ಮುಪ್ಪು ಅಡರಿದ ಸಂಜೆ ಹಣ್ಣೆಲೆಯ ಹಾಸಿನಲಿ
ಪಯಣವಾದವರಿವರು ನಿವೃತ್ತರು.
ಕೀಲೆಣ್ಣೆಯಿಲ್ಲದೇ ಕಿರುಗುಡುವ ಕೈಕಾಲು
ಉಸಿರಿಂದ ದಿನಗಳನು ಎಣಿಸುವವರು.

ಕಾಲರಾಯನ ತಾಜಾ ಲೀಲಾವಿಲಾಸಗಳ
ಪ್ರದರ್ಶಕ ಪಳೆಯುಳಿಕೆ, ಮಾದರಿಗಳು.
ಸಾವು ಬದುಕಿನ ನಡುವೆ ನಿರ್ಲಿಪ್ತ ನಿಲ್ದಾಣ
ವೃದ್ಧಾಶ್ರಮದ ಹಳೆಯ ಪ್ರಜೆಗಳಿವರು.

ಎಷ್ಟು ಗಡಿಬಿಡಿ ಗೌಜು ಕಾಂಪೌಂಡಿನಾಚೆಯಲಿ!
ವ್ಯವಹಾರವಂಚಿತರು ಅದರೊಂದಿಗೆ.
ಎಲ್ಲಾ ವಿದಾಯಗಳ ಹೇಳಿಯೇ ಬಂದವರು,
ನಡೆಯಲಾರದ ನಾಣ್ಯ ಆ ಲೋಕಕೆ.

ಬೆಳಗಾಯಿತೆ? ಸುಪ್ರಭಾತಕ್ಕೆ ಏಳುವರು,
ಅವೇ ಅಂಗೈಗಳನು ನೋಡಕೊಳುತ.
ಅದೆ ಬೆಳಗು ಅದೆ ಗಾಳಿ ಎಲ್ಲ ಹಳಸಲು ಬದುಕು,
ಅವೇ ಆಕಳಿಕೆಗಳ ಆಕಳಿಸುತ.

ಒಮ್ಮೊಮ್ಮೆ ಹೊಂಬಿಸಿಲು ಹಸಿರಲ್ಲಿ ಹಸೆ ಹುಯ್ದು
ಸಣ್ಣ ಕುಸಿಗಳ ನೆನಪು ತರುವದುಂಟು.
ನೆನ ನೆನೆದು ನವೆ ಆನಂದಗಳು ಹೊರಬಂದು
ಬೆರಳು ಬೆರಳಿಗೆ ಹೆಣೆದು ಕುಣಿವುದುಂಟು.

ಬಿಸಿಲು  ಬಲಿತರೆ ಮರೆತ ವಾಸ್ತವದ ಅರಿವಾಗಿ
ಅರಳು ಮರುಳಿನ ಆಟ ಮುಂದುವರಿಸುವರು.
ಮುದಿನಾಯಿಗಿಂತ ತಡಮಾಡಿ ಮಲಗುತ್ತಾರೆ,
ನಿದ್ದೆ ಮುಟ್ಟದು ಇವರ ಕಣ್ಣುಗಳನು.

ಸೋಲುಗಳು ಶಾಪಗಳು ಬೇಡವೆಂದರು ಬರುವ
ಬಚ್ಚಿಟ್ಟ ನನ್ನಿಗಳು ಗಾಬರಿಗಳು-
ದಟ್ಟ ಕತ್ತಲೆ ಗಟ್ಟಿ ಶಿವಲಿಂಗವಾದಂತೆ
ತಟ್ಟುವುದು ಮುಚ್ಚಿಟ್ಟುದೆಲ್ಲವನ್ನು.

ಫೋನು ರಿಂಗಿಸಿದಾಗ ಎತ್ತಿದರೆ ಆಚೆ ತುದಿ
ಮೌನ ತಾಳಿದರಿವರ ಗೋಳು ಬೇಡ.
ಹೋ ಬಂತು ಕರೆ ಎಂದು ಹೌಹಾರಿ ನಡುಗುವರು
ಏಕಾಂತ ಮೂಲೆಯಲಿ ಹುದುಗಿಕೊಳುತ.

ಬದುಕು ಸಾವಿನ ನಡುವಿನೀ ಖಾಲಿ ಕಂದಕವ
ಕರುಣೆಯಲಿ ದಾಟಿಸುವರುಂಟೆ ಇಲ್ಲಿ?
ಚೌಕಾಶಿಗವಕಾಶವಿಲ್ಲ ಕಾಲನ ಜೊತೆಗೆ
‘ಬದುಕ ಮನ್ನಿಸು ಪ್ರಭುವೆ’ ತೆರೆ ಬೀಳಲಿ.