ನಮ್ಮಪ್ಪನ ವಯಸ್ಸಿನವರು ಗಾಂಧೀಜಿ,
ನಾನವರ ನೋಡಿರಲಿಲ್ಲ; ನನ್ನಪ್ಪ ನೋಡಿದ್ದ.
ಆದರೆ ಕಲ್ಪನೆಯಲ್ಲಿ ಮಾತಾಡಿದ್ದೇನೆ ಬೇಕಾದಷ್ಟು ಸಲ:
ಹರಟಿದ್ದೇವೆ, ನಗಾಡಿದ್ದೇವೆ, ಪೋಲಿ ಜೋಕು ಹೇಳಿ-
ಕೇಳಿದ್ದೇವೆ. ನಾನೊಮ್ಮೆ: ನಿಮ್ಮ ಕನಸಿನಲ್ಲಿ ಕಸ್ತೂರ್ ಬಾ
ಎಂದಾದರೂ ಬಂದಿದ್ದಾರೆಯೇ ತಾತ? ಅಂತ ಕೇಳಿದ್ದಕ್ಕೆ
ಕತ್ತಲುಗಿ ಬೊಚ್ಚು ಬಾಯಲ್ಲಿ ಹೋ ಅಂತ ಕಿವಿಯಿಂದ
ಕಿವಿತನಕ ನಕ್ಕದ್ದನ್ನು ನಾನೆಂದೂ ಮರೆಯಲಾರೆ.
ಹಲ್ಲಿಲ್ಲದ ಅವರ ನಗೆ ನನಗಿಷ್ಟ.
ನಗೆಯಿಲ್ಲದ ಅವರ ಮುಖ ಕಲ್ಪಿಸಿಕೊಳ್ಳುವುದೂ ಕಷ್ಟ.

ಬಲುಗಟ್ಟಿ ಮುದುಕ. ತಪ್ಪು ಕ್ಷಮಿಸುತ್ತಿರಲಿಲ್ಲ.
ಬಯ್ದು ಬುದ್ಧಿ ಹೇಳುತ್ತಿದ್ದ. ಸುಖ ದುಃಖ ಕೇಳುತ್ತಿದ್ದ.
ಕೈಯಾರೆ ಕಾಡು ಕಡಿದು ರಸ್ತೆ ಮಾಡಿದ್ದ. ಮುಂದಾಳಾಗಿದ್ದ
ಬೆಂಬಲಿಗರಿಗೆ. ಕಂದೀಲು ಹಿಡಿದ ಕೈ ಎತ್ತಿ ಹಿಂದೆ
ಉಳಿದವರಿಗೆ ದಾರಿ ತೋರಿದ್ದ. ಆಗಲೇ ಶುರುವಾಯ್ತು: ಚೌಕಾಶಿ!
ಕತ್ತಲೆ ಬೆಳಕುಗಳ ಬೇರ್ಪಡಿಸಿರೆಂದು ಹಟ ಹಿಡಿದರು
ಕೆಲರು. ಬದುಕಿಗೆ ಎರಡೂ ಕಣ್ಣು ಬೇಕೆಂದು
ಪಟ್ಟು ಹಿಡಿದ ಮುದುಕ ಕೊನೆತನಕ ಸಡಿಲಿಸಲಿಲ್ಲ.
ಆಗಲೇ ಅವರಲ್ಲೊಬ್ಬ ಗನ್ನು ಹಿಡಿದು ಢಮಾರೆನ್ನಿಸಿದ.
ಗಾಂಧೀಜಿ ಹೇ ರಾಂ ಎಂದು ಸತ್ತಾಗ ಏನಾಯ್ತು ಗೊತ್ತಲ್ಲ?
ಗರ್ಭಗುಡಿಯಲ್ಲೊಬ್ಬ ದೇವರಿಲ್ಲ!

