ಮುಟ್ಟಾಗಿ ಮೂಲೆ ಹಿಡಿದವಳು
ಮೂರು ದಿನದಲ್ಲಿ ಮೂರು ನೀರು ಮಿಂದು
ನಾಲ್ಕನೆಯ ನೀರಿಗೆ ಮೈಲಿಗೆ ಕಳೆದು
ಮಡಿಯುಟ್ಟಿದ್ದೇನೆ;
ತಿಳಿಮೋರೆಯಲ್ಲಿ ಕಳೆದೋರಿ
ಕಾದು ನಿಂತಿದ್ದೇನೆ ಬಾರೊ ಜಂಗಮ.
ಹಸು ಹಟ್ಟಿಗಾಗುವ ಹೊತ್ತಿಗೆ
ಕೈಭಾಷೆ ಕಣ್ಸನ್ನೆ ಮಾಡಿ ಕರೆಯುವತನಕ
ಚಿಕ್ಕ ಚಾವಡಿಯೊ ಚಿತ್ರಮಂಟಪದಲ್ಲಿ
ಕಾದಿರು ಜಂಗಮ.

ತಲೆ ಬಾಚಿ ಮುಡಿ ಕಟ್ಟಿ
ಚಂಡುಮಲ್ಲಿಗೆ ದೇವಕೇದಗೆ ಮುಡಿದೆ.
ಕಣ್ಣಿಗೆ ಕೋಲು ಕಾಡಿಗೆ ಹಚ್ಚಿ,
ಚಂದ್ರಕಾಳಿಯನುಟ್ಟು ಬಂಗಾರದ ಬಳೆಯಿಟ್ಟು,
ಸಿಂಗಾರವಾಗಿ ಕಾಯುತ್ತ ಕೂತೆ
ಜಂಗಮ ನಿನಗಾಗಿ.

ಒಂದು ಗಳಿಗೆಯಾಯಿತು
ಎರಡು ಗಳಿಗೆ ಹೋಯಿತು
ಎರಡು ಹೋಗಿ ಮೂರು ಗಳಿಗೆಯಾಗಿ
ಹೊತ್ತು ಮುಳಲುಗಿ ಕತ್ತಲಾಯಿತು,
ನೀನು ಬರಲಿಲ್ಲ ಜಂಗಮ.

ಅಂದಗೆಟ್ಟವು ನಮ್ಮ ಅಂದಗಳೆಲ್ಲವು
ತಂಗಳಾಯಿತು ನಮ್ಮ ಚೆಲುವು.
ಉರಿದುರಿದು ಎಣ್ಣೆಯಲ್ಲೇ ಮುಳುಗಿ
ಆರಿಹೋದ ಬತ್ತಿಯಂತಾಯಿತ್ತು,
ಪ್ರೀತಿಯಲ್ಲಿ ಮುಳುಗಿದ ನನ್ನ ಬಾಳು.
ಬರೆಲಾರೆಯೇನೋ ಅಲೆಮಾರಿ ಜಂಗಮಾ?

ಕನಸಿನಲ್ಲಿ ಕಾಣಿಸಿಕೊಂಡ ಜೋಗಿ ಜಂಗಮ
ಏನೊಂದನೂ ನುಡಿದಾಡದೆ
ಸೀದಾ ಪಾದವ ಬೆಳೆಸಿದ ದೇವರ ಕೋಣೆಗೆ.
ಗಬ ಗಬ ನೈವೇದ್ಯ ತಿಂದು
ಬಾಯೊರೆಸಿಕೊಂಡ!
ಭೇದಿಸಲಾರದ ಕತ್ತಲೆಯಲ್ಲಿ-
ಅದು ತನ್ನ ಉಡುಪು ಎಂಬಂತೆ
ಮಾಯವಾದ-
ಅಡ್ಡಗಟ್ಟಿದ್ದ ನನ್ನ ನಿವಾರಿಸಿಕೊಂಡು!

ಈ ದಿನ
ಗರ್ಭಗುಡಿಯಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದೆ-
ಅಗೋ ಮೂಲೆಯಲ್ಲಿ ನಿಂತಿದ್ದ
ಜಿಂಕೆಗಾಗಿ ಹೊಂಚಿದ್ದ ಹುಲಿಯಂತೆ !

ಒಂದು ಹೆಜ್ಜೆ ಹಿಂದಿಟ್ಟರೂ ಮುಂದಿಟ್ಟರೂ
ಅವ್ವಯ್ಯಾ ಹುಲಿ ಹಾರಿ ಮೈಮ್ಯಾಲೇ ಬರುತ್ತದೆ!

ಥರಥರ ನಡುಗಿ
ಕಣ್ಣಿಗೆ ಕತ್ತಲೆ ಅಡರಿ
ಕೈಯ ನೈವೇದ್ಯ ಜಾರಿ

ಜೋಕೆತಪ್ಪಿ ಕೆಳಗೆ ಬೀಳುವಷ್ಟರಲ್ಲಿ
ಹಾರಿ ಬಂದು ಜಂಗಮ ಕೈಹಿಡಿದು ನಿಲ್ಲಿಸಿದ.

ಶಿವನಿಚ್ಛೆ ಎನ್ನುತ್ತ
ನೈವೇದ್ಯವ ತಗೊಂಡು
ಬಿಲ್ವಪತ್ರಿಯಲೆ ಕೈಗಿಟ್ಟು
ಗರ್ಭಗುಡಿಯಲ್ಲಿ ಮಾಯವಾದ!

ನಿನ್ನ ಬಗ್ಗೆ ಏನೇನೋ ಹೇಳುವರು ಮಂದಿ:
ಒಂದು ಕರೆಗೆ ಓಗೊಟ್ಟು
ಎರಡನೆಯ ಕರೆಗೆ ದನಿಗೊಟ್ಟು,
ಮೂರನೆಯ ಕರೆಗೆ ಓಡೋಡಿ ಬಂದು
ಕರೆದವರೆದುರು ಧುತ್ತೆಂದು ನಿಂತುಕೊಳ್ಳುವಿಯೆಂದು.

ಸಣ್ಣ ದನಿಯಲಿ ಕರೆದೆ ,
ದೊಡ್ಡ ದನಿಯಲಿ ಕರೆದೆ,-
ನಾ ಕರೆದ ಮಾತುಗಳೆಲ್ಲ ಸುತ್ತಿರುಗಿ ಬಂದು
ನನ್ನ ಕಿವಿಗೇ ಅಪ್ಪಳಿಸುತ್ತಿವೆ.

ಎಲ್ಲ ಪ್ರಮಾಣಗಳ ಹೊಲಬುದಪ್ಪುಸುವಿಯಲ್ಲೋ
ಅಲೆಮಾರಿ ಜಂಗಮಾ.

ನಮ್ಮ ನಾಯಿ ಬೊಗಳಿದರೆ,
ಜಂಗಮ ಹೆದರಿ,
ತೇಲುವ ಮುಂಜಾನೆಮೋಡದಂಥ ಕಾವಿಯ
ಬಟ್ಟೆ ಸಮೇತ,
ಅತ್ತಿತ್ತ ಹಾರಾಡಿ ಓಡಾಡುವ ರಭಸಕ್ಕೆ
ವಾಯುಮಂಡಳ ಪ್ರಕ್ಷುಬ್ಧವಾಗುವಂತೆ
ಮಾಡಿದನೆ!

ಆತನ ನೆಗೆತ ಜಿಗಿತ
ಯಾವುದೋ ನೃತ್ಯದ ಹೆಜ್ಜೆಗಳಿಂತಿದ್ದಾವೆ!
ಲಯಬದ್ಧವಾಗಿ ಮ್ಯಾಲೆಕೆಳಗೆ ತೂರಾಡುವ ತೋಳುಗಳು
ದೊಡ್ಡ ಪಕ್ಷಿಯ ಬಲಾಢ್ಯ ರೆಕ್ಕೆಗಳಂತಿವೆ!
ಗಲಿರೆಂದು ನುಡಿದಾಡುತಿದೆ ಕಾಲಿನ ಜಂಗು!
ಕೈಲಾಸದಲಿ ಕುಣಿವ ಶಿವನೇ ಇವನೇನೆ!

ಸಾಲದು ಸಾಲದು ಅಂಗಳ  ಈ ಜಂಗಮನಿಗೆಂದು
ನಾಯಿಯ ಹಿಡಿದುಕೊಂಡೆ.

ಕನಸಿಗೆ ಅಕ್ರಮವಾಗಿ ನುಗ್ಗುವ ಆ ಪಡ್ಡೆ ಹೈದನಹ
ನೀಳ ಕೂದಲ ಗಾಳದಲಿ ಬೀಳಿಸಿಕೊಂಬಾಸೆ.
ತೋಳ ಕೋಳದಲಿ ಬಿಗಿದು
ಎದೆಯಲಗಿಂದ ಇರಿದಿರಿದು
ನಲುಗುವಂತೆ ಮಾಡುವಾಸೆ
ಯಲಿ ಅವಿರಾಮಿ ಚಡಪಡಿಸುವೆ
ಅಲೆಮಾರಿ ಜಿಂಗಮನಿಗಾಗಿ.

ಅವನ ಕಡೆಯಿಂದ ಬೀಸಿ ಬರುವ
ಸೂಸುಗಾಳಿಯ ನಡಾವಳಿಯೇ ಬೇರೆ:
ಮೆಲ್ಲ ಮೆಲ್ಲನೆ ಸ್ಪರ್ಶಿಸಿ
ಮುಟ್ಟಿದಲ್ಲಿ ಮುದ್ದಿಸಿ
ಮುದಗೊಳ್ಳುವ ಪ್ರೇಮಿಯ ಹಾಗೆ!
ಅಥವಾ
ಮೈಮರೆಸಿ ಕೆಡಿಸುವ ಅತ್ಯಾಚಾರಿಯ ಹಾಗೆ.

ಲೂಟಿಗೊಂಬ ಈ ಸುಖ ಆಹ ಸಾಲದು ಸಖ
ಬಾಯಾರಿಕೆ ತನ್ನನ್ನೇ ಕುಡಿವುದೆಂದು
ತಿಳಿದೂ ಮತ್ತೆ ಮತ್ತೆ ಕುಡಿವ ಕುಡುಕನಂತಾಗಿದೆ.
ನನ್ನ ಗತಿ. ಸಾವಳಗಿ ಶಿವಲಿಂಗಾ
ಕಳಸಿಬಾರದೆ ಜಂಗಮನ ಒಂದು ಸಾರಿ?

೧೦

ಇರು ಇರು ಬಂದಾನು
ಬಾರದಿನ್ನೆಲ್ಲಿ ಹೋದಾನು?
ಕರೆದವರಿಗೆ ಕರೆದಾಗೆಲ್ಲ ಬಂದವನು
ನೀನು ಕರೆದರೆ ಬಾರದಿರುವನೆ?
ಜಂಗಿನ ಉಲಿ ಕೇಳಿಸಿದರಾಯ್ತು ಆ ಕಡೆಯಿಂದ,
ಅವನು ಬಂದ ಹಾಗೇ ನಮ್ಮ ಬಳಿಗೆ೧

ಹುಟ್ಟಿದಾಗಿನಿಂದ ಕಾದವರಿದ್ದಾರಮ್ಮ, ನಿಂದೇನು ಮಹಾ!
ಕಾದ ಕೆಲವರ ಕಣ್ಣಲ್ಲಿ ಹೂ ಬಿದ್ದು
ಹುಣ್ಣಾಗಿ ಕುರುಡಾಗಿದ್ದಾರೆ! ಅದು ಬೇರೆ ಕಥೆ.
ನನ್ನನ್ನೇ ನೋಡು
ಕೂತಿದ್ದೇನೆ ಹೀಗೇ ಅಂಗೈಯಲ್ಲಿ ತಲೆಯಿಟ್ಟುಕೊಂಡು,
ಅನುಮಾನಗಳನ್ನ ಮೆಲುಕು ಹಾಕುತ್ತ. ಪುಣ್ಯಕ್ಕೆ
ಎಲ್ಲರಿಗೂ ವಿದಾಯ ಹೇಳಿಯೇ ಬಂದಿದ್ದೇನೆ.

ನಮಗೊಂದೆ ಸಮಾಧಾನ;
ತಡ ಮಾಡಿದವರು ನಾವಲ್ಲ.

೧೧

ಮಡುವಿನಲ್ಲಿ ತೇಲಾಡುವ ಕಮಲದ ಹೂ ಕಂಡೆ!
ನೀರಿಗಿಳಿದು ಹಿಡಿಯ ಹೋದರೆ,
ಮೊಳಕಾಲುಮಟ ನೀರಿಗೆ ಹೋಯಿತು ಹೂವು!
ಮೊಳಕಾಲುಮಟ ನೀರಿಗಿಳಿದು ಹಿಡಿಯ ಹೋದರೆ
ಸೊಂಟದಮಟ ನೀರಿಗೆ ಹೋಯಿತು ಹೂವು!
ನೆತ್ತಿಯಷ್ಟು ನೀರಿಗೆ ಹೋಯಿತು ಹೂವು!

ನೆತ್ತಿಯಷ್ಟು ನೀರಿಗಿಳಿದು ಹೂ ತಬ್ಬಿದರೆ
ಶಿವಸುಖರಸವನ್ನರೋ ಮೈತುಂಬ ಎರಚಿ
ಜಲದಲ್ಲಿ ಜಲಜಲ ಬೆವರಿ ನೋಡಿದರೆ
ಹೂವಿನ ಬದಲು ಹಾದರಿಗ ಜಂಗಮಸ್ವಾಮಿಯ
ಕಂಡು ಗಾಬರಿಯಾದೆ!

ನಾಚಿ ನಿಂತವಳ ಸೆಳೆದುಕೊಂಡು
ಆದಿಮದ ಹಂಬಲಗಳ ಅಲ್ಲಲ್ಲೆ ನಿಲಿಸಿ ತಣಿಸುತ
ಮುರಿದ ಮಾತುಗಳ ಕನವರಿಸುತ್ತ
ಮಗ್ಗಲು ಬದಲಿಸಿದ.

ಮಗ್ಗಲು ಬದಲಿಸಿದವನು
ನಾನೂ ಇಲ್ಲ ಅವನೊ?
ಇಲ್ಲವೆ ನನ್ನೊಳಗಿನ ಅವನೊ?

೧೨

ರಾತ್ರಿ
ಆಗೋ ಆ ಮರದಾಚೆ
ಯಾರೋ ಟಾರ್ಚ್ ಹಿಡಿದು ನಿಂತಿದ್ದರು,
ಗಾಬರಿಯಾದೆ!

ಬಾಗಿಲು ಬಡಿಯದೆ ನೇರ
ರೂಮಿನೊಳಗೇ ಬಂದ.
ಆಗಲೇ ಗೊತ್ತಾಯಿತು;
ಬಂದವನು ಚಂದ್ರಮ,
ಅಲ್ಲಲ್ಲ ಜಂಗಮ!

೧೩

ಸಿರಿಗಿರಿಯ ಶಿಖರದ ಮ್ಯಾಲೆ
ಅವನ ಅರಮನೆ,
ಬುಡದಲ್ಲಿ ನನ್ನ ಮನೆ.

ನಾನು ಹತ್ತುತ್ತಿದ್ದೆ ಬೆಟ್ಟದ ಮೆಟ್ಟಿಲನು,
ಆತ ಇಳಿಯುತ್ತಿದ್ದ ಕೆಳಗೆ.
ನದರು ನದರಿಗೆ ತಾಕಿ ಚಕಮಕಿಯ ಕಿಡಿ ತಾಗಿ
ಗೊತ್ತಾಯ್ತು ನಾ ಹುಡುಕುವಾತ ಇವನೆ!

ನಿಂತು ನೋಟವ ನನ್ನ ಮುಖದಲ್ಲೆ ಕೀಲಿಸಿದ
ಮುಗುಳು ನಗೆ ನಗುತ್ತಿದ್ದ ಒಂದೆ ಸವನೆ.
ಗಂಟಲೊಳಗಡೆ ಹೂತ ಮಾತು ಹೊರಬರಲಿಲ್ಲ
ನಾನು ಆತನ ಪರಿಘ ಸುತ್ತುತ್ತಿದ್ದೆ.

೧೪

ನಿನ್ನನ್ನ ಪಂಜರದಲ್ಲಿಟ್ಟಾತ
ಹಸಿರುಗಣ್ಣಿನ ರಾಕ್ಷಸನಾತ.
ಜಂಗಮನ ವಿಷಯ ಆತನಿಗೆ ಗೊತ್ತು!
ಅಗೊ ಬಂದ, ಕೇಳಿದೆಯಾ ಅವನ ಮಾತ?
ಹೊಸನಾತ! ಹೊಸನಾತ!

೧೫

“ಆ ಜಂಗಮನ ಹೆಸರೇನು?”

“ನೀನು ಕಾಡಿಗೆ ಹೋಗಿ
ಯಾವುದೇ ಮರ ನೋಡು:
ಅದರ ಮ್ಯಾಲೆ ಅವನ ಹೆಸರು ಕೊರೆದಿದೆ.
ಮರ ಬೆಳೆದಂತೆ ಅವನ ಹೆಸರೂ
ಬೆಳೆಯುತ್ತಿದೆ-
ನನ್ನಲ್ಲಿ ಮತ್ತೂ ಮಣ್ಣಲ್ಲಿ!”

೧೬

ಆಗದಾಗದಾಗದೆಂದು ಮೂರು ಮೂರು ಮಾತಂದು
ಪೂಜಾಮನೆಯ ಬಾಗಿಲಿಗೆ ಬಂದು ಹೊಸ್ತಿಲಿಗೆ ಕಾಲಿಟ್ಟು
ಪುಡಿ ಧೂಳು ಚೆಲ್ಲಿ,
“ಎಲಗೆಲಗೇ, ನಮ್ಮ ಕಥೆಯಲ್ಲಿ
ಆ ಜಂಗಮನ್ಯಾಕೆ ಇಣುಕಿದ?”
-ಎಂದು ನೊರನೊರನೆ ಕೋರೆ ಹಲ್ಲು ಕಡಿದು
ನೆತ್ತರುಗಣ್ಣು ಕಿಸಿದು
ಕೆಂಚುಮೀಸೆ ಕೆದರಿದ.

೧೭

“ಎಲ್ಲಿದಾನವನು?”
“ಎಲ್ಲಿ ಅಂತ ಹೇಳಲಿ?
ಎಲ್ಲದರಲ್ಲಿದಾನವನು.”
“ಏನವನ ವಯಸ್ಸುಇ?”
“ನಿತ್ಯ ಇಪ್ಪತ್ತೈದು”
“ಎಲ್ಲ ಜಾರಚೋರರ ವಯಸ್ಸೂ ಅಷ್ಟೆ.
ಮೋಸ ಮಾಡ್ತೀಯಾ ಗಂಡನಿಗೆ?”
“ಮೋಸ ಮಾಡುತ್ತಲೇ ಇದ್ದೇನೆ:
ಕಣ್ಣಿಂದ ನೋಡ್ತೇನೆ: ಹೇಸಿಕೆ ಬರುತ್ತದೆ.
ಕಿವಿಯಿಂದ ಕೇಳ್ತೇನೆ: ವಾಕರಿಕೆಯಾಗುತ್ತದೆ.
ಆದರೆ ಸಂತೋಷ ವ್ಯಕ್ತಪಡಿಸ್ತೇನೆ.
ಹೀಗೆ ಪ್ರತಿಸಲವೂ ಹುಸಿ ಸಂತೋಷಗಳ
ಅಭಿನಯಿಸಿ ಮೋಸ ಮಾಡುತ್ತಲೇ ಬಂದಿದ್ದೇನೆ.
ನಿನಗೂ ನನಗೂ.”
“ಈಗಲೇ ತುಂಡರಿಸಬೇಕೆನಿಸುತ್ತದೆ.”
“ಬೇಗ ಮುಗಿಸು ಇನ್ನಷ್ಟು ಮೋಸ
ಹೋಗುವ ಮುನ್ನ.”

೧೮

ಎಡದ ಕೈಯಲಿ ಗುರಾಣಿ
ಬಲದ ಕೈಯಲಿ ಕತ್ತಿ ಹಿಡಿದು,
ಕುದುರೆಯ ನೆಗೆತ ನೆಗೆಯುತಾ,
ಮದ್ದಾನೆಯ ತಾಗು ತಾಗುತಾ,
ಸಿಂಗನ ಕುಣಿತ ಕುಣಿಯುತಾ ಕೇಕೆ ಹಾಕಿದ.

ಮ್ಯಾಲಿನ ಸ್ವಾಮಿಯ
ಕೆಳಗಿನ ಭೂಮಿಯ ನೆನೆದು
ಜಂಗಮನ ಕ್ಷೇಮ ಹಾರೈಸಿದಳು!

೧೯

ಎಚ್ಚರಗೊಂಡೆಯಾ ಮಾದೇವೀ?
ರಾಕ್ಷಸ ಬರುತಿದ್ದಾನೆ!
ನಿನ್ನ ನೀ ಕಾಪಾಡಿಕೊ ಮೊದಲು.
ನೀನೆ ಸಾಕಿದ್ದ ಗಿಣಿ ಬಾ ಎಂದು ಕರೆಯುತಿದೆ,
ಹೊರಡು ಅದರ ಹಿಂದಿನಿಂದ.
ಪತ್ರೀಬನ ಎದುರಾಯಿತೇ-?
ಎಡಬಲ ನೋಡಿಕೊಂಡು ಕಾಲಿಡು ಒಳಗೆ.
ಇಲ್ಲೆಲ್ಲೊ ಕೂತಿದ್ದಾನು ಜಂಗಮನು,-
ಹಕ್ಕಿಪಿಕ್ಕಿಯ ಹಿಕ್ಕೆಯ ಜಡೆಯಲ್ಲಿ ಹಾಕಿಸಿಕೊಳುತ,
ಹಸುವಿನ ಮೊಲೆಯ ಹುಲಿಮರಿಯೊ ಬಾಯಿಗಿಡುತ್ತ.
ಎದ್ದು ಬರಲಾರ ನಿನ್ನ ನೆರವಿಗೆ.

ಮೈ ಮೆತ್ತಿರುವ ಹುತ್ತವ ಕೊಡವಿ
ಜಂಗಮನ ಪಡೆದು
ನಿನ್ನ ಮತ್ತವನ ಕೂಡಲ ಸಂಗಮವಾಗಬೇಕು.
ನೆನಪಿರಲಿ,
ನಿನ್ನ ಕಥೆ ಹಿಂಡಿ
ಬರಿ ಒಂದು ಕಣ್ಣೀರ ಹನಿ ಪಡೆಯಬಾರದು  ನಾವು.
ಅಗೊ ಗುಡಿ ಬಂತು.
ಗರ್ಭಗುಡಿ ಸೇರಿಕೊಂಡು ಚಿಲಕವ ಹಾಕು.
ಜೋಕೆ; ನಡೆ ಒಳಗೆ.

೨೦

ಹಿಗ್ಗಿನ ಬಾಗಿಲು ತೆಗೆದು
ಗರ್ಭಗುಡಿಯ ಒಳಹೊಕ್ಕಳು ಮಾದೇವಿ.
ಅಂಗಾಲು ಮೊದಲಾಗಿ
ನಡುನೆತ್ತಿ ಕಡೆಯಾಗಿ
ತೆಕ್ಕೆ ಹಾದು ತಕ್ಕೈಸಿಕೊಂಡಿತು
ಬೆಳಕು.

“ಜಂಗಮ ಬಂದಿದ್ದೇನೆ;
ಬಾಗಿಲು ತೆರೆ ಭದ್ರೇ.”

ಎಲ್ಲ ಎಲ್ಲದರ ಅಲ್ಲಮ, ನನ್ನ ಜಂಗಮ
ತೋಳಿನಲ್ಲಿದ್ದಾನೆ. ನನಗಿನ್ಯಾರೊ ಬೇಡವೆಂದು
ಶಿವಲಿಂಗದ ಮುಖವ ತನ್ನ ಕಡೆ ತಿರುಗಿಸಿಕೊಂಡು
ಬೆವರೊರೆಸಿದಳು!

 

ವಿ.ಸೂ.: ನಮ್ಮ ಗೋಕಾಕ ಸುತ್ತಮುತ್ತಲ ನಾಡಿನಲ್ಲಿ ನಡೆದ ಕಥೆಯಿದು: ಗೌಡನೊಬ್ಬ ಅನಾಥಳಾದ ಮ್ಲೇಂಛ ಹುಡುಗಿಯನ್ನು ಮತಾಂತರಿಸಿ ಮಾದೇವಿಯೆಂದು ಹೆಸರು ಕೂಗಿ ಮದುವೆಯಾದ. ಆದರೆ ಮಾದೇವಿ ಭಿಕ್ಷಕ್ಕೆ ಬರುತ್ತಿದ್ದ ಒಬ್ಬ ಜಂಗಮನನ್ನು ಇಷ್ಟಪಟ್ಟಿದ್ದಳು. ಗೌಡನಿಗಿದು ಗೊತ್ತಾಗಿ ಜಂಗಮನನ್ನು ಕೊಲೆ ಮಾಡಲು ಹೊಂಚಿದಾಗ, ಓಡಿಹೋದ ಜಂಗಮ ಹಿಂದಿರುಗಿ ಬರಲಿಲ್ಲ. ಮಾದೇವಿ ಗೌಡನಿಗೆ ಹೆದರಿ ಓಡಿಹೋಗಿ ಜಂಗಮನಿರುತ್ತಿದ್ದ ಹಾಳು ದೇವಾಲಯ ಹೊಕ್ಕು ಒಳಗಿನ ಚಿಲಕ ಹಾಕಿಕೊಂಡಳು. ಯಾರು ಕರೆದರೂ ಬಾಗಿಲು ತೆರೆಯದೆ ಅಲ್ಲಿಯೇ ಐಕ್ಯಳಾದಳೆಂದು ಐತಿಹ್ಯವಿದೆ.

ಈ ದುರಂತ ಘಟನೆಯ ಬಗ್ಗೆ ಚಿಕ್ಕಂದಿನಲ್ಲಿಯೇ ಕೇಳಿ ಕರಗಿದ್ದೆ. ಕವಿಮಿತ್ರ ಶಿವಪ್ರಕಾಶ್‌ ಇದನ್ನು ಬರೆಯಲು ಪ್ರೇರಣೆ ನೀಡಿದ್ದರಿಂದ ಬರೆದೆ. ಅವರಿಗೆ ವಂದನೆಗಳು.