ಏ ಕುರುಬರಣ್ಣಾ
ಸತ್ಯುಳ್ಳ ಶರಣಾ
ಕಾಪಾಡೊ ಕುರಿಗಳನಾ!! ಮಾಡುವೆ ನಮನಾ||

ಗಿರಿಯ ಏರಿಗೆ ಬಂದು ಕುರಿ ಹಿಂಡು ನಿಂತಾವ
ಕೋಲು ಕುರುಬನ ಕಾವಲಿರೆದೆ|
ನಿಲ್ಲಲಾರೆವು ಶಿವನೆ ಸುಳಿಯಲಾರೆವು  ಮುಂದೆ
ದಮ್ಮಯ್ಯು ದಯವಾಗೊ ತಂದೆ||

ಕಾಡೆಂದು ನಂಬಿದ್ದು ಮರಳುಗಾಡಾಗಿತ್ತು
ಹುಸಿಹೋಗಿ ಹಸಿರಿನ ಕನಸು
ಬಾಯಾರಿ ಮುಗಿಲಿಗೆ ಬಾಯಿ ಬಿಡತೇವಯ್ಯ
ಕತ್ತು ಚೆಲ್ಲಿವೆ ಕುರಿಯ ಹಿಂಡು||

ಹಳೆಯ ದೊಡ್ಡಿಯ ಗುರುತ ಮರತೇವು ಕಳಕೊಂಡು
ಮತಿಗೆಟ್ಟು ಮರುಳಾದೆವಣ್ಣಾ|
ಹಲವು ಹಂಬಲಿಸೇವೊ ದಯವಾಗೊ ಸ್ವಾಮಿಯೇ
ಹೊತ್ತಿಗೆ ಒದಗಿ ಬಾರಣ್ಣಾ||

ಕೋಟಿ ದೇವರ ಪೈಕಿ ಒಬ್ಬನಾದರು ಇಳಿದು
ಮೂಡಬಾರದೆ ಕ್ಷಿತಿಜದಲ್ಲಿ?
ಬಣ್ಣದ ವೇಷದಲಿ ಸಣ್ಣ ಅವತಾರವನು
ಕುಣಿಯಬಾರದೆ ಎಂದು ಹಲುಬಿ||

ಪಡುವಣದ ಹುಲಿರಾಯ ಕುರಿಯ ವೇಷವ ಧರಿಸಿ
ನಮ್ಮೊಳಗ ತಾನಡಕವಾದ|
ಕಲ್ಯಾಣದ ಬೆಳಕಾರಿ ಪ್ರಳಯದಲಿ ನಿಂತೇವೊ
ಬ್ಯಾಟಿಗೊಂಬುವ ಮಿಕದ ಹಾಂಗ||

ಸಂದೇಹ ಸುಳಿದಾವು ಎಲ್ಲರ ಎದಿಯೊಳಗ
ಕುರಿ ಯಾರೊ ಹುಲಿ ಯಾರೊ ಶರಣಾ|
ಏ ಕುರುಬರಣ್ಣಾ ಸತ್ಯುಳ್ಳ ಶರಣಾ
ಕಾಪಾಡೊ ಕುರಿಗಳಾನ||

ಗೊತ್ತುಗುರಿ ಇರಲಿಲ್ಲ ದಾರಿ ಮೊದಲೇ ಇಲ್ಲ
ಸುತ್ತ ನೋಡಿದ್ದೆಲ್ಲ  ಹರಿದಾರಿಯೇ
ಬಯಲ ದೊಡ್ಡಿಗೆ ಬಾಗಿಲಿಲ್ಲ, ಆಗಲೆ ಒಬ್ಬ
ಕುರುಬ ಬಂದನು ನಾವು ನಿಂತಲ್ಲಿಯೇ||

ಏನೊ ಒಂದಿತ್ತಣ್ಣ ಗತ್ತು ಎನುವಂಥಾದ್ದು
ಅವನ ನುಡಿ ನಡೆ ನಿಲುವು ನೋಟ ಶುದ್ಧ|
ತನ್ನೊಡಲಿನಿಂದಲೇ ನೂಲು ತೆಗೆಯುತ್ತಿದ್ದ
ತನ್ನ ಬಟ್ಟೆಯ ತಾನೆ ನೇಯುತ್ತಿದ್ದ||

ಜಾತ್ಯಾ ಕುರುಬನ ಹಾಗೆ ಹೆಗಲ ಕಂಬಳಿಯಿತ್ತು
ನೆಲ ಬೆವರುತಿತ್ತು ಕಾಲೂರಿದಲ್ಲಿ.
ಗುರುತು ಹಿಡಿದಿರಬಹುದೆ ಕುರಿಯ ವೇಷದ ಹುಲಿಯ?
ಕಿಡಿ ಹಾರಿದವು ಅವನ ನೋಟದಲ್ಲಿ.

ಚಾಂಗುಬಲ ಜಯವೆಂದು ಕುಣಿದಾಡಿ ಕೇಳಿದೆವು
ನಮ್ಮ ಕಾಯುವ ಕುರುಬ ನೀನಲ್ಲವೆ?
ಅಲ್ಲವೆಂದನು ಅವನು! ನಾವು ಕಿವುಡರ ಹಾಗೆ
ನಟಿಸಿದೆವು ಅನುಮಾನ ಸುಳಿಯದಂತೆ.

ಅವನ ಕಂಬಳಿ ಮ್ಯಾಲೆ ಚಿತ್ರ ಚಿತ್ತಾರಗಳ
ಬಿಡಿಸಿದೆವು ಅವನು ಖುಶಿಗೊಳ್ಳಲೆಂದು
ಕರುಳು ಮಿಡಿಯುವ ಹಾಗೆ ಸ್ವಾಮಿಯೇ ಎಂದಾಗ
ಕರುಣೆಗೊಂಡವನಾತ ಹೀಗೆಂದನು:

“ಯಾರ ಹುಡುಕುವಿರವನು ನಿಮ್ಮಲ್ಲೆ ಇದ್ದಾನೆ
ಹುಲಿಗಳೇ ನೀವೆಲ್ಲ ಅನುಮಾನವೇ?
ನೀವು ನಿಂತಿರುವ ಈ ನೆಲವೆಲ್ಲ ನಿಮ್ಮದೇ
ಕಟ್ಟಿರಯ್ಯಾ ದೇಶ ಕೋಶ ಸೀಮೆ.”

ಕೇಳಿದ್ದೆ ಕೈಗಳಲಿ ಹುಲಿಯುಗುರು ಮೂಡ್ಯಾವೋ
ಹಲ್ಲು ಮಸೆದಾಡಿದರು ಮಂದಿ!
ಒಬ್ಬರೊಬ್ಬರ ಕೊಚ್ಚಿ ಕೊಸರಾಡಿ ತಿಂದಾರೊ
ಹೇಳಕೇಳವರಿರದ ದೊಂದಿ!

ಏ ಕುರುಬರಣ್ಣಾ
ಸತ್ಯುಳ್ಳ ಶರಣಾ
ಕಾಪಾಡೋ ಕುರಿಗಳಾ|| ಮಾಡುವೆ ನಮನಾ||