ಹೆಣ್ಣೆಂದರೆ ನೀರು.
ಹನಿ ಹನಿ ಕೂಡಿ ಹಳ್ಳವಾಗಿ ಹೊಳೆಯಾಗಿ ಹರಿದು
ಗುಡ್ಡ ಬೆಟ್ಟಗಳಲ್ಲಿ,  ಹೊಲಗದ್ದೆಗಳಲ್ಲಿ ಹಸಿರಾಗಿ,
ಹಿತ್ತಲ ಬೇಲಿಗೆ ಹಾಗಲ ಬಳ್ಳಿಯಾಗಿ,
ಕಾಯಾಗಿ ಮಕ್ಕಳ ತಾಯಾಗಿ
ಅತ್ತೆ ಕತ್ತೆಯೂ ಆಗಿ,
ನೆರೆ ಬಂದು ಕೊಳೆ ಇಸ ಕೊಚ್ಚಿ ಸಾಗರ ಸೇರಿ
ಮತ್ತದೇ ಇತ್ಯಾದಿ ಉಗಿಯಾಗಿ ಹೊಗೆಯಾಗಿ
ಋತುವಾಗಿ ಋತುಮತಿಯಾಗಿ ಮನೆ ಬೆಳಗಿ
ಪದಾರ್ಥದ ಕವನವಾಗಿ,
ಕರ್ತೃ ಕರ್ಮ ಕ್ರಿಯಾಪದವಾಗಿ,
ಅರೆ ಕೊರೆಗಳ ಪೂರ್ಣ ವಿರಾಮವಾಗಿ
ಕೊಚ್ಚಿಕೊಂಬ ಮಕ್ಕಳ ವಿಶೇಷಣವಾಗಿ
ತಾನು ಮಾತ್ರ ಆರಕ್ಕೇರದೆ ಮೂರಕ್ಕಿಳಿಯದೆ
ಮನೆಯ ನಿಭಾಯಿಸುತ್ತಾಳೆ,
ಎಲ್ಲವೂ ಗಂಡಿನಿಂದಲೇ ಆಯಿತೆಂಬಂತೆ
ಗಂಡಿನಹಂಕಾರದ ಹೂಂಕಾರವಾಗಿ,
ಲೋಕದ ಓಂಕಾರವಾಗಿ!