ಇನ್ನು ದೇವಭಾಷೆಯದೇ ಒಂದು ಕಥೆ.
ದೇವರ ಕೈಕಾಲು ಕಣ್ಣುಗಳಿಗೊಂದೊಂದು ಭಾಷೆಯಾದರೆ
ಭಾಷೆಗೊಂದೊಂದು ಅರ್ಥಕೋಶ.
ಅಂಗಾಂಗ ಭಂಗಿಗಳಿಗೊಂದೊಂದು ಅರ್ಥ
ಕೈ ಎತ್ತಿದರೊಂದರ್ಥ, ನೆಲಕ್ಕೂರಿದರೊಂದರ್ಥ
ಕೈ, ಕಾಲು, ಬೆರಳು ಮಡಿಚಿದರೊಂದರ್ಥ, ತೆರೆದರೊಂದರ್ಥ!

ಹಂಪಿಯಲ್ಲಂತೂ ಕೋಟ್ಯಾನುಕೋಟಿ ದೇವತೆಗಳ
ಮುರಿದ ಅಂಗಾಂಗಳ ಅಂದರೆ-
ಅರ್ಥಕೋಶಗಳ ರಾಶಿಗಳೇ ಬಿದ್ದಿವೆ.
ತೇನವಿನಾ ತೃಣಮಪಿ ಅಲುಗಲಾಗದ ದೇವರಿಗೆ
ಇಷ್ಟೆಲ್ಲ ಭಾಷೆಗಳು, ಅರ್ಥಗಳಿದ್ದರೂ
ವಾಚ್ಯ, ಲಕ್ಷ್ಯ, ಧ್ವನ್ಯಾರ್ಥಗಳ ಜೊತೆಗೆ
ಅರ್ಥಾನರ್ಥಭಾವಾರ್ಥಗಳಿದ್ದರೂ
ಭಕ್ತರ ತಾಪತ್ರಯವೇನೂ ಕಡೆಮಯಾಗಲಿಲ್ಲ.

ಸದರಿ ದೇವರುಗಳೋ-ಯಾವುದೇ ಒಂದರ್ಥಕ್ಕೆ
ಬದ್ಧರಾಗಿಲ್ಲದವರು.
ಎಲ್ಲಾ ಅರ್ಥಗಳಿಗೆ, ಅಂದರೆ ವಿರುದ್ದಾರ್ಥಗಳಿಗೂ
ಮುಗುಳು ನಗುವವರು.

ಇನ್ನು ಇತಹಾಸದ ಬುಕ್ಕಿಗಿಲ್ಲದ
ಶಾನುಭೋಗರ ಲೆಕ್ಕಕ್ಕಿಲ್ಲದ
ಹೊಗಳುಭಟ್ಟರ ಪರಾಕಿಗಿಲ್ಲದ
ದೇವರೆಷ್ಟೋ ಇವೆ!

ಬಿಡ್ರಿ, ಇದು ಎಷ್ಟಂದರೂ ದೇವಭಾಷೆಯ ವ್ಯವಹಾರ;
ನಿಶ್ಯಬ್ದಕ್ಕೆ ಅರ್ಥ ಬಳಿಯುವ ಕೆಲಸ!