ಇದ್ದಕ್ಕಿದ್ದಂತೆ ಮುಖದ ತುಂಬಾ ಚಾಳೀಶಿನ, ಬಕ್ಕದಲೆಯ
ಮುದುಕನೊಬ್ಬ ಸಮುದ್ರದಲೆಗಳ ರಭಸದಲ್ಲಿ ಬಂದು,
ಬಿಡ್ತಿಗೆ ಕುಣಿದು ಓ ಹೋಯ್‌! ಎಂದರೆ ಯಾರೆನಿಸುತ್ತದೆ ನಿಮಗೆ?
ಇವರು ಕಡಲ ಕಿನಾರೆಯ ಚಂದದ ನಗೆಯ ಅಡಿಗರಲ್ಲವೆ?
ಇದು ಅಡಿಗರೇ ಹೌದು, ಕನ್ನಡಕರೊಬ್ಬರೇ ಅಡಿಗರು; ಬೇರಿಲ್ಲ.

ಹೌದೆಂಬ ವಯಸ್ಸಿನಲ್ಲೇ ಹೊಸ ನಾಡ ಕಟ್ಟಲು ಹೋಗಿ
ಆಚೆ ಸೀಮೆಯ ಮೋಹ ಮುರಳಿಗೆ ಮರುಳಾದವರು.
ಎರಡು ಲೋಕಗಳ ಗೂಢವನರಿತು
ಒಂದರ ಎದುರಿಗೆ ಇನ್ನೊಂದನ್ನಿಟ್ಟು ಮಯ ಮರೆತಾಗಲೇ
ಕವಿತೆ ಕಣ್ಣಾಗಿ ಕೆಳಗಿಳಿದು ಬಂದು ತಮ್ಮನ್ನ
ನೋಡಿಕೊಂಡವರು.
ಅಸಲಿ ನಕಲಿಗಳ ನಡುವೆ ಚಿನ್ನದ ಗೆರೆ ಕೊರೆದು
ಹದ್ದುಗಳ ನಿರ್ಧರಸಿದವರು.
ಕಾವ್ಯವನ್ನೇ ಜೀವನಾಧಾರ, ಅಸ್ತ್ರ ಆಧಾರ,
ಹಂಕಾರ ಹೂಂಕಾರಾದಿಗಳ ಮಾಡಿಕೊಂಡು
ಬೀಸಿಬಂದ ಬಿರುಗಾಳಿಗಳ ಕಾವ್ಯದಿಂದಲೇ ಎದುರಿಸಿದವರು.
ಕವಿ ನೀನಾದರೆ ನಾನಲ್ಲ; ನಾನಾದರೆ ಕವಿ ನೀನಲ್ಲವೆಂದು
ಠೇಂಕರಿಸಿ ಎದುರಾಳಿಗೆ ಏಟು ಕೊಟ್ಟವರು.

ಹರವಂಚಿ ಬಿದ್ದಿದ್ದಾವೆ ನೀವು ಟಂಕಿಸಿದ ಪ್ರತಿಮೆಗಳೆಷ್ಟೊ
ಅರ್ಥಕ್ಕಾಗಿ ಕಾಯುತ್ತ. ಹುಡುಕುತ್ತ ಹೋದರೆ ನಾವು
ನಮ್ಮ ಕನ್ನಡಿಗಳಲ್ಲಿ ನಿಮ್ಮದೇ ಬಿಂಬವ ಕಂಡು
ಭೂತವೆಂದು ಬೆದರಿದ್ದೇವೆ.
ಆಗ ನೀವಾಗಿ ಮುಂದೆ ಬಂದು ಪರ್ಯಾಯ ಪರಿಧಿಗಳ
ಗೌರವಿಸಿ ಹೇಳಿದಿರಿ:
ಬಿರುಗಾಳಿಗ್ಯಾಕೆ ಹೆದರುತ್ತೀರಿ? ಕನಸಿವೆ ನಿಮ್ಮಲ್ಲಿ
ಕಾಲನಿಗಿಂತ ತರುಣವಾದ ಕಾವ್ಯವಿದೆಯೆಂದು
ನನ್ನಂಥವರ ಮುನ್ನಡೆಸಿ ಹೊಸಕ್ಷಿತಿಜ ತೋರಿದವರು.
ಕಂಚಿನ ಮೂರ್ತಿಯಾಗಿ ಸರ್ಕಲಲ್ಲಿ ನಿಲ್ಲುವುದಕ್ಕೆ
ಅರ್ಹರಾದರೂ, ಸೊಗಸಿನ ನುಡಿಗಳ ಪೇರಿಸಿ ನೀವು
ಗುಡಿ ಕಟ್ಟಿಕೊಳ್ಳಲಿಲ್ಲ ನಿಮ್ಮ ಸುತ್ತ. ಶ್ರೋತೃಸುಖ
ನುಡಿಯಲಿಲ್ಲ.

ಅಡಿಗರೇ,
ನನ್ನ ಶೋಧನೆಗೆ ಕೆಳಗಿಳಿದಾಗ ಮೊದಲು ಸಿಕ್ಕವರೇ
ನೀವು; – ಕೂತಿದ್ದೀರಿ ಕುಡಿಯಲುಗದ ಸೊಡರು
ಕಣ್ಣು ಪಿಳುಕಿಸದೆ, ಮಾತಾಡದ ನ್ಯಾಯಾಧೀಶರಂತೆ.
ಈಗಲೂ ನಮ್ಮೆಲ್ಲ ಕಾರ್ಯಕ್ರಮಗಳ ಸನ್ನಿಧಿಯ
ನೀವೇ ವಹಿಸುತ್ತಿದ್ದೀರಿ; ಮುಂದೆಯೂ.
ನಿಮಗೆ ನಮಸ್ಕಾರ.