ಯಾವ ದೇಶವಿದು?
ನೆಲದಲ್ಲಿ ಹುಲ್ಲು ಹುಟ್ಟಿಲ್ಲ!
ಬಾನಲ್ಲಿ ಚಿಕ್ಕೆ ಮೊಳೆತಿಲ್ಲ!
ಭೂಮಿ ಆಕಾಶ,
ಕಲಬೆರಕೆಯಾಗಿವೆ
ಹಗಲು ರಾತ್ರಿ!
ಎಷ್ಟೊಂದು ಕೆಂಪು ಚುಕ್ಕೆಗಳು
ಈ ದೇಶದ ನಕಾಶದಲ್ಲಿ!

ಪ್ರಕ್ಷುಬ್ಧವಾಗಿದೆ
ವಾಯುಮಂಡಲ
‘ಹೊಸನಾತ ಹೊಸ ನಾತ’.
ಕೊಟ್ಟಿಗೆಯ ಕರು
ಕೊಟ್ಟಿಗೆಯಲ್ಲೇ
ತೊಟ್ಟಿಲ ಹಸುಳೆ ತೊಟ್ಟಿಲಲ್ಲೇ
ಕತ್ತು ಚೆಲ್ಲಿವೆ!
ಹರಿಯದ ನದಿಯ ದಡದಲ್ಲಿ
ಮೀನು ತೇಲಾಡಿವೆ.
ಕಾಲ ಮೇಲೆ ನಿಂತಿವೆ ಬಾವಲಿ
ಮರಕ್ಕೆ ನೇತು ಬಿದ್ದಿವೆ ನವಿಲು!
ಹೂತು ಹೋಗಿವೆ
ಆದ ಹೋದ ಎಲ್ಲ ಕತೆ.

ಒಬ್ಬನೇ ಅಲೆದಾಡುತ್ತೇನೆ
ಊರಿನ ತುಂಬ.
ಊದಿದರೊಡೆವ
ನೀರಮೇಲಿನ ಗುಳ್ಳೆಯ ಥರದ ಜನ,
ಹೂಂಕರಿಸಿ ಹಂಕಾರಗಳ ಎರಚಾಡುವ
ಭಾರೀ ಭಾರೀ ಜನ.
ಗುರುತು ಹಿಡಿಯೋದಿಲ್ಲ ಯಾರೊಬ್ಬರೂ,
ಓಗೂಡುವುದಿಲ್ಲ ನಾನು ಕರೆದರೂ.

ಮುಟ್ಟಿದರೆ ಮುಖ ಎತ್ತಿ ನೋಡುವುದಿಲ್ಲ,
ಅಡ್ಡ ಬಂದರೆ ತಡೆಯುವುದಿಲ್ಲ,
ದಾಟಿ ಹೋಗುತ್ತಾರೆ ಎದುರಿನಲ್ಲೇ
ಕ್ಯಾರೇ ಮಾಡದಂತೆ
ನಾನಿಲ್ಲಿ ಹುಟ್ಟಲೇ ಇಲ್ಲವೆಂಬಂತೆ.

ನಾವು ನಂಬಿದ ಒಬ್ಬ ದೇವರಿಲ್ಲ
ನಂದಿ ಹೋಗಿದೆ ದೇವರ ಮನೆಯ
ನಂದಾ ದೀಪ.

ರಾತ್ರಿ ನಿದ್ದೆಯೂ ಬಾರದೆ
ಒಬ್ಬನೇ ಕೂತಿರುತ್ತೇನೆ;
ಮಲಗಿದೆಲ್ಲರ ಮುಖಗಳ
ನೋಡುತ್ತ,
ನನಗೆ ನಾನೇ ಮತ್ತು ಎಲ್ಲರಿಗೂ
ಶ್ರದ್ಧಾಂಜಲಿ ಕೊಟ್ಟುಕೊಳ್ಳುತ್ತ.