ಕಾಡುಮರದಂಥ ನನ್ನವ್ವ
ಇರುವೆ ಮೊದಲು ಆನೆಕಡೆಯಾಗಿ
ಎಲ್ಲಾ ಜೀವರಾಶಿಯ ಕತೆಗಳಿಗೆ ಆಸರೆಯಾದವಳು.
ಸಂಜೆ ಸಾಯಂಕಾಲವಾದೇಟ್ಗೆ, ಮ್ಯಾ ಲಿನ
ನೀಲನೆಮ್ಮದಿಯಲ್ಲಿ ಹಾಲು ಸುರಿದರೆ ಚಂದ್ರ-
ಇಲ್ಲಿ ಗೋಡೆಯ ಮೇಲೆ ಸದರಿ ಮರದೆಲೆ ನೆರಳು
ತೊಗಲುಗೊಂಬೆಯ ಆಟ ಕುಣಿಯುತ್ತವೆ!

ನಮಗು ಶಿವನಿಗು ಎರಡು ಶಬ್ದಗಳ ಅಂತರವಷ್ಟೆ:
‘ಒಂದಾಣೊಂದು ಕಾಲದಲ್ಲಿ’ ಕಾಲೂರುವುದೆ ತಡ
ನನ್ನವ್ವ ತನ್ನ ಅಂಬೆಗಾಲಿನ ಅಚ್ಚರಿಗಳಾದ ನಮಗಾಗಿ
ಹೆತ್ತ ಕರುಳನೆ ಕಿತ್ತು, ತೂಗು ಸೇತುವೆ ಬಿಗಿದು,
ಕೈಲಾಸಗಿರಿಯಿಂದ ಶಿವನ ಹಾಗೂ ಅವನ ಪರಿವಾರವ
ಕೆಳಗೇ, ನಮ್ಮ ಮನೆಗೇ ಎಳೆತಂದು
ಪ್ರಸಂಗ ಕುಣಿಸುವಳು!
ಕತೆ ಮುಗಿಯುವತನಕ ಶಿವಪಾರ್ವತಿ
ನಮ್ಮನೆ ಅತಿಥಿಗಳು!
ನನ್ನವ್ವ ಇದ್ದುದನೆ ರುಚಿಮಾಡಿ ಅವರಿಗೂ
ತಿನಿಸುವಳು, ಅವರೂ ಅಷ್ಟೆ: ಅರೆಹೊಟ್ಟೆ
ನೀರಂಬಲಿಗೇ ತೃಪ್ತಿಯ ತೇಗಿ ಕಥಾನಾಯಕ
ನಾಯಕಿಯರಿಗೆ ಧಾರಾಳ ವರಗಳ ಕೊಡುವವರು.

ಸುರರಿಗೆಂತೋ ಅಂತೆ ಮಾನವರಿಗೂ
ಮತ್ತು ದಾನವರಿಗೂ ಮಾತಿನ ಕತೆಗಳಾದರೆ
ತರುಮರ ಖಗಮಿಗಾದಿಗಳಿಗೆ ಹಾಡಿನ ಕತೆ!
(ನರನ ಬಾಣದ ತುದಿಯಲ್ಲೇ, ಅವನ ಭಿಡೆಯಲ್ಲೇ
ಅವು ಬದುಕಬೇಕಲ್ಲವೆ?
ಅದಕ್ಕೇ  ಈ ವ್ಯವಸ್ಥೆ!)
ಬಗೆ ಬಗೆ ಹಕ್ಕಿ ಚಿಲಿಪಿಲಿ ಸಾಲುಗಟ್ಟಿ
ಮುಗಿಲನಲಂಕರಿಸಿದರೆ,
ಅವ್ವನ ಪದಪಾದ ಪಲ್ಲವಿಗಳಲಿ ಲಯ ಮೂಡಿ
ಹಾಡು ನೇಯುತ್ತಾವೆ ತಮ್ಮ ತಾವೇ!೨

ನಿನ್ನ ಕಥಾಸರಿತ್ಸಾಗರದಲ್ಲಿ ಮುತ್ತುರತ್ನಗಳ
ಹೇರಳ ರಾಶಿಯಿದ್ದರೂ ನೀರಂಬಲಿಯ ಕತೆ ನೀಡಿ
ಕಾಪಾಡಿದಿರಿ ನನ್ನವ್ವ.
ನಿನ್ನ ಖಾಲಿ ಎಲವುಗಳಲ್ಲಿ ಸಾವಿನ ಹೊಗೆಯಾಡಿದರು
ಕಷ್ಟವೃತ್ತಿಯನಾಚರಿಸಿದರಿ ನಮಗಾಗಿ ನಗುನಗುತ್ತ.

ನಿನ್ನ ಕತೆ ಕೇಳಿ ನಮ್ಮ ಅಂಗಳದಲ್ಲೇ
ಕೈಲಾಸ ಕೆಳಬಿದ್ದು ಹಸಿರೇರಿ ಅರಳಿದ್ದ
ನೋಡಿರುವೆವು.
ಮಣ್ಣಲಡಗಿದ ಬೇರು ಮುಗಿಲ ಕನಸುಗಳನ್ನ
ಕಾಣುತ್ತಲೇ ನಾವು ಬೆಳೆದೆದ್ದೆವು.

ಮಣ್ಣ ಪಾತ್ರೆಗೇ ಎಣ್ಣೆ ಸುರಿದು ಬೆಳಕನು ನೀಡಿ
ಸಣ್ಣವಗೆ ತೋರಿದಿರಿ ದೊಡ್ಡ ದಾರಿ.
ಒಪ್ಪಾಗಿ ಬಾಳೆಂದು ಒಳ್ಳೆ ವಾಕ್ಯವ ನುಡಿದು
ಲೋಕ ಲೌಕಿಕಕೆ ನಮ್ಮ ಕಳುಹಿಸಿದಿರಿ.

ನಿನ್ನ ನೆನೆದಾಗೊಮ್ಮೆ ಹಾಡುಕ್ಕುವುದು ತುಟಿಗೆ
ಹೊಸ ಕ್ಷಿತಿಜ ಕಾಣುವವು ಕಣ್ಣುಗಳಿಗೆ.
ನಿನ್ನ ನೆನೆದಾಗೊಮ್ಮೆ ಸರಸ್ವತಿಯದೇ ನೆನಪು,
ಆಕೆಗಿಂತಾ ಹೆಚ್ಚು ನಿನ್ನ ಪ್ರತಿಭೆ!