ಅಲೆ ಅಲೆ ಮಾಯಾಜಾಲದ ಬಲೆಹೆಣೆದು,
ಕಾಣದ ಠಾವಿನಲಿ ಕುಂತು,
ಹೊಸನಾತ ಹೊಸನಾತವೆಂದು ಹಲುಬುತ,
ಅಮಾಯಕ ಕೀಟಗಳು ಬಳಿ ಸುಳಿದೊಡನೆ
ಆಹಾಹಾ-
ಬಂದಳಗೊ ಶೋಕೀ ರಂಗೀಲೇ
ಮಿಡ್‌ನೈಟ್‌ ಮಸಾಲೇ
ಬೆದೆಯಿಂದ ಕುದಿವ ಮೈ ತುಳುಕುತಾ,
ಬಡಪಾಯಿಗಳ ಪಂಚೇಂದ್ರಿಯಗಳಿಗೆ
ಪ್ರತ್ಯೇಕ ಕಚಗುಳಿಯಿಡುತಾ,
ಸುಧೀರ್ಘ ಚುಂಬನದಲ್ಲಿ ಮೈಮರೆಸಿ
ಜೇಬಿಗೆ ಕೈಜಾರಿಸುವ ಜಾರೆಯರೊಡತಿಗೆ
ನಮಸ್ಕಾರ.

ಆಹ್‌ ಸರ್ಕಸ್‌ ರಾಣಿ!
ಹುಲಿಸಿಂಹ ಚಿರತೆಗಳಾದಿ ಪ್ರಾಣಿಲೋಕವ
ಮುದದ ಮದದಲಿ ಮೈಮರೆಸಿ,
ಧಾತುಗುಂದಿಸಿ, ಕುರಿಮಾಡಿ ಕುಣಿಸುವಾಖಿ!
ನಖಶಿಖಾಂತ ಆಕ್ರಮಿಸಿಕೊಂಡು
ತನ್ನ ಕಟ್ಟಳೆಗೆ ಬಗ್ಗಿಸಿಕೊಂಬ
ಹಂಟರವಾಲಿಗೆ ನಮಸ್ಕಾರ.

ಬಳಿಬಂದ ಗ್ರಹಗಳಿಗೆ
ಪರ್ಯಾಯ ಪರಿಧಿಯ ರಚಿಸಿ ಸೆಳೆಯುತಾ
ಲೋಕದ ದುಃಖಂಗಳ ತಟ್ಟಿ ಮಲಗಿಸುವಂತೆ
ಅಭಿನಯಿಸುತಾ,
ತಂಟೆ ಮಾಡುವ ತುಂಟರಿಗೆ
ಕಿಡಿ ಚೆಲ್ಲುವ ಮದ್ದು ಸಿಡಿಸಿ
ಮ್ಯಾಲೇಳುವ ಹೊಗೆಯ ಗೋಪುರದ
ಗುಮ್ಮನ ತೋರಿ ಬೆದರಿಸುತಾ,
ಸದರಿ ಕುಳಗಳ ನಿಟ್ಟುಸಿರುಗಳನ್ನು
ಅವರ ಕ್ರೆಡಿಟ್‌ ಕಾರ್ಡಿಗೇ ಜಮಾಯಿಸುತಾ-

ಎಲ್ಲೋ ಕುಮತು ಎಲ್ಲರ ಉಸಾಬರಿ ಮಾಡುವ
ಜಗದ್ರಕ್ಷಕಿಗೆ
ನಮಸ್ಕಾರ.

ಇವಳು ಮಾಡಿದ್ದೆಲ್ಲ ಕಾನೂನು ಸಮ್ಮತ,
ಜನ ದನ ಪ್ರಜೆಗಳಿಗೆ ಒಮ್ಮತ,
ಉಳಿದವರೆಲ್ಲ ಇವಳೆದುರು ಯಕ್ಕಶ್ಚಿತ
ಅಸಹ್ಯಕರವೆಂದರೆ ಇದ್ಯಾವ ಹೊಸಕರವೆಂದು
ಹೆದರುವ ಮಂದಿ ಅಸಂಗತ.

ಚಮಚಾಗಿರಿಯ ಶಿಖರವೇರಿ
ಧ್ವಜನೆಟ್ಟ ಸಾಹಸಿಗರಿಗೆ ಇನಾಮು ಹಂಚುವ,
ಡೈನಮೆಟ್‌ ಬೆಳಕಿನಲ್ಲಿ
ಚಿನ್ನದ ಹಲ್ಲಿನ ನಗೆಸೂಸುವ,
ಕದ್ದು ಮಣ್ಣು ತಿನ್ನುವ ಇಲ್ಲವೆ ಸಾಯುವ
ಆಯ್ಕೆಗಳ ನಮಗೇ ನೀಡಿದ ದಯಾಳು ತಾಯಿ
ಶ್ರೀಮಂತ ರಾಣಿಗೆ ನಮಸ್ಕಾರ.

ಅಮೆರಿಕದ ರಾಣಿಗೆ
ಕನ್ನಡಿಯ ಹುಚ್ಚು.
ಕಣ್ಣೊಂದು ಬಿಟ್ಟು ಕನ್ನಡಿಗಿಲ್ಲ
ಬೇರೆ ಇಂದ್ರಿಯ.
ಅಂತೆಯೇ ಸದರಿ ರಾಣಿಗೆ ಕನ್ನಡಿಯೇ
ಕಣ್ಣು, ಕಿವಿ, ಮೂಗು ಪಂಚೇಂದ್ರಿಯ!

ಸದಾ ಕನ್ನಡಿಯೆದುರು ನಿಂತು,
ತಂತಾನೇ ಚೆಲುವೆಯೆಂದು ಹೊಗಳಿಕೊಂಬ,
ಎದುರು ಬಂದವರು ತನ್ನನ್