ಗೊತ್ತಲ್ಲ ನಿಮಗೆ ಬಿಚ್ಚೋಲೆ ಗೌರಮ್ಮ?
ಕೆಲವೇ ಬಿಳಿಕೂದಲು, ಮಧ್ಯೆ ಬೈತಲು
ಮೂಗುತಿ ವಜ್ರದೋಲೆ ಕಾಸಿನ ಸರ ಎಂಟುತೊಲೆ!
ನೆಪ್ಪಾಯಿತೆ?
ಕಮಳದ ಕಂಪನಿಯವರು ವಿದೇಶೀ ದಳ್ಳಾಳಿಗಳಿಗೆ
ಪಾರ್ಟಿ ಕೊಟ್ಟರು ಇಂಡಿಯಾ ಇಂಟರ್ ನ್ಯಾಷನಲ್‌ ಹೋಟಲಲ್ಲಿ.
ಆಮಂತ್ರಣವಿತ್ತು ಗೌರಮ್ಮನಿಗು.
ಹುಬ್ಬು ಕತ್ತರಿಸಿ, ತುಟಿಗೆ ತುಟಿಕಟ್ಟಿಗೆ, ಕೆನ್ನೆಗೆ ಕೆಂಬಣ್ಣ
ಕಣ್ಣಿಗೆ ಕಾಡಿಗೆ ತೀಡಿ,
ಸನಾತನವ ಆಧುನಿಕಗೊಳಿಸಿಕೊಂಡು ಬಂದರೆ-
ಭಾರತಾಂಬೇ ಎಂದು ಅಡ್ಡಬಿದ್ದು ಪರಿಚಯಿಸಿದರು
ಅದೇ ಕಮಳದ ಕಂಪನಿಯವರು!
ಜೊತೆ ನಿಂತು ಫೋಟೋ ಹಿಡಿಸಿಕೊಂಡರು ವಿದೇಶೀಯರು.
ಆಮೇಲೆ ‘ನೊರೆಗರೆವ ವಿಸ್ಕಿ ಸೋಡಾ’ ಸರಬರಾಜು
ಕೈ ಕೈ ಹಿಡಿದು ಕುಣಿವ ಮೋಜು.

“ಬನ್ನಿ ನಾನೂ ಕುಣಿವೆ ನಿಮ್ಮೊಂದಿಗೆ”
ಎಂದರು. ಯಾರು? ಬಿಚ್ಚೋಲೆ ಗೌರಮ್ಮನವರು!
ಕೈ ಮುಗಿದು ಹಿಂಜರಿದರು ವಿದೇಶೀ ಹೈಕಳು.

ಇನ್ನೊಮ್ಮೆ ಕೂಗಿದರು ಗೌರಮ್ಮನವರು-
“ಬನ್ನಿ ನಾನೂ ಕುಣಿವೆ ನಿಮ್ಮೊಂದಿಗೆ.”
ದೇಶೀ ಹೃದರು  ಪಿಸುನುಡಿ ಬದಲಿಸಿಕೊಂಡು
ಮೂಲೆ ಸೇರಿದರು.
ಸೋಲದ ಗೌರಮ್ಮ
ತೋಳು ಚಾಚಿ ಇಂಗ್ಲಿಷಿನಲ್ಲೇ ಗದರಿದರು:
“ಬನ್ನಿರೋ ಕುಣಿವೆ ನಿಮ್ಮೊಂದಿಗೆ
ಯಾವುದೂ ರೋಗವಿಲ್ಲ ನನಗೆ!”

ಕೈ ತಟ್ಟಿ ನಗುತ ದೂರ ಸರಿದರೆಲ್ಲರೂ.
ಯಾರೊಬ್ಬರೂ ಬರಲಿಲ್ಲ ತಾಂಬೂಲ ಕೊಡಲು.
ಕಣ್ಣೀರುಗರೆದರು ಗೌರಮ್ಮನವರು!