ಕನ್ನಡಿಯ ನೋಡಿಕೊ:
ತಂತಾನೇ ನಗುವ
ತನ್ನ ಬಿಟ್ಟು ಇನ್ನಿಲ್ಲವೆಂದು ನಂಬುವ,
ಫ್ರೇಮಿನ ಕನ್ನಡಿಯೇ ವಿಶ್ವ
ಆ ವಿಶ್ವಕೆ ನಾಣೇ ದೊರೆ ಗುರು ದೇವರೆಂದು
ನಂಬುವ, ತನಗೆ ತಾನೇ ಪ್ರಮಾಣವೆಂದು
ಸಾರುವಯ್ಯನ ಕಂಡೆಯಾ?

ಹೊಂಡದಲ್ಲಿ ನೋಡಿಕೊ:
ಮ್ಯಾಲೆ ಬಾನು, ಕೆಳಗೆ ನೀನು;
ತರುಗಿರಿಗಳಲ್ಲಿ ಉಸಿರಾಡುವ ಹಸಿರು
ನೆಲ ಮುಗಿಲ ನಡುವೆ ಗೆರೆ ಕೊರೆದು
ಕುಣಿದಾಡುವ ಕ್ಷಿತಿಜ-
ಈ ನಡುವೆ ಹಬ್ಬಿದೆ
ಮನು ಮುನಿ ದೇವ ದಾನವ ಮಾನವಾದಿ
ಇರುವೆ ಮೊದಲು ಆನೆ ಕಡೆಯಾದ
ಜೀವರಾಶಿಯ ಸಂಬಂಧಗಳ
ಕರುಳಬಳ್ಳಿ!

ನೀನೂ ಮೂಡಿದ್ದೀಯಾ  ಸದರಿ ಬಳ್ಳಿಯ
ಬಂಧು ಭಾಗಾದಿಯಾಗಿ, ಅನುಕೂಲ ಸಿಂಧುವಾಗಿ
ಅಖಂಡದ ತುಂಡಾಗಿ, ತುಂಡು ಕೊಟ್ಟು
ಅಖಂಡದ ಗಂಡನಾಗಿ!

ಹಿನ್ನೆಲೆಯ ಮಿರಿಲೋಕದಲ್ಲಿ ಮೂಡಿದ್ದಾಳೆ ತಾಯಿ
ಇದ್ದು ಇಲ್ಲದ ಹಾಗೆ
ನೀಲ ನೆಮ್ಮದಿಯಾಗಿ, ಬಿಸಿಲು ಬೆಳ್ದಿಂಗಳ ಹೂನಗೆಯಾಗಿ
ಆದಿಗಾಧಾರವಾಗಿ, ಆಗಸವಾಗಿ
ಈ ಎಲ್ಲ ಲೋಕದ ಸತ್ಯಕ್ಕೆ ಆಧಾರ ಪ್ರಮಾಣವಾಗಿ!