ಪಕ್ಕದಲ್ಲಿರೋದೇ ಕರಿಮಾಯಿಯ ಗುಡಿ
ಹ್ಯಾಗಿದೆ ನೋಡು:
ಬಿರುಕು ಬಿಟ್ಟಿದ್ದರೂ ಗಟ್ಟಿ ಇದೆ ಇನ್ನೂ.

ಸತ್ಯದಲಿ ಹುಟ್ಟಿ ಸತ್ಯದಲಿ ಬೆಳೆದವಳು ತಾಯಿ.
ಹಗಲ ದೀವಟಿಗೆ,
ತಾಳೆಗರಿಯ ಬೆಳ್ಗೊಡೆ,
ಕೋಲುಗಗ್ಗರ ಕಂಚಿನ ಗುರಾಣಿಯ ಹಿಡಿದು;
ಊರಾಡಿ ಹಣ್ಣು ಹಸಿರಿನ ರೋಗಂಗಳ,
ಕರುಕುರಿಗಳ ಬೇನೆ ಬ್ಯಾಸರಿಕೆಗಳ ಹೊರಗಟ್ಟಿದವಳು.
ನಾಲ್ಕು ಕಾಲಿನ ಗದ್ದಿಗೆ
ಮೊಳಕಾಲುಮಟ ಮುಗುಳು ಮಲ್ಲಿಗೆ
ಹೂ ಸಂಪಿಗೆಯ ರಾಶಿಯಲ್ಲಿ,
ನವಿಲುಗರಿಯ ಬೆಡಗಿನ ಸಿಂಹಾಸನದಲ್ಲಿ
ಕುಂತು ಒಡ್ಡೋಲಗಂಗೊಂಡು
ಪಾದಕಾಣಿಕೆ ಪಡೆಯುತ್ತ,
ಊರವರ ಸಂಕಷ್ಟ ಪರಿಹಾರಕ್ಕೆ ಸೂಕ್ತ
ಕಾರಣಿಕ ನುಡಿದವಳು.

ಆಕಾಶದೊಂದಿಗೆ ಜಗಳಾಡಿ
ಮಳೆಗಾಳಿ ಮೋಡಗಳ ಉಡಿತುಂಬ ತಂದವಳು.
ಕ್ಷಿತಿಜದ ಜೊತೆ ವ್ಯವಹರಿಸಿ
ನಮ್ಮ ಕಣ್ಣುಗಳಲ್ಲಿ
ನಾವರಿಯದ ರೂಪ ರಸಗಂಧ
ಭರ್ತಿ ಆನಂದ ಲೋಕಂಗಳ
ಬೆಳಕಾಡಿಸಿದವಳಲು!

ಇತ್ತೀಚೆ
ಮೂಡಪಡುವಣ ಗಾಳಿ ಎದುರೆದುರೆ ಅಪ್ಪಳಿಸಿ
ಸುಂಟರಗಾಳಿ ಸುತ್ತಿ,
ಒಕ್ಕಿದ ಸುಗ್ಗಿ ಬೆಂಕಿಗಾಹುತಿಯಾಗಿ
ಕರ‍್ರೆವ್ವನ ಕಲ್ಲಿನ ಕಣ್ಣಲ್ಲಿ ನೆತ್ತರ ನೀರಾಡಿ,
ಕಾದುವ ಕೈ ಮುರಿದುಬಿದ್ದಿವೆ.
ಗುಡಿಯ ಯಾವ ಮೂಲೆಯನ್ನೇ ನೋಡು
ಮೋಡಕಾ ಬಜಾರದ ಹಾಗೆ;
ಆದಿಮದ ಮಣ್ಣಿಂದಾರಂಭಿಸಿ
ಸನಾತನ ಕಲ್ಲು ಪ್ಲಾಸ್ಟಿಕ್‌ ಪಿನ್ನು,
ಮುರಿದ ಮೂರ್ತಿ ಸವೆದ ಆಯುಧ,
ಗುರುತಳಿದ ಮೊಹರು, ತುಂಡು ಧ್ವಜಗಳು
ಪದರಿನ ಮ್ಯಾಲೆ ಪದರು…
ಎಲ್ಲ ಬಿದ್ದಿವೆಯಿಲ್ಲಿ,
ಒಂದೆ ನಂಬಿಕೆಯಡಿಯ ಗುಡಿಯಲ್ಲಿ !
ಪರಿಘ ತಿರುಗುವ ನಾಗರಿಕತೆಗಳಿಗೆ
ಇದೇ ಕೇಂದ್ರ, ಗುರಿಗಳೆಷ್ಟೊ!

ಒಡಲ ರಸದಿಂದಲೇ ನೂತು
ವಾಗ್ಜಾಲವ ನೇತ ಜೇಡನ ಬಲೆಯ ಧೂಳೊರೆಸಿ,
ಗಡಿಯಾರಕ್ಕೆ ನಿರಂತರದ ಮುಖವಾಡ ಹಾಕಿ
ಕೀ ಕೊಟ್ಟಿದ್ದೇವೆ.
ಹರಿವ ಜೇಡನ ನೆರಳು
ಗಡಿಯಾರದ ಮೇಲೆ ಪುನಃ ಬಿದ್ದಿದೆ.

ಯಾರೋ ಕರಿಮಾಯಿಗೆ ಮಂಗಳಾರತಿ ಬೆಳಗಿ
ಪದ ಗುನುಗಿ ಬಿಕ್ಕಿದ್ದು ಕೇಳಿಸುತ್ತಿದೆ.

ಈಗ ಆಕಾಶ ಮತ್ತೆ ಹಸನಾಗಿದೆ.
ಗುಡಿಯ ಮ್ಯಾಲೆ ಬಿಳಿಬಟ್ಟೆಯ ತುಂಡು
ಹಾರಾಡುತ್ತಿದೆ.

ತಾಯಿ ಸಿದ್ಧವಾಗಿದ್ದಾಳೆ
ಇನ್ನೊಮ್ಮೆ ಊರಾಡಲಿಕ್ಕೆ.