ಅಯ್ಯಾ ಗೋಡ್ಸೆ;
ಎದ್ದೇಳಯ್ಯಾ ಬೇಗ, ಸಿದ್ಧನಾಗು.
ಜನವರಿ ಮೂವತ್ತಲ್ಲವೆ ಇವತ್ತು?
(ಅಥವಾ ದಿನಾ ಜನವರಿ ಮೂವತ್ತೇ-ಈ ದೇಶಕ್ಕೆ)

ಕೊಲ್ಲ ಬಂದವರೆದುರು ಚೆಲ್ಲಿ ಮುಗುಳುನಗುವ
ಮೈಮರೆಸುವ ಗಾಂಧೀ ಟ್ರಿಕ್ಕು ಗೊತ್ತಲ್ಲ ನಿನಗು?
ಗಾಂಧಿಗೂ ಗೊತ್ತಿದೆ ಅವನ ಬೊಚ್ಚು ನಗು
ಎಲ್ಲದಕ್ಕೂ ಉತ್ತರವಲ್ಲವೆಂದು.ಆದರೂ ಒಡೆಯಲಾರದ ಒಗಟು ಗಾಂಧೀನಗು.
ನಮಗೋ ಸಮಯವೆಲ್ಲಿದೆ ಒಗಟು ಒಡೆಯಲು?
ಅದಕ್ಕೇ ಗಾಂಧೀಜಿಯ ನಗೆ
ನಮಗೆ ಹಗೆ.

ನಿನಗೂ ಗೊತ್ತು ಇವತ್ತಲ್ಲ ಜನವರಿ ಮೂವತ್ತು.
ಆದರೂ ದಿನಾ ಆಚರಿಸಬೇಕಲ್ಲ
ಗಾಂಧೀಜಿಯ ಕೊಂದ ಕಥೆಯ
ಹಾಯ್‌ ರಾಮಾ ವ್ಯಥೆಯ?

ದಿನಕ್ಕೊಬ್ಬ ಗಾಂಧಿ, ಗಾಂಧಿಗೊಬ್ಬ ಗೋಡ್ಸೆಯ ಹುಡುಕಿ
ಸಿಕ್ಕದಿದ್ದಲ್ಲಿ ನಾನೊ ಇಲ್ಲವೆ ಅವನೊ ಗೋಡ್ಸೆಗಳಾಗಿ
ಗುಂಡು ಹಾರಿಸಬೇಕು. ಹಾರಿಸಿದರೆ-
ಧಗಧಗಿಸುವ ದಿಗಂತ
ಹೊಗೆಯಾಡುವ ರಸ್ತೆ
ಆಹಾಹಾ ಯೂರಿಯಾ ಬೋಫೋರ್ಸು
ಹವಾಲಾ ಸಿಫಾರ್ಸು
ಶಸ್ತ್ರಾಸ್ತ್ರ ಪೈಪೋಟಿ ದೀಪಾವಳಿ ಪಟಾಕಿ…

ದಿನಾ ಸಾಯುವ ಕರ್ಮ ಗಾಂಧಿಗೆ
ಕೊಲ್ಲುವ ಕರ್ಮ ನಮಗೆ ತಪ್ಪಿದ್ದಲ್ಲ.
ದೇಶಕ್ಕಾಗಿ ಇದು ಹೆಚ್ಚಲ್ಲ.

ಆಮೇಲೊಂದು ಶ್ರದ್ಧಾಂಜಲಿ ಒದರುವದು-ಅದೂ ನಿತ್ಯದ್ದೆ:
“ಸತ್ತುಹೋದರು ಗಾಂಧಿ
ಆಕಾಶಕ್ಕೆ ಹೊಗೆಯಾಗಿ, ಭೂಮಿಗೆ ಬೂದಿಯಾಗಿ!
ಕಲ್ಯಾಣದ ಬೆಳಕೆಲ್ಲಿ ಹೋಯಿತು ರಾಮ ರಾಮಾ!”
ಈಗ ಜನಗಣಮನ ಹಾಡಿ ಮನೆಗೆ ನಡೆ.

ತಕರಾರು ಬರಬಹುದು ಗಾಂಧೀ ಕಡೆಯಿಂದ
ಇನ್ನೇನಂತೆ ಆ ಮುದಿಯನಿಗೆ?
ಶಾಲೆ ಕಾಲೇಜುಗಳಿಗೆ ರಜ ಹಾಕಿ
ಮಾಡುವುದಿಲ್ಲವೆ ಅವನ ತಿಥಿ, ಜಯಂತಿ?
ಅವನ ಹೆಸರಿಟ್ಟಿಲ್ಲವೆ ಬೀದಿ ಭವನಗಳಿಗೆ?
ಬೇಕಾದರೆ ವಿಧಾನಸೌಧವೇ ತನ್ನ ಸಮಾಧಿ ಎಂದುಕೊಳ್ಳಲಿ
ನಮಗೇನಂತೆ.
ನೇರನುಡಿಯಲ್ಲಿ ಹೇಳುವುದುಚಿತ:
ನೋಡಿ ಗಾಂಧೀಜಿ,-
ನೀವು ಸತ್ತದ್ದಕ್ಕೆ ಭೂಗೋಳದ
ಕಿರುನಗೆಯೂ ಮಾಸಿಲ್ಲ ಸ್ವಾಮಿ.
ಕ್ರಾಂತಿಯೆಂದದ್ದೆಲ್ಲ ಕಸವಾಗಿ
ತಿಪ್ಪೆಯಾಗಿದೆ ದೇಶ; ಕಾಣದೆ?

ಸ್ವಾಮೀ ನಮ್ಮಲ್ಲನೇಕರ ಕಣ್ಣಲ್ಲಿ
ಸುರಿಯುತ್ತಿವೆ ನಿನ್ನ ಕಣ್ಣೀರು.
ನಮ್ಮಲ್ಲನೇಕರ ಗಾಯಗಳಲ್ಲಿ
ನೋಯುತ್ತಿದೆ ನಿನ್ನ ನೋವು! ಸಾಕೆ?

ದೇಶಪ್ರೇಮ ಈಗೀಗ ಭಾರೀ ದುಬಾರಿಯಪ್ಪ.