ನಾವೆಲ್ಲ ಮಲಗಿದ ಮ್ಯಾಲೆ
ಮುದಿಹದ್ದಾಗಿ ಹಾರುತ್ತಿದ್ದ ನನ್ನಪ್ಪ
ಮ್ಯಾಲೆ ಮ್ಯಾಲೆ.
ಕ್ಷಿತಿಜದಿಂದ ಕ್ಷಿತಿಜಕ್ಕೆ
ಅದರಾಚೆಗೆ ಹೋಗಿ ಸೀಮೆಯಂಚಿಗೆ,
ಮ್ಯಾಲಿನಾಕಾಶವ
ಕೆಳಗಿನ ನೆಲವ ಭೇದಿಸುತ್ತಿದ್ದ.
ನಸುಕಿನಲ್ಲಿ ನಾವೆದ್ದು ನೋಡಿದರೆ
ನಿನ್ನೆ ಮಲಗಿದ್ದಲೇ ಇರುತ್ತಿದ್ದ!

ಚಡಪಡಿಸಿದಿರಿ ತಂದೆ ಪಾದರಸದಂತೆ.
ರತಿಯಿಂದ ಸುರಿವ ಸುಖ ಸಾಕೆನಿಸಿ
ಶಿವರತಿಯ ಸುಖವರಸಿ ಹೊರಟಿರಿ ಹೊರಗೆ.
ಸುತ್ತಿಕೊಂಡ ಸುಳ್ಳುಗಳ ಕಳಚಿ
ದೇವರನೆಲ್ಲ ಅವರವರ ನಿಜದಲ್ಲಿ ಕಾಣುವೆನೆನುತ
ವಾರಕರಿ ಹೋದಿರಿ. ದಿಂಡುರುಳಿ ಭಕ್ತಿ ಯ ಮಾಡಿದಿರಿ.
ಕೊನೆಗೆ ಅದಲ್ಲ ಇದಲ್ಲ ಎನುತ
ಸಿಕ್ಕದು ಸಾಲದು ಎಂದು ಹಪಹಪಿಸಿದಿರಿ.

ಪಾದವ ಮುಟ್ಟಿ ನಮಸ್ಕರಿಸಿದೆನೆಂದಿರಿ
ವಿಠ್ಠಲನ ಪಾದಗಳೆ? ಎಂದೆ:
ಕನಕನಿಗು ಕೃಷ್ಣನಿಗು ಕಿಂಡಿಯಂತರ ಬೇಕು
ಮಗನೇ ಅಂದಿರಿ.

ಕೊನೆಗೊಮ್ಮೆ ಕೈಚಾಚಿ ಆಕಾಶಕ್ಕೆ
ಅಂಗೈಗೆ ಬಿದ್ದಂತೆ ಉರಿಯುವ ಚುಕ್ಕೆ
ಬೆರಗಾಗಿ ಜಲಜಲ ಬೆವರಿದಿರಿ;
ನೇತ್ರಾವತಿ ಕಣ್ಣೀರುಗರೆದಿರಿ.
ಮುಚ್ಚಿದ ಅಂಗೈ ಬಿಚ್ಚೆ
ಸುರಿವ ಮಳೆಯಲ್ಲಿ ಸೀಮೆಗೆಟ್ಟವರಂತೆ
ಕಣ್ಣೀರು ಬೆವರು ನೀರೊಂದು ಮಾಡಿ,
ಬಯಲಾಯಿತೋ ಬಯಲಿನ ಗುಟ್ಟೆಂದು
ಹುಚ್ಚನ ಹಾಗೆ ಕುಣಿದಾಡಿದಿರಿ!
ಬಯಲಿನ ಯಾವ ಗುಟ್ಟುಗಿಟ್ಟಿತು ನಿಮಗೆ?
ಎಲ್ಲ ಎಲ್ಲವ ಹೇಳಿ ಹಂಚಿಕೊಂಡವರು
ಇದ ಹೇಳಲಿಲ್ಲ ನನಗೆ
ಹೋದಿರಿ ತಂದೆ ಹಾಗೇನೆ.

ನೀವು ಹೋದದ್ದಕ್ಕಲ್ಲ,
ನೀವು ಹೋಗುವಾಗ ನಿಮ್ಮ ಬಳಿ
ನಾನಿರಲಿಲ್ಲವಾದ್ದರಿಂದ
ದುಃಖವಾಗುತ್ತದೆ ತಂದೆ.
ಭಕ್ತಿಯ ನಮಸ್ಕಾರ ನಿಮಗೆ.