ಸೈನ್ಯ ಸಜ್ಜಾಗಿ ನಿಂತು
‘ಹರ ಹರ ಮಹಾದೇವಾ’ ಎಂದು ಒದರಿದಾಗ,
ಮುಖದ ಮ್ಯಾಲೆ ಜಡೆಯೆಳೆದುಕೊಂಡು
ಜಪತಪವೆಂದು ಮೂರೂ ಕಣ್ಣು ಮುಚ್ಚಿಕೊಂಡು
ಕೂತರು ಸ್ವಾಮಿ ಶಿವಸುಖದಲ್ಲಿ.
ದಮ್ಮಯ್ಯಾ ದಯವಾಗು ಶಿವನೇ ಎಂದು
ಹಲುಬಿದ ರಾಜರ ಕಡೆಗೆ
ಜಡೆ ಕೊಡರಿ ಒಮ್ಮೆ ನೋಡಲೇ ಇಲ್ಲ.

ಲೊಳಲೊಟ್ಟೆಯೆಂದು ಎದುರಿನ ಬಸವ ದೇವರೂ
ಗೊರಕೆ ಹೊಡೆವಾಗ-
ನಡೆದೇ ಹೋಯಿತು ದೊಡ್ಡ ಯುದ್ಧ!

ಆಗಲೇ ನಡೆದವು ಹತ್ಯೆ ಕಗ್ಗೊಲೆಗಳು,
ಹೇಡಿ ಸಾವುಗಳು, ವೀರ ಮರಣಗಳು.

ಗೋರಿಗೆ ಗತಿಯಿರದ ಹುತಾತ್ಮರ ಭೂತಗಳೆದ್ದು
ಊರು ಕೇರಿ ಸುಡುಗಾಡುಗಳನೊಂದು ಮಾಡಿ
ಬಯಲು ನಿರ್ವಯಲಾದವು  ನಿಶ್ಶಬ್ದದ ಜೊತೆಗೆ.

ಕೈದು ಹಿಡಿದ ದೊಡ್ಡದೇವರೇ ಹೀಗೆ ಕೈ ಚೆಲ್ಲಿದರೆ
ಚಿಲ್ಲರೆ ದೇವರ ಕೇಳುವವರುಂಟೆ?
ಗಾಬರಿಯಲ್ಲಿ ಗುಡಿ ಖಾಲಿ ಮಾಡುವಾಗ
ಸಿಕ್ಕ ಸಿಕ್ಕಲ್ಲಿ ಎಡವಿ ಕೈಕಾಲು ಮುರಿದು
ಹಾದಿ ಬೀದಿಗಳಲ್ಲಿ ಚೆಲ್ಲಾಪಿಲ್ಲಿ ಚೆಲ್ಲಿ ಹೋಗಿದ್ದಾನೆ
ಅವರವರ ಅವತಾರಗಳ ಅವಶೇಷಗಳನ್ನ!

ಸುಮ್ಮನಿದ್ದೆವೆ ನಾವು?
ಖಾಲಿ ಪಾಲಕಿ ಹೊತ್ತು
ಎಲ್ಲೆಂದರಲ್ಲಿ ಅಲೆದಾಡಿ ಹುಡುಕಿದೆವು,
ಉಘೆ ಉಘೇ ಎಂದೊದರಿದೆವು:
ಸೊಲ್ಲಿರದ ದೇವರೇ,
ಸೊಮ್ಮಿರದ ದಿಂಡರೇ,
ಭ್ರಾಂತು ನಿಭ್ರಾಂತರಾದ ಬೆಳಕುಗಳೇ
ಬನ್ನಿರೆಂದು ಕೂಗಿದೆವು.
ಯಾರೂ ಬರಲಿಲ್ಲ.

ಹೆದರಿ ಪರಾರಿಯಾದ ದೇವರು ಸಿಕ್ಕರೆ
ವಾಪಸು ಕಳಿಸಿರಯ್ಯಾ.

ದುಸ್ವಪ್ನದಲ್ಲಿ ಹಂಪಿಯ ನೋಡುತ್ತ
ಬರುತ್ತಿದ್ದಾಗ
ಎಲ್ಲಿಂದಲೋ ಚಿಮ್ಮಿದ
ಶಿಲೆಯ ತಲೆಯೊಂದು
ಕೈಯಲ್ಲೆ ಬಿತ್ತು.

ಯಾವ ದೇವರ ತಲೆಯಿದು?
ಕಣ್ಣಲ್ಲಿ ಬೆಳಕಿಲ್ಲ,
ಮುಕ್ಕಾದ ಮೂಗಿನಲ್ಲಿ ಪವನ ಸುಳಿಯುವುದಿಲ್ಲ.
ಕರೆದರೆ ಮುರಿದ ಕಿವಿಗೆ ಕೇಳಿಸುವುದಿಲ್ಲ.
ಅರೆತೆರೆದ ತುಟಿಯಿಂದ
ಮಾತಿನ್ನೂ ಹೊರಬಂದಿಲ್ಲ.

ಯಾರ ದೇಹಕ್ಕಿದನ್ನು ಅಂಟಿಸಲಿ?
ಅಥವಾ
ಎಸೆದು ಬಿಡಲೆ ಮತ್ತೆ
ದುಸ್ವಪ್ನಕೆ?

ಉತ್ತಮ ಪ್ರಭುತ್ವ ಲೊಳಲೊಟ್ಟೆ ಅಂತ
ದಾಸರು ಹಾಡಿದ್ದೇ ಆಯ್ತು;
ತೋರು ಬೆರಳು ತುಟಿಗಿಟ್ಟುಕೊಂಡು
ನಿಶ್ಯಬ್ದವಾದರು ಎದುರು ಬಸವದೇವರು!

ತೊಡೆ ತಟ್ಟಿ ತಾಳ ಕುಟ್ಟುತ್ತ
ಮೆಚ್ಚಿ ತಲೆದೂಗುತ್ತ
ಕಣ್ಣು ಮುಚ್ಚಿದರು ದೊಡ್ಡ ದೇವರು-
ಶಿವಸುಖದಲ್ಲಿ ತೇಲುತ್ತ.

ಕಣ್ಣಿಲ್ಲ ಹಾಡಿಗೆ
ನೆನಪಿನ ಕತ್ತಲೆಯಲ್ಲಿ ಕುರುಡು ನಡೆಯುತ್ತ,
ಬಂಡೆಗಳಿಗೆ ಡಿಕ್ಕೀ ಹೊಡೆಯುತ್ತ,
ಹಾಳುಗಳಲ್ಲಿ ಹರಿದಾಡುತ್ತಿದೆ ಈಗಲೂ:
ಉತ್ತಮ ಪ್ರಭುತ್ವ ಲೊಳಲೊಟ್ಟೆ.

ಮೂರು ಹಗಲು ಮೂರು ರಾತ್ರಿ ಕಾದೆವು
ಕಣ್ಣಲ್ಲಿ ಎಣ್ಣೆ ಹಾಕಿಕೊಂಡು:
ದೊಡ್ಡ ದೇವರಿಂದ ಏನಾದರೊಂದು
ಸಣ್ಣ ಸೂಚನೆ ಬಂದೀತೆಂದು,
ಶುಭ ಶಕುನ ಕಂಡೀತೆಂದು.

ಮರಡಿಯ ಕಲ್ಲು ಕಂಟಿಗಳಲ್ಲಿ,
ದೇಗುಲಗಳು ಹಾಳು ಸುರಿವಲ್ಲಿ,
ಎಲ್ಲಾದರೊಂದು ಕಡೆ
ಓಡುವ ನಾಯನಟ್ಟಿಸಿಕೊಂಡು
ಧೀರ ಮೊಲ ಓಡಿ ಬಂದೀತೆಂದು,
ನಾಯ ಬೇಟೆಯಾಡೀತೆಂದು,
ಇನ್ನೊಮ್ಮೆ ಇನ್ನೊಂದು ಮೂಡಲಪಾಯದ
ತದ್ಧಿಮಿತ ಕುಣಿತಕ್ಕೆ
ಈ ನೆಲ ರಂಗಮಂಚವಾದೀತೆಂದು.

ಕಾದು ಕಾದು ಶಿವ ಶಿವ ಪದ ಹಾಡುತ್ತ
ಬಾಯಾರಿದ ಬಿಸಲಗುದುರೆಗಳ ಹತ್ತಿ
ಕಚ್ಚಾಡಿ ಸತ್ತ ಪಶುಗಳ ಹಾಗೆ ಬಿದ್ದಿರುವ
ಬಂಡೆಗಳಲ್ಲಿ,
ಅರೆ ಬೆಂದ ಹೆಣಗಳ ಹಾಗೆ ಬಿದ್ದ ಸ್ಮಾರಕಗಳಲ್ಲಿ
ಅರೆಮರುಳೆರಂತೆ ಅಲೆದಾಡಿದೆವು;
ಹಾಳು ಧೂಳುಗಳಲ್ಲಿ.
ಕಾಲಿಗೆ ಶಿಖರದ ನೆತ್ತಿ ತಗುಲಿ, ಹೌಹಾರಿ
ಅಗಿಯತೊಡಗಿದೆವು ವಿಸ್ಮೃತಿಗಳ.

ಅಗಿದಗಿದು ಮಣ್ಣ ಬಗಿಬಗಿದು
ಗಬ್ಬೆನುವ ವಾಸನೆಗೆ ವಾಕರಿಸದೆ
ಮುಂದುವರಿದಂತೆ ಗೋಡೆ ಸಿಕ್ಕಿತು.
ಧೂಳೊರೆಸಿದರೆ ಕರಕುಶಲ ಕಲೆಗಾರಿಕೆಯ ಕಲ್ಲಿನ ಬಾಗಿಲು!
ಶಿಲೆಯ ಚೌಕಟ್ಟಿನಗುಂಟ
ಹೂವರಳಿದ ಬಳ್ಳಿಯ ಬಿಡಿಸಿ
ಮ್ಯಾಲೆ ಸೊಂಡಿಲಿನಿಂದ ಮಾಲೆ ಹಾಕುವ
ಗಜಗಳ ಮಧ್ಯೆ ಹಣಸುರಿವ ಲಕ್ಷ್ಮೀ ಕುಂತಿದ್ದಾಳೆ-
ಕಮಳದ ಮ್ಯಾಲೆ!
ಬಲಗೈ ಎತ್ತಿ ಹರಸುವ ಸಾಲು ಸಾಳು ದೇವತೆಗಳು-
ಎಡಕ್ಕೆ ಬಲಕ್ಕೆ!

ಮುಚ್ಚಿದ ಬಾಗಿಲಿನೊಳಗೆ
ಭದ್ರ ಅಗಣಿಯ ಜಡಿದಿರಲು
“ಒಳಗೆ ಯಾರಿದ್ದೀರಿ?” ಎಂದು ನಗಾಡುತ್ತ
ಬಾಗಿಲು ತಟ್ಟಿದರೆ-ಅರೆ ಅರೆ!
ಜೋಗುಳ ಕೇಳಿಸಿ
ಗಾಬರಿಯಾಗಿ ಗರಬಡಿಯ ಬಿದ್ದೆವು.
ಆಗಲೆ ಅವತರಿಸಿ ಗುಡುಗಿದರು
ಕೊಟ್ಟೂರಿನ ಜೋಗಿ ಜಂಗಮ ಸ್ವಾಮಿ
ಸಂಗನ ಬಸವ ದೇವರು:

“ಎದ್ದೇಳಿರಯ್ಯಾ,
ಹುಯ್ಯೆನುವ ಕಾಲನ ಬಿರುಗಾಳಿಗೆ ಹೆದರಬ್ಯಾಡಿರಯ್ಯಾ.
ಬಂಡೆಯಿವೆ ಮಂಟಪ ಕಟ್ಟಿರಿ,
ಶಿಲೆಯಿವೆ ಮೂರ್ತಿಯ ಕೆತ್ತಿರಿ,
ಚೆಲ್ಲಾಡಿವೆ ಶಬ್ದ, ಭಾಷೆಯ ಕಟ್ಟಿ
ಮಂತ್ರದಲ್ಲಿ ಮಲಗಿದ್ದವರನೆಬ್ಬಿಸಿರಯ್ಯಾ!”
-ಎಂದು ಕಾಣದ ಕ್ಷಿತಿಜಕ್ಕೆ
ತುದಿಯಿರದ ದಾರಿಯ ತೋರಿ ಮಾಯವಾದರು.