ಶ್ರೀಗಂಧದಲ್ಲಿ ಸುಟ್ಟು ಬೂದಿಯ ಸಮಾಧಿ ಮಾಡಿದರು;
ಪಕ್ಕದಲ್ಲಿ ಆಳುದ್ದ ಮೂರ್ತಿಯ ನಿಲ್ಲಿಸಿದ್ದಾರೆ.
ಮೂರ್ತಿಗೂ ಆಳುದ್ಧ ನೆರಳಿದೆ, ಅವರಿಗಿದ್ದಂಥೆಯೇ!
ಗಾಂಧೀಜಿಯಂತೆ ಅವರ ಮೂರ್ತಿಯೂ ಅನಾಥವೇ.
ರಕ್ಷಿಸುವವರಿಲ್ಲ, ಧೂಳಲು ಕೊಳೆ ಕಳೆವ ಸಿಬ್ಬಂದಿಯಿಲ್ಲ.
ಮಂತ್ರಿ ಬಂದು ಏಣಿಯೇರಿ ಮಾಲೆ ಹಾಕಿ ಭಾರೀ
ಭಾಷಣ ಬಿಗಿವಾಗಷ್ಟೆ ಮೂರ್ತಿಯ ತಲೆಯ ಮೇಲೆ
ಕಾಗೆ ಕೂರುವುದಿಲ್ಲ.

ಸಾಯಲೇಬೇಕಾಗಿತ್ತು ಸತ್ತಿರಿ ಗಾಂಧೀಜಿ, ಹುತಾತ್ಮರ
ಅಜೆಂಡಾದಂತೆ ಮಾಡುವುದ ಮಾಡಿ ಸತ್ತು ಮಹಾತ್ಮರಾದಿರಿ;
ಇಲ್ಲದಿದ್ದರೆ ಈಗಿದ್ದ ಮರ್ಯಾದೆಯೂ
ಇರುತ್ತಿರಲಿಲ್ಲ.

ನೀವು ಉಸಿರಾಡುವ ಮಾನವರ ನಂಬಿದಿರಿ. ಅವರು
ಸಂಕೇತವ ನಂಬಿದರು. ಅದಕ್ಕೇ ಬೆಲೆ ಬಂದ ಮೇಲೆ
ಸಂಕೇತವೇ ಉಸಿರಾಡುವುದೆಂದು ನಂಬಿಸಿದರು.

ಸಮಾಧಿಯಲ್ಲಿ ಶಾಂತಿ ಸಿಕ್ಕಿದೆ ನಿಮಗೆ.
ನಿಜ ಹೇಳಬೇಕೆಂದರೆ ಅವತಾರಗಳಿಂದ ನಾವೇನೂ
ಕಲಿಯಲಿಲ್ಲ, ಕೊಚ್ಚಿಕೊಳ್ಳುವುದನ್ನು ಬಿಟ್ಟು.
ಉಳಿದಂತೆ ನೀವಿದ್ದಾಗಿನದೇ ಜಗಳ ಮುಂದುವರಿಸುವುದು,

ನಮ್ಮ ಪಾಲಿಗಿದ್ದದ್ದೇ-
ಎಂದು ವಿದಾಯ ಹೇಳಿದ್ದೆ.

ಈಗ ಗಾಂಧೀಜಿ ಬೆಳೆಯುತ್ತಿದ್ದಾರೆ-ಇಬ್ಬರಲ್ಲೂ:
ನನ್ನಲ್ಲಿ ಉಸಿರಾಟವಾಗಿ, ಅವರಲ್ಲಿ ಸಂಕೇತವಾಗಿ!
ವರ್ಷಕ್ಕೊಮ್ಮೆ ತಪ್ಪದೆ ಬರುತ್ತಾರೆ ಗಾಂಧೀಜಿ ನನ್ನ
ಕಲ್ಪನೆಗೆ. ಆ ದಿನ ಹಳೆಯ ಹರಟೆಗಳ ಸುರು
ಮಾಡುತ್ತೇವೆ ಮತ್ತೆ,
ಮಂತ್ರಿ ಬಂದು ಏಣಿಯೇರಿ ಮೂರ್ತಿಗೆ ಮಾಲೆಹಾಕಿ
‘ಕತ್ತಲೆ ಬೆಳಕುಗಳ ಬೇರ್ಪಡಿಸುವುದು ಸುಲಭ
ಅದೆ ನಮ್ಮ ಮೊದಲ ಕಾರ್ಯಕ್ರಮ’ ಎಂದು ಭಾಷಣ
ಬಿಗಿದಾಗ, ಇಬ್ಬರೂ ಬಿದ್ದು ಬಿದ್ದು ನಗುತ್ತೇವೆ.

ನಕ್ಕು ನಕ್ಕು ಗಾಂಧೀಜಿ ಇತಿಹಾಸದಲ್ಲಿ ಬೀಳುತ್ತಾರೆ,
ನಾನು ನಿಮ್ಮ ಮುಂದೆ ಈ ಪದ್ಯ ಓದುತ್ತೇನೆ.
ಜೈಹಿಂದ್‌!