ಪ್ರಳಯದ ಬಿರುಗಾಳಿ ಬೀಸಿ
ಮದ್ದಾನೆಯಂಥ ಧೂಳೆಬ್ಬಿಸಿ
ಕ್ಷಿತಿಜಗಳ ಆವರಿಸಿ
ನೆಲಮುಗಿಲಿಗೇಕಾಗಿ
ಮಿಂಚಿನ ಶಲಾಖೆ ಫಳ್ಳನೆ ಹೊಳೆದು ಸ್ಫೋಟಿಸಿದಾಗ
ಸಿಡಿಲು ಬಡಿದದ್ದು ಎಲ್ಲಿ ಯಾರಿಗೆ ಎಂದು
ತಿಳಿಯಲೇ ಇಲ್ಲ.
ಅರೆಗಳಿಗೆ ನಮ್ಮ ಉದ್ಗಾರ ನಮಗೇ ಕೇಳಿಸದಂಥ
ಸ್ಮಶಾನಮೌನ. ಆಮೇಲೆ ಕಂಡಿತು:
ಅಂಗಳದ ಆಲದ ಮರ ಬುಡಮೇಲಾಗಿ ಬಿದ್ದಿತ್ತು!
ನೆತ್ತಿಯ ಸುಳಿಯಿಂದ ಬಡ್ಡಿಬೇರಿನವರೆಗೆ ಸೀಳಿತ್ತು!
ಆಮೇಲೆ ವ್ಯವಹಾರ ಸುರುವಾಯ್ತು.

“ಅಜ್ಜನ ಅಜ್ಜ ಲವನಜ್ಜ ನೆಟ್ಟ ಅನಾದಿಮರವೆಂದು,-
ಆಯುರ್ವೇದ ಇದರೆಲೆ
ಹಾಡುವ ಹಕ್ಕಿಗಳ ಹಸಿರುಯ್ಯಾಲೆ
ಬೆಳ್ದಿಂಗಳಲ್ಲಿ ಯಕ್ಷಿಯರ ನೆಲೆ
ಆಹಾ ಇದು ಇರೋದು ನಮ್ಮ ಅಂಗಳದಲ್ಲೆ!”
-ಎಂದು ಉಬ್ಬಿ ಕೊಬ್ಬಿದ ನಮ್ಮ ಹಿರೀಕರೆ,
“ನೋಡುತ್ತಿರಿ, ಸಾಮಾನ್ಯವಲ್ಲ, ಈ ಮರ ಬಿದ್ದದ್ದು
ದಾಖಲಾಗುತ್ತದೆ ಇತಿಹಾಸದಲ್ಲಿ!
ಮಾರಿದರೆ ಎಷ್ಟು ಬಂದೀತು ಮಹಾ! ಆದರೂ
ಅಜ್ಜ ನೆಟ್ಟ ಆಲದ ಮರ-ಎಂದ ಮೇಲೆ
ಆಶೀರ್ವಾದವೆಂದಾದರೂ ನಮನಮಗೆಲ್ಲಾ
ನಮ್ಮ ನಮ್ಮ ಪಾಲು ಬರಲೇಬೇಕಲ್ಲ!”
ಎಂದಾಡುತ್ತಿದ್ದಾಗ-
ಹುಚ್ಚನೊಬ್ಬ ಹೇಳಿದ:
“ಹೌದು ಹೌದು ಇತಿಹಾಸದಲ್ಲಿ
ದಾಖಲಾಗುತ್ತದೆ, ಬಿದ್ದ ಮರವ ಮಾರಿ
ನೀವು ಕಳ್ಳೆಪುರಿ ತಿಂದದ್ದು ಸಹ.”