ದೂರದಲ್ಲಿ
ಮುಖದ ಮ್ಯಾಲೆ ಜಡೆಯೆಳೆದುಕೊಂಡು ಕೂತ
ಹಟಮಾರಿ ಜಡೆಮುನಿಯಂತೆ ಕಾಣುವುದಲ್ಲ,-
ಅದೇ ಪಾರಂಬಿಮರ!
ಹೇಳುದಕೆ ಸಾಧ್ಯವೆ  ಈ ಮರದ
ಪ್ರಾಬಲ್ಯವ?
ನಂಬುವುದೂ ಬಿಡುವುದೂ ನಿಮ್ಮ ಕರ್ಮ-
ಬುದ್ಧನಿಗೆ ಬೋಧೆ ಮಾಡಿದ್ದು ಇದೇ ಮರವೆಂದು
ನಾವಂತೂ ನಂಬಿದವರು.

ಈ ಅನಾಧಿಮರದ ವಯಸ್ಸನ್ನ ಅಳತೆಮಾಡಿ
ಹೇಳಬಲ್ಲವರಿನ್ನೂ ಹುಟ್ಟಿಲ್ಲ ಈ ಸೀಮೆಯೊಳಗೆ.
ಸುತ್ತಳತೆಯೇ ಹತ್ತಾಳು ಕೈಕೈ ಮಿಲಾಯಿಸಿ
ತಬ್ಬಿಕೊಳ್ಳುವಷ್ಟಿತ್ತು!
ಕಾಲನ ಎಲ್ಲ ವರಸೆಗಳನ್ನ, ಅವನೆಲ್ಲ ಗಾಳಿ ಬಿರುಗಾಳಿಗಳನ್ನ
ಅಡ್ಡಾದಿಡ್ಡಿ ಬೆಳೆದು ಟೊಂಗೆ ಟಿಸಿಲು, ಇಳಿಬಿದ್ದ ಬಿಳಲು,
ಗಂಟುಗೆಲ್ಲುಗಳಿಂದ ಎದುರಿಸಿ ಗೆದ್ದು
ತಿಳಿಹಸಿರ ನಗುತ, ಸಾವಿರ ವರ್ಷ ಕೂತಿದ್ದ
ಮರವಿದು!

ಭೂಮಿಯ ಇನ್ನೊಂದು ತುದಿತನಕ ಇಳಿದ ಬೇರು
ನಮ್ಮಲ್ಲನೇಕರ ಮನೆಗೋಡೆಗಳಲ್ಲೂ ಎದೆಗಳಲ್ಲೂ
ಚಿಗುರಿ ನಕ್ಕದ್ದಿದೆ.
ಇಳಿಬಿದ್ದ ಜಡೆಗೇ ಕಣ್ಣು ಮೂಡಿ
ನೇಣು ಹಾಕಿಕೊಂಬಿವರ ಹೆದರಿಸಿ ಬುದ್ಧಿ ಹೇಳಿದ್ದಿದೆ.
ನಾವು ಮಕ್ಕಳೂ ಹಕ್ಕಿಗಳಂತೆಯೇ ಮರದ ಒಕ್ಕಲು.
ಹಗಲು ಹೊತ್ತು.
ನಾವಾಡುವ ಅಡಗುವ ಕೂಡುವ ನೋಡುವ
ಆಟ ಮಾಟ ಕೂಟಂಗಳಿಗೆ ಮರವೇ ಆಸರೆ.

ಸಂಜೆಗೆಂದರೆ ಪಾರಂಬಿಮರ ನಮ್ಮನ್ನ ಕೂಗಿ ಕರೆದು
ಗಕ್ಕನೆ ಮಕ್ಕೊಳ್ಳಿರೋ ಮಕ್ಕಳೇ ಎಂದರೆ-
ಆಗಲೂ ನಾವು ಆಟದಲ್ಲಿ ಮೈಮರೆತರೆ,

ಕೊಂಬುಗಾಳಿಯ ಬೀಸಿ ಎಲೆಯಲುಗಿ ಗುಮ್ಮನ ಕೂಗಿದರೆ,
ಮನೆಗೋಡಿದ ನಾವು ಅಗಲೂ ಕಣ್ಣು ಮುಚ್ಚದೆ
ಹಾಗೇ ದೀಪ ಕಳೆದರೆ ,

ಕಿಡಿಕಿಯಲ್ಲಿ ಜಡೆಮಾರಿ ಬಂದು
ಗುಡುಗುತ್ತಿದ್ದನು ಜಡೆಮುನಿ:
“ಸಪನಿದ್ದೆಯೆಂದರೆ ಏನಂದುಕೊಂಡಿರೋ?
ಒಳಗನ್ನ ನೋಡುವಿನ್ನೊಂದು ಕಣ್ಣು!” ಎಂದು ನಂಬಿಸಿ
ಕಣ್ಣು ಮುಚ್ಚಿಸಿ ಕತ್ತಲೆಯಲ್ಲಿ ತೋರಿಸುತ್ತಿದ್ದ
ನಾವರಿಯದ ಲೋಕಗಳನ್ನ!
ಕೊಂಬು ಕೋರೆಹಲ್ಲಿನ ರಾಕ್ಷಸರನ್ನ!
ಭೂತ ಬೇತಾಳ ಸೇಡುಮಾರಿಯರನ್ನ!
ಹಸಿರುಗಣ್ಣಿನ ಯಕ್ಷ ಯಕ್ಷಿಯರನ್ನ!
ಹಕ್ಕಿಗಳಾಗಿ ಶಕುನ ಕೂಗುವ ಕುಲದ ಹಿರಿಯರನ್ನ!

ಕೆಂಡದ ಮಳೆಗು ಜಗ್ಗದ ಈ ಮರದ ಮ್ಯಾಲೆ
ಹುಲಿಯ ನೆರಳು ಬಿದ್ದಾಗಲೇ ನಡುವಿನ ಸುಳಿಯೊಣಗಿತ್ತು.
ನನಗೆ ನೆನಪಿದ್ದಂತೆ ಅಮವಾಸ್ಯೆಯ ದಿನ
ಕಡಿದರು ಈ ಮರವ ಬೆಳಗಾವಿಯ ಜನ.
ಮಾರನೆಯ ದಿನ ಯುಗಾದಿಯಂದೇ ಸತ್ತ ಕರಿಯಜ್ಜ.
ಮರವ ಈಗ ಚಿಗುರಿ ಆಳುದ್ದ ಬೆಳದುದ ನೋಡಿ
ನಿಬ್ಬೆರಗಾದೆ.
ಪಾರಂಬಿ ಮರದೆಲೆ ಕಣ್ಣೊರೆಸಿಕೊಂಡು
ಹೊಸ ಹಾಡಿಗೆ ದನಿಗೂಡುತ್ತಿದೆ.
ಊರ ನೆತ್ತಿಯ ಮ್ಯಾಲೆ  ಈಗಲೂ
ಅಪರಿಚಿತ ಹದ್ದಿನ ನೆರಳು ಹಾರಾಡುತ್ತಿದೆ!