ನಮ್ಮೂರ ಅಗಸ್ಯಾಗ ಆಲದ ಮರ ಬೆಳೆದು
ಹಾದಿ ಬೀದೆಲ್ಲ ತಂಪು ನೆರಳ!
ನೆತ್ತಿಗೊದಲ ಹರಿವಿ ತಪವ ಮಾಡೋನ್ಯಾರ?
ಜಡಿಮುನಿಯ ಜಡಿಯ ಹಾಂಗ ಬಿಳಲ||

ರೆಂಬಿಕೊಂಬಿಯ ಮ್ಯಾಲ ಗೂಡ ಕಟ್ಟಿದಾವ
ರೆಕ್ಕೆ ಬಲಿತ ಹಕ್ಕಿ
ಗೂಡಿನಾಗ! ಮಲಗ್ಯಾವ ಮರಿಹಕ್ಕಿ||
ದೂರ ದೇಶದ ವಲಸಿಗ ಹಕ್ಕಿಗು
ಐತಿ ಜಾಗ ಒಳಗ|
ಬನ್ನಿರಿ| ನೀವು ನಮ್ಮ ಬಳಗ||

ಹಳೆಯ ಬಾವಿಯ ತಳದ ನೀರಿನಾಗ
ಹಸರ ಚಿಗರತಾವ|
ಬೇರಿಗೆ ಮೊಳಿಕಿ ಒಡಿಯತಾವ||
ಭೂತ ಬೇತಾಳ ಜೋತ ಬಾವಲಿ
ಮ್ಯಾಲ ಕೂಗತಾವ|
ಮರದಾಗ| ಕರಗ ಕುಣಿಯತಾವ||

ಮರದ ಎಲೆ ನೆರಳು ಮನೆಯ ಗೋಡೆ ಮ್ಯಾಲ
ಆಡತಾವ ಆಟ
ಮೂಡ್ಯಾವ! ತೊಗಲ ಗೊಂಬಿಯಾಟ||
ಕರುಳ ಬಳ್ಳಿಯ ಕತೆಯ ಹೇಳತಾವ
ನೋಡ್ರಿ ಶಾಂತಚಿತ್ತ|
ನಾವೂನು ಅದರ ಭಾಗ ಮಾತ್ರ||