ಪೆನ್ನು ತಗೊಂಡು
ಬಿಳಿಯ ಹಾಳೆಯ ಮ್ಯಾಲೆ
ಪಾರಂಬಿ ಮರವೆಂಬ ಶಬ್ದವ ಬರೆದು ನೋಡು:

ಕ್ಷಣದಲ್ಲಿ ಬೇರಿಳಿದು
ಗಿಡ ಬೆಳೆದು ಹೆಮ್ಮರವಾಗಿ
ರೆಂಬೆ ಕೊಂಬೆಯ ಹರಹಿ
ವಿಸ್ತಾರವಿಪಿನವಾಗಿ-
ಋತುಮಾನಗಳಿಗೆ ತೆರೆದುಕೊಂಡಿತೋ?
ಈಗ ತಗೊ:
ಚಿಗುರ ಮೊಗ್ಗಿನ ಹಿಗ್ಗು  ಕಾಡ ತುಂಬ!
ಘಮಘಮಾ ಚೈತ್ರಗಳ ವಿಜಯೋನ್ಮಾದ,
ದುಂಬಿ ದುಂದುಭಿಯ ಕಹಳೆ ಕಂಸಾಳೆ,
ಮರದ ನೆರಳಿನ ಕೋಲು ಬೆಳಕಿನಲ್ಲಿ
ಬಣ್ಣ ಬಣ್ಣದ ಬಯಲಾಟದ ಕಲೆ!

ಗೂಡು ಕಟ್ಟುವ ಗೀಜಗ,
ಹಿಗ್ಗ ಸೂಸಿ ಆಕಾಶದವಕಾಶವ ತುಂಬುವ ಗೊರವಂಕ,
ಗರಿಗೆದರಿ ಹಾರಿ ನಭದಲ್ಲಿ ಮಿಂಚಿನ ಗೆರೆ ಎಳೆವ,
ಕೂಗಿ ನೀಲಿಮದಲ್ಲಿ ಮೌನ ಗೀಚುವ
ಹಕ್ಕಿಗಳ ನೆಲೆ.
ಮರದಲ್ಲಿ ಬೆಳಕಿಲ್ಲದಲ್ಲಿ ಜೋತು ಬಿದ್ದಿವೆ
ಬೇತಾಳ ಬಾವಲಿಗಳ ಬಲೆ.

ಸಂಜೆಯಾಯಿತೆ?
ಹಗಲಿರುಳು ಬೆರೆಯುವ ಬೂದಿ ಬೆಳಕಿನಲ್ಲಿ
ಬಿಳಲುಗಳ ಇಕ್ಕಟ್ಟಿನಲ್ಲಿ
ಪರಸ್ಪರ ಹಸ್ತ ಹೊಸೆವ, ಪಿಸುನುಡಿದು ಕಿವಿ ಕಚ್ಚುವ
ಬೆರಳು ಹೆಣೆವ, ತೋಳಕೋಳದಲಿ ನಲುಗುವ
ನೀರನುಭವಿ ಬಾಲ ಬಾಲೆಯರ
ತಿಕ್ಕುವುಕ್ಕುವ, ಕಚ್ಚಾಡಿ ಎಂಜಲು ನೆಕ್ಕುವ
ಸುಖ ಪಾರಂಬಿಗೆ!

ಸೊಕ್ಕಿದ ಗೂಳಿ, ಹುಯ್ಯೆನುವ ಗಾಳಿ ಬೀಸಿ
ಧೂಳೆಬ್ಬಿಸಿ ದಿಕ್ಕುದೆಸೆ ಇಲ್ಲದೆ ನೆಗೆದಾಡಿತೆ?
ಹಸಿರೆಲೆಗಳ ಮರ್ಮರ,
ಒಣಗಿದೆಲೆಗಳ ಸರಸರ,
ಹಸುಗಾಯಿ ಹಣ್ಣಾಗಿ ಮಾಗಿದನುಭವದ ಕಳೆ
ಮುಖದ ಮ್ಯಾಲೆ!
ಈ ಮರವೀಗ
ಹದ್ದಿಗೂ ನೆಲೆ, ಹಾವಿಗೂ ನೆಲೆ!

ಈಗ ಹೇಳು : ಪಾರಂಬಿಯ ಮರವ
ನಾನು ಬರೆದೆನೊ?
ನನ್ನನ್ನ ಮರ ಬರೆಯಿತೊ?