ದಿಲ್ಲಿಯೆಂಬ ದಿಲ್ಲಗಿ
ಕಟ್ಟಿಸಿದ ಹಲ್ಲಿನಲಿ ದಿಲ್ಲಗಿಯಾಡುವ ಮತಲಬಿ
ಹ್ಯಾಗೆ ಹೊಳೆಯುತ್ತಾಳೆ ನೋಡು:
ಈಗಷ್ಟೆ ಟಂಕಿಸಿ ತಂದ
ಹಸಿರು ಖೋಟಾ ನೋಟು,
ಆಹಾ ಗಿಲೀಟು!

ಬ್ರಾಂದಿ ಕುಡಿದಾಗೊಮ್ಮೆ ಗಾಂದಿ ಎನ್ನುತ
ಮೊಗಮ್ಮಾಗಿ ದಮ್ಮೆಳೆದು
ಚಿಟಿಕೆಯ ರಿದಮ್ಮಿನಲಿ
ಸಿಗರೇಟಿನ ಬೂದಿ ಕೊಡವುತ,
ಮೈಮರೆತು ಕೂತ ನಿನ್ನ ಕಣ್ಣಿಗೆ ಕಿಡಿ ಸಿಡಿಸಿ,
ಮೊಸಳೆ ಕಣ್ನೀರು ಸುರಿಸಿ,
ಅದರಲ್ಲೇ ನೀರಾವರಿ ಮಾಡಿ,
ಥರಾವರಿ ಚಳ್ಳೆಹಣ್ಣು ಬೆಳೆದು
ಸುಗ್ಗಿಯೊ ಒಕ್ಕುವವಳು.

ಪ್ರಜಾಪ್ರಭುತ್ವಕ್ಕೆ ಬೀರೆರೆಯುತ
ಮುಲಾಜಿಲ್ಲದೆ ಚರಿತ್ರೆಯ ಪುಟಗಳ
ಗಲೀಜು ಮಾಡುತ
ಮೋಜು ಮಾಡುವವಳು.

ದಿನಾ ಮದುವೆ ಈ ನಿತ್ಯ ಮುತ್ತೈದೆಗೆ.
ಅಂದಾದುಂದಿ ತಿಂದುಂಡು ತೂರಾಡುವ
ಕುಲಗೆಟ್ಟ ವೋಟಿನ ರಾಜಕಾರಣಿಗಳ ದಿಬ್ಬಣ.
ಅವನವನಿಗೆ ಅವನವನ ಖಯಾಲಿಯ
ಪಂಚೇಂದ್ರಿಯಗಳಿಗೆ ಪ್ರತ್ಯೇಕ ಸುಖ ಕೊಡುವ
ವಿವಿಧ ಭಾರತಿಯಾಗಿ
ಹರ್ಷದ ಡೋಜು ಕೊಡುವೀ
ಖುಶಿ ಬೀಸುವ ಗಿರಣಿಗೆ
ಸೋಬಾನೆ ಹೇಳಿರೇ
ಮೀಡಿಯಾಂಗನೆಯರೇ!