಲಿ ನೀರಾಟವಾಡಿದುದ ನಾವೆ ಕಂಡಿದ್ದೇವೆ!
ದಡದಲ್ಲಿ ಜಂಬುನೇರಳೆ ಹಣ್ಣು,
ಕೆಳಗೆ ತಿಳಿನೀರಲ್ಲಿ ಸಾವಿರಾರು ಕಣ್ಣು೧
ಹಗಲು ಸೂರ್ಯನ ಮುಖವಾಡವ ಹರಿದು ಹಂಚಿ
ಅಣಕಿಸಿ ನಗುವ ನೀರು;
ಬಾಗಿ ಮುಖ ನೋಡಿಕೊಂಬ ಮುಗಿಲು
ಹೊಳೆವ ಬೆಳ್ಳಕ್ಕಿಗಳ ಸಾಲು ಮುಗಿಲೊಳಗೆ ತೇಲಿದರೆ
ಕೆಳಗೆ ನೀರ ನೀಲಿಮದಲ್ಲಿ ಮಲ್ಲಿಗೆಯ ಮಾಲೆ೧
ರಾತ್ರಿಗೆಂದರೆ ಚಂದ್ರಾಮ ತನ್ನಂಗಳದಿಂದ ಕೆಳಗಿಳಿದು ಬಂದು
ತಾರಾಪರಿವಾರದೊಂದಿಗೆ ನೀರಾಟವಾಡಿದರೆ, ಅರೆ ಅರೆ
ತಾರೆಗಳ ಅವು? ರಾತ್ರಿಯ ಕಣ್ಮಣಿಗಳು೧
ಅದು ಮುಳುಗಿ ಇದು ಎದ್ದು
ಝಗಮಗ ಹೊಳಪಿನ ನಗೆಗಳ ಎರಚಾಡಿ
ಕುಣಿವ ಆನಂದಗಳು!

ಕವಿಸಮಯದ ಕಮಲಗಳಿರಲಿಲ್ಲ ನದಿಯಲ್ಲಿ,
ಈ ಜಾಡುತಿರಲಿಲ್ಲ ಹಂಸಗಳು;
ಈಜುತ್ತಿದ್ದವರು ನಾವೇ, ನನ್ನೋರಗೆಯ ಪಡ್ಡೆ ಹುಡುಗರು.

ಈಜುವ ನಮ್ಮಲ್ಲಿಯ ಒಬ್ಬಿಬ್ಬರಿಗೆ
ದೂರದ ರಾಜಕುಮಾರಿಯ ಬಂಗಾರದ ಕೂದಲು ಸಿಕ್ಕಿದ್ದಿದೆ,
ಪಾತಾಳದ ನಾಗಿಣಿಯರ ತೋಳಕೋಳದಲಿ ಬಂದಿಯಾಗಿ
ನಮ್ಮಲ್ಲೊಬ್ಬ ಪಾತಾಳ ಕಂಡದ್ದಿದೆ!
ಬೆಳ್ದಿಂಗಳಲ್ಲಿ ದೇವಲೋಕದ ಏಳು ಕನ್ಯೆಯರು
ಇಲ್ಲಿ ಜಲಕ್ರೀಡೆಯಾಡಿ,
ಕಿರಿಯಳ ಬಟ್ಟೆಯ
ನಮ್ಮೂರ ಗೌಡರ ಕಿರಿಯ ಮಗ ಕದ್ದು,
ಉಳಿದವರು ಪರಾರಿಯಾಗಿ ಅವಳಿಲ್ಲೇ ಉಳಿದು,
ಮದುವೆಯಾಗಿ ತೋಟದಲ್ಲಿ ಮನೆ ಕಟ್ಟಿಕೊಂಡಿದ್ದರಲ್ಲ?
ಆ ಮನೆಯಿನ್ನೂ ಹಾಗೇ ಇದೆ೧

ಹುಣ್ಣಿಮೆಯ ದಿನ ಪೂರ್ಣಚಂದ್ರ
ಬೆಳ್ಳಿಮೀನಾಗಿ ಈಜುವನೆಂದು ನಂಬಿ,
ಬೆಸ್ತರ ಹುಡುಗ ಚಂದ್ರನ ಹಿಡಿಯಲು ಹೋದವನು
ತಿರುಗಿ ಬಾರದೆ, ಹರಿದ ಬಲೆ, ಮುರಿದ ಹುಟ್ಟು
ತೇಲಿ ಬಂದದ್ದು ಸಹ ಇದೇ ನದಿಯಲ್ಲಿ!

ಈ ಮಧ್ಯೆ ನಡೆದ ಕರ್ಮಂಗಳ ಕಥೆಯನೇನ ಕೇಳುವಿರಯ್ಯ?
ಹೇಳಲಿಕ್ಕಿದೆ ಬೇಕಾದಷ್ಟು,
ಈಗಿಷ್ಟು ತಿಳಿಯಿರಿ  ಸಾಕು:
ನಮ್ಮ ನದಿಯ ಯೌವನವಾಗಲೇ ದುಂದು ವೆಚ್ಚವಾಗಿ
ತಂಗುಳಾಗಿದೆ ನೀರು.
ವಿಧವೆಯ ಮುಖದಂತೆ ಮೂಡುತ್ತದೆ ಮುಗಿಲು.
ಸೊಕ್ಕಿ ಉಕ್ಕುತ್ತಿದ್ದ ಹರೆಯದ ತೆರಗಳೀಗ-
ಸುಕ್ಕಿನ ಗೆರೆಗಳಾಗಿವೆ!
ಮುದಿಮುಖದ ಮೂಳೆಗಳು ಮುಂಚಾಚಿ ಕಾಣಿಸುವಂಥೆ
ತಳದ ಕಲ್ಲುಬಂಡೆಗಳು ಕಾಣಿಸುತ್ತಿವೆ;
ಹನ್ನೆರಡಾಳುದ್ದದ ನದಿಯೀಗ ಹರಿಯುತ್ತಾಳೆ
ಬಚ್ಚಲು ಮೋರಿಯ ನೀರಿನ ಕಳ್ಳ ಹೆಜ್ಜೆಗಳಲ್ಲಿ!
ಬೇಟೆಗೊಂಬ ಮಿಕದ ಹುಷಾರು ನಡಿಗೆಯಲ್ಲಿ!
ಅವಳ ಭಾವದರ್ಪಣದಲ್ಲಿ
ನಮ್ಮ ಮುಖ ಮೂಡುವುದಿಲ್ಲ,
ಮುದಿಮೋರೆಯಲ್ಲೀಗ
ಬಿಳಿಯ ನಗೆ ಹೊಳೆಯುವುದಿಲ್ಲ,
ಮೊದಲಿನಬ್ಬರವಿಲ್ಲ, ಧುಮುಕುವ ರಭಸವಿಲ್ಲ.

ಆಗೊಮ್ಮೆ ಈಗೊಮ್ಮೆ ರಭಸದಲಿ ಹರಿಯೋದಿದೆ-
ಹಾಗೆ ಹರಿದದ್ದು ನೆರೆನೀರೊ? ಕಣ್ಣೀರೊ?
ಹೇಳಲಾರೆ.