ವಿ.ಸೂ. ಕೌಜಲಗಿ ನಿಂಗವ್ವ ಶ್ರೀಕೃಷ್ಣಪಾರಿಜಾತದ ದೊಡ್ಡ ಕಲಾವಿದೆ, ಅಷ್ಟೇ ದೊಡ್ಡ ಸಂತಳು ಕೂಡ. ಕಳೆದ ಶತಮಾನದವಳು. ಅಂದಿನ ಶ್ರೀಕೃಷ್ಣ ಪಾರಿಜಾತಕ್ಕೆ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಅಪಾರ ಜನಪ್ರಿಯತೆ ತಂದುಕೊಟ್ಟವಳು. ಶ್ರೀಕೃಷ್ಣ ಪಾರಿಜಾತಕ್ಕೆ ನಿಂಗವ್ವನ ಆಟವೆಂದೇ ಖ್ಯಾತಿಯಿತ್ತು. ಒಂದು ಸಲ ಆಕೆಯ ಕಂಠ ಕೆಟ್ಟುಹೋಗಿ ಹಾಡುವುದೇ ಅಸಾಧ್ಯವಾಗಿದ್ದಾಗ ಆಟ ಬಿಟ್ಟಳು. ಕೊನೆಗೆ ಗುರುವಿನ ನೆನಪಾಗಿ ತೌರಿಗೆ ಬಂದು ಗುರುಕೃಪೆಯಿಂದ ಕಳೆದುಕೊಂಡಿದ್ದ ಹಾಡನ್ನು ತಿರುಗಿ ಪಡೆದಳೆಂದು  ಐತಿಹ್ಯವಿದೆ. ಆ ಸಂದರ್ಭದ ಪದ್ಯವಿದು.

ಗುರು: ಮಾತು ಮಾತಿಗೆ ಒಮ್ಮೆ ಉಸಿರುಗರೆಯುತ್ತಿರುವೆ
ಸೋತು ಮಾತಾಡುತ್ತಿ ಯಾಕೆ ಮಗಳೆ?
ಭೇದಿಸಲರಿಯೆನು ನಿನ್ನ ವೇದನೆಯನ್ನು
ಹೇಳು ನೀ ಏನನ್ನು ಕಳೆದುಕೊಂಡೆ?

ನಿಂಗವ್ವ: ಹಕ್ಕಿಯ ದನಿಯನ್ನ ಕಾಡಿನ ಹಸಿರನ್ನ
ಕಣ್ಣಿನ ಬೆಳಕನ್ನ ಕಳೆದುಕೊಂಡೆ.
ಸತ್ಯವ ಕಳಕೊಂಡೆ ಆತ್ಮವ ಕಳಕೊಂಡೆ
ಹಾಡೂವ ಹಾಡನ್ನೆ ಕಳೆದುಕೊಂಡೆ.

ಗುರು: ಇದೇ ಮಣ್ಣಿನ ಮಗಳು ಇಲ್ಲಿಯೇ ಬೆಳೆದಿದ್ದೆ
ಇದೆ ಕಾಡಿನಂಗಳದಿ ಹಾಡು ಕಲಿತೆ
ಕಲಿತ ಹಾಡುಗಳನ್ನ ತೌರಿನ ಮುಡಿಗಿರಿಸಿ
ಕುಣಿದ ಹಾಡುಗಳನ್ನ ಎಲ್ಲಿ ಮರೆತೆ?

ಹಸುಗಾಯಿ ಹಣ್ಣಾಗಿ ಮಾಗಿರುವ ಅನುಭವದ
ಕಳೆಯುಂಟು ಮುಖದ ಮ್ಯಾಲೆ.
ಹಾಗೆಯೇ ನಿನ ಹಾಡು ಮೊಗ್ಗು ಮಲ್ಲಿಗೆಯಾಗಿ
ಮತಿವಂತರೆದೆಯಲ್ಲಿ ಸುರಿದವಲ್ಲೆ

ನಿಂಗವ್ವ ಎಂಬಾಕಿ ಸೀಮೆಗೇ ದೊಡ್ಡಾಕಿ
ಇಡಿ ನಾಡಿಗೇ ಅಧಿಕ ನಿನ್ನ ಕೀರ್ತಿ.
ಚಿಕ್ಕೆ ಚಂದ್ರಾಮರು ಹೆಚ್ಚು ಹೊಳೆಯುತ್ತಾರೆ
ನೀ ಹಾಡಿದರೆ ಅವರ ಎದುರಿನಲ್ಲಿ.

ತೌರಿಗೇ ಬಂದಿರುವೆ ಹಿಂದಿರುಗಿ ಇನ್ನೊಮ್ಮೆ
ಕಳೆದ ಹಾಡುಗಳನ್ನ ಪಡೆಯಲಿಕ್ಕೆ.
ಹಾಡು ನಿನಗೂ ಬೇಕು, ಹಾಡಿಗೂ ನೀ ಬೇಕು
ಮರವಿಲ್ಲದೇ ಬೆಂಕಿ ಬೆಳಗಲುಂಟೆ ?

ನಿಂಗವ್ವ: ಚಿತ್ತಕ್ಕೆ ಹಿತಕರದ ಕೃಪೆಯ ಮಾಡಿದಿ ಗುರುವೆ
ನಿನ್ನ ಮಾತೆಂಬುದು ಹೊಳೆವ ಜ್ಯೋತಿ
ಕಳೆದ ಹಾಡುಗಳನ್ನ ಗುರುತಿಸಿ ಪಡಕೊಂಡೆ
ಗುರುವಿನ ಸನ್ನಿಧಿಯ ಬೆಳಕಿನಲ್ಲಿ.