ಸಣ್ಣ ಹಳ್ಳಿ ಅದು, ಹೆಸರು ಶಿವಾಪುರ-
ನೀವು ಕೇಳೇ ಇಲ್ಲ.
ನಿಮ್ಮ ನಕಾಶೆಯ ಯಾವ ಮೂಲೆಯಲು
ನಮ್ಮ  ಊರು ಇಲ್ಲ.

ಸಣ್ಣ ಬೀದಿಗಳು ಊರು ಬಿಟ್ಟು
ಬೇರೆಲ್ಲು ಹೊಗುವುದಿಲ್ಲ.
ಕಾಲು ದಾರಿಯಲಿ ಒಳಗೆ ಬರಬೇಕು
ಬೇರೆ ದಾರಿ ಇಲ್ಲ.

ಒಳಗೆ ಬಂದರೂ ನಿಮಗೆ ಸಿಗದು
ನಾವಿರುವ ಕೇಂದ್ರ ಬಿಂದು.
ಎಲ್ಲಿ ನಿಂತರದೆ ಕೇಂದ್ರ , ತಿರುಗುವುದು
ಪರಿಘ ಅದರ ಸುತ್ತು.

ಸಿಟಿಗೆ ಹೋಲಿಸಿದರಂತು ನಮ್ಮ ಈ
ಪರಿಘ ಚಿಕ್ಕದೇನೆ.
ಅವರು ಇವರೊಂದಿಗ್ಯಾಕೆ ಹೋಲಿಕೆ?
ನಮ್ಮ ಬಾಳು ನಮಗೆ.

ಇಲ್ಲಿ ಘಟನೆ ಘಟಿಸುವುದೆ ಇಲ್ಲ.
ಇತಿಹಾಸಕಿಲ್ಲ ಕೆಲಸ.
ಸದಾ ಹರಿಯುವುದು ನದಿಯು ಮಾತ್ರ
ಕಥೆ ಹುಟ್ಟತಾವು ದಿವಸ.

ನಮಗೆ ನಮ್ಮ ದೇವರುಗಳುಂಟು
ರಾಕ್ಷಸರು, ದೆವ್ವ , ಭೂತ.
ನಮ್ಮ ಕೊರತೆಗಳ ಭರ್ತಿ ಮಾಡುವರು
ಅವರೆ ಮುಂದೆ ನಿಂತು.

ಕ್ಷಿತಿಜದಾಚೆಗೂ ನಂಟು ಬೆಳೆಸಿದವ
ರುಂಟು ನಮ್ಮ ನಡುವೆ.
ಏನು ಸಿಕ್ಕರೂ ತಂದು ಹಂಚುವರು
ಚಿಂತೆಯಿಲ್ಲ ನಮಗೆ.