ನಮ್ಮೂರಿಗೆ ಹೋಗಿದ್ದಾಗ
ಆಕಾಲ ಮಳೆ ಸುರಿಯುತ್ತಿತ್ತು ಒಂದೆ ಸಮ.
ಸರುವು ನಿಂತ ಮ್ಯಾಲೆ  ಊರೊಳಗೆ ಹೋದರಾಯ್ತೆಂದು
ಅಗಸೆ ಬದಿಯ ಯಕ್ಷಿಯ ಗುಡಿಯಲ್ಲಿ
ಆಸರೆಗೆ ನಿಂತೆ:

ಏನಾಗಿದೆ ಶಿವನೆ ಈ ಗುಡಿಗೆ?
ಹುಲ್ಲು ಬೆಳೆದಿದೆ ಸೂರುಗಳ ಮ್ಯಾಲೆ!
ಗೆದ್ದಲು ಕಟ್ಟಿದೆ ಬಾಗಿಲುಗಳಿಗೆ!
ಅಲೆ ಅಲೆ ಜೇಡ ಬಲೆ ಮೂಲೆಗಳಿಗೆ!
ಮಳೆ ಮೋಡಗಳಿಂದಾಗಿ ಬಾಡಿದ ಬೆಳಕಿನಲ್ಲಿ ಮೌನದ ಹೆಣ ಮಲಗಿದೆ೧

ಬಹಳ ಹೊತ್ತು ನಿಂತು ನೋಡಿದರೆ
ಮೂಲೆಯಲ್ಲೊಬ್ಬ ಬಾಲಕ ತೊಯ್ಸಿಕೊಂಡು
ಮುದುಡಿ ನಡುಗುತ್ತಿದ್ದ.
ಏಳೆಂಟು ವರ್ಷದ ಪೋರ;
ಈ ಹುಡುಗನ್ನ ಎಲ್ಲೋ ನೋಡಿರುವೆನಲ್ಲಾ ಎನ್ನಿಸಿ
ಬಾರೋ ಅಂದೆ, ಬಂದ.
ಕೈಲೇನೊ? ಅಂದೆ. ಅಂಗೈ ತೆರೆದ.
ಬಣ್ಣದ ಗೋಲಿಗಜಗ ಕಂಡುದೇ ತಗೊಂಡು
ಒಂದು ಕೈ ಆಡಿದೆ ನೋಡು-
ಚಾಲಾಕಲಿ ಹುಡುಗ ನನ್ನೊಂದಿಗೆ
ಗೋಲಿಯನಾಡತೊಡಗಿದ.
ಕಲ್ಲಾಗಿದ್ದ ಯಕ್ಷಿ
ಭುಜದ ಮ್ಯಾಲಿನ ಗಿಣಿಯ ಮೈ ಸವರಿದಳು!
ಆಟದ ಹುಕಿ ಮೈತುಂಬಿ-ಆಮ್ಯಾಲೆ
ಗೋಲಿಗಳೇ ನಮ್ಮನ್ನಾಡಿಸತೊಡಗಿದವುಇ.

ಇಂತು ಗೋಲಿಗಳಿಗೆ ಬೆಲೆಗಳ ಕಟ್ಟುತಾ,
ಬೆಲೆಗಳಿಂದ ಗೆಲ್ಲುತಾ ಸೋಲುತಾ,
ರಾಜ್ಯಗಳ ಕಟ್ಟುತಾ ಕೆಡವುತಾ
ಪೋರನ ಆರು ಗೋಲಿಯನಾಗಲೇ ಗೆದ್ದು
ಅವನರ್ಧ ರಾಜ್ಯದ ವಾರಸುದಾರನಾಗಿದ್ದೆ;
ಅರಸುತನ ಇನ್ನೂ ಗಿಟ್ಟಿರಲಿಲ್ಲ.

ಅವನ ಜೇಬಿನಲ್ಲಿನ್ನೂ ಚದುರಂಗ ದಳವಿತ್ತು,
ಆರು ಖಂಡದ ಅಖಂಡ ಗಜಗಿನ ನಿಧಿಯಿತ್ತು!
ಕೈ ಚಳಕದ ಕಾಳಗ ರಂಗೇರಿತ್ತು.

ನನ್ನ ಗಜಗಿನ ಗಜದ ಕಾಲು ತಾಗಿ
ಅವನ ಕುದುರೆ ಕಾಲಾಳಿನ ಗೋಳು ಹೇಳತೀರದು.
ಒಂಟೆಯೋ ಬಂಟನೋ ಆಪತ್ತಿಗಾಗುವುದರೊಳಗೆ
ರಾಜನ ಕತ್ತಿಗೆ ನನ್ನ ಕಾಲಾಳಿನ ಕತ್ತಿ ತಾಗಿ
ಅಸುನೀಗಿ,
ಇಗೋ ಶರಣಾಗತ ರಾಜ ಭೂಗತನಾದ೧
ಮಳೆಯ ರೂಪಕ ಅವನ ಕಣ್ಣಲಾಗಲೇ
ಕುದಿಯುತ್ತ ಸುರಿಯಲು ಹಾರೈಸುತ್ತಿತ್ತು!

ಅಳಬೇಡವೋ ಹುಡುಗ, ಗೆದ್ದುದು ನನ್ನ ಕುತಂತ್ರ;
ಸೋತವನಲ್ಲ ನೀನು.
ಎಷ್ಟು ಚೆನ್ನಾಗಿ ಆಡುವಿಯೋ ಮಾರಾಯಾ!
ಅಂಗಾಲಿನಿಂದ ನೆತ್ತಿಯ ತನಕ
ಮನುಷ್ಯರಣ್ಣಾ ನಿನ್ನವರು.
ನನ್ನವರೋ-ಆಗಲೇ ಮರಗಟ್ಟಿ ರೋಬಟ್ಟಾದವರು,
ಹೃದಯ ಮಿಡಿಯುವುದಕ್ಕೆ ಬಟನೊತ್ತಿಕೊಂಬವರು!

ಹ್ಯಾಗಿದ್ದನೋ ಹಾಗೇ ಇದ್ದಾನೆ ಹುಡುಗ,-
ತನ್ನ ರಾಜನ ಹಾಗೆ ಇವನಿಗೂ ನೇರ ನಡೆ ನುಡಿ.
ಯುದ್ಧದಲ್ಲಿ
ತಾಗದೆ ಕೊಲ್ಲುವ,
ಕಚ್ಚದೆ ರಕ್ತ ಹೀರುವ
ತಂತ್ರಗಳನರಿಯದ ಮುಗ್ಧ.

ನನ್ನ ರಾಜನೀಗ ಕಾಲಬಂಧಿ.
ಬನ್ನಿ ಹಬ್ಬದಲಿ ಉಜ್ಜಿ ತೊಳೆದ ಆಯುಧಗಳಿಗೆ
ಮೊದಲಿನ ಹದನ ಹೊಳಪುಗಳಿಲ್ಲ.
ನೇರ ಗುರಿಯಿಲ್ಲ,
ಅಡಗಿಸುತಾನೆ ಮುಪ್ಪನು ಕೂಡ!
ಜಂಗು ತಿಂದ ಇಂದ್ರಿಯಗಳ
ಸಾಣೆ ಹಿಡಿದು ಹದನವಾಗಿಸಿಕೊಂಬಾತ.
ವೈರಿಯ ದುರ್ಬಲ ಮರ್ಮಸ್ಥ ಳದಲಿ ನಿಂತು ಹೊಂಚುವುದು,
ಯಂತ್ರತಂತ್ರಾದಿಗಳ ಹೂಡಿ ಕಾದುವುದು-
ಸಿಕ್ಕರೆ ಶಿಕಾರಿ ಸಿಗದಿದ್ದರೆ ಭಿಕಾರಿ!

ನನ್ನ ಯಕ್ಷಿಗೂ ಈಗ ಬಿಳಿ ಕೂದಲು!
ಕಣ್ಣಲ್ಲಿ ಸಿಡಿವ ಬೆಂಕಿ ಬೆಳಕಿಲ್ಲ.
ವರ ಕೊಡುವ ಕೈ ಮರಗಟ್ಟಿ,
ಅವತಾರಗಳ ಕುಣಿದಿದ್ದ ಕಾಲಲ್ಲಿ
ಹುಸಿಪೆಟ್ಟಿಗೂ ಎತ್ತುವ ಶಕ್ತಿಯಿಲ್ಲ.

ಈಗ ಉಳಿದವನು ಸೆಲ್ಲಾರಿದ ಮುದುಕ.
ಸೋಲುಗಳೆದ್ದು ದುಸ್ವಪ್ನಗಳಾಗಿ ತುಳಿದಾಡಿ
ಹೃದಯದಲ್ಲಿ ಹುಣ್ಣು ತೋಡಿವೆ ಮಾರಾಯಾ-
ನಾನೀಗ ನೋವಿನ ಭಾರ ಎಲ್ಲಿಡಲೆಂದು ಸದಾ
ನೆಲವ ಹುಡುಕುವವ.

ಎಲ್ಲಿ,- ಕೊನೆಗೊಮ್ಮೆ ನೋಡುವಾ
ಬಾ ತೋರಿಸು ಶಿವಾಪುರವ:

ಎಲ್ಲಿದೆ ಶಿವಾಪುರ?