ನಮ್ಮೂರ ನೈರುತ್ಯಕ್ಕೆ ನಿರ್ವಾಣೆಪ್ಪನ ಗುಡ್ಡ ,
ಗುಡ್ಡದ ಮ್ಯಾಲೊಂದು ಆದಿಮ ಗವಿ.
ನಿರ್ವಾಣೆಪ್ಪನಿಗು ಮುನ್ನ ಇಲ್ಲಿ ಆದಿಮಾನವ
ವಾಸವಾಗಿದ್ದ.
ಅವ ಬರೆದ ಚಿತ್ರವಿತ್ತು, ಒಳಗಿನ ಗವಿಯಲ್ಲಿ.
ಹೀಗೆ:

ಕರಿಶಿಲೆಯ ಪಡುಮಲೆಯ ಮ್ಯಾಲೆ
ಓಲಗಗೊಂಡಿದ್ದಾನೆ
ಚವತಿಯ ಚಂದ್ರಾಮ ಸ್ವಾಮಿ.
ಕೆಳಗಡೆ ಮೂಲೆಯಲ್ಲಿ ಹರಿಯುತ್ತಿದೆ
ತಿಳಿ ನೀರಿನ  ಝರಿ.
ಅದರಂಚಿಗೆ ಎದ್ದಿದೆ ಕಾಡು,
ಕಾಡಿನ ಮ್ಯಾಲರಳಿವೆ ಮುಗಿಲ ಕಡೆ ಮುಖ ಮಾಡಿ
ಕನಸು ಕಾಣುವ ಹೂವು!
ಕ್ಷಿತಿಜದಂಚಿಗೆ ಕೆಂಪು ವರ್ಣದ ಶಿಖೆ,
ಅದಕಂಟಿ ಬೆಳಕಿನ ಬೂದು ಬಣ್ಣದ ರೇಖೆ.

ಬಲಗಡೆ ಕೆಳ ಮೂಲೆಯಲ್ಲಿ
ಎತ್ತರದ ಪತ್ರಿಮರ,

ಅದರಲ್ಲಡಗಿ ಹೆದೆಯೇರಿಸಿ
ಚಂದ್ರನಿಗೆ ಗುರಿ ಹಿಡಿದಿದ್ದಾನೆ ಬೇಡರ ಹುಡುಗ!
ಅಂದಕ್ಕೆ ಗಂಧವ
ಚಂದಕ್ಕೆ ನಾಮವ ಬರೆದುಕೊಂಡಿರುವ.
ಜಡೆಗೊಂಡು ಜಿಡ್ಡುಗಟ್ಟಿದ ಕೂದಲಿಗೆ
ನವಿಲು ಗರಿ ಮುಡಿದಿರುವ

ಕೈಲಿರುವುದೊಂದೇ ಬಾಣ,
ಖಾಲಿ ಬತ್ತಳಿಕೆ ಬೆನ್ನಿಗಂಟಿರುವ ಚೆಲುವ!
ಇನ್ನೇನು ಬಾಣವ ಬಿಟ್ಟ
ಬಿದ್ದನು ಚಂದ್ರ ಎನೆ,
ಕಾಲಿನ ಬಳಿಯಾಡುತಿದೆ
ಹೆಡೆ ತೆಗೆದ ನಾಗರ ನಯದ ಹಾವಲ್ಲ, ಸಾವು!
ಮಾರುದ್ದ ಮೈಗೆ
ಹುಡುಗನ ತಲೆಯಳತೆಯ ಹೆಡೆ!
ಮಿಂಚು ಹುಳುವಿನ ಹಾಗೆ
ಮಿನ ಮಿನ ಮಿನುಗುತಿವೆ ಕಣ್ಣು!
ನೆಲದ ಮೇಲಾಡುತಿದೆ ಬಾಲ.

ಉಸಿರುಗಟ್ಟಿ ನಿಂತಿದೆ ಮೂಕ ಪ್ರೇಕ್ಷಕ ಲೋಕ!
ಇದ್ದೊಂದು ಬಾಣದಲಿ, ಇರುವಷ್ಟು ಸಮಯದಲಿ
ಚಂದ್ರನ ಗೆಲ್ಲಬೇಕೆ? ಸರ್ಪನ ಕೊಲ್ಲಬೇಕೆ?
ಗುರಿಯ ಬೆರಗಿಗೋ, ಕೆಳಗಿನ ಭಯಕ್ಕೋ
ಸಣ್ಣ ಬಾಲಕನ ಕಣ್ಣು ಉರಿದಾಡುತಿವೆ ಸೊಡರಿನಂತೆ !

ಕರಿಘನ ನಂದಿ ನಿಂತಿದೆ ಕೆಳಗೆ,
ಕೊಂಬಿನಿಂದ ಕೊರೆಯುತ್ತ ಕ್ಷಿತಿಜವನ್ನೆ!
ನಿಮಿರಿದ ಅದರ ಘನಲಿಂಗಕ್ಕೆ ನೆಲವೆ ಗುರಿಯಾದರೆ
ನೆಟ್ಟ ನೋಟಕ್ಕೆ ನಿಸ್ಸೀಮ ನೀಲಿಮವೆ ಗುರಿ;
ಪತ್ರಿಯೆಲೆ ಉದುರುತಿವೆ ಅದರ ಮ್ಯಾಲೆ!
ಬಾಲಕನಿಗೆ ಜಯ ಒದಗಲೆಂದು ಹಾರೈಸಿದ್ದೆ.

ಅವನೊಂದಿಗೆ ನಾನೂ ಕೂತಿದ್ದೆ ರಾತ್ರಿ
ಗುರಿಹಿಡಿದ ನೋಟದಗುಂಟ ನೋಡುತ್ತ,
ನಿಸ್ಸೀಮ ನೀಲಿಮವ ಭೇದಿಸುತ್ತ.
ಅವನವೇ ಬಿಲ್ಲು ಬಾಣಗಳಿಂದ
ಚಂದ್ರನ ಬೇಟೆಯಾಡಿದ್ದೇನೆ ವ್ಯರ್ಥ ,
ಕಾಲನ ಧೂಳಿನಲ್ಲಿ ಮುಚ್ಚಿಹೋಗಿದೆ ಅದೆಲ್ಲ.

ಈಗ ಗವಿಯೊಳಗೆ ಬಂದಿವೆ
ಹೊಸ ಬಣ್ಣ, ಹೊಳೆವ ವಿದ್ಯುದ್ವೀಪ.
ಮಾಯವಾಗಿದೆ ಬೇಡರ ಹುಡುಗನ ಬೇಟೆಯಾಟ.
ಒಂದಾಟ ಮುಗಿದು ಸಿದ್ಧವಾಗಿದೆ ಬಯಲು
ಇನ್ನೊಂದಾಟಕ್ಕೆ.

ಜಯ ಒದಗಲೆಂದು ಹಾರೈಸಿ ಹೊರಗೆ ಬಂದೆ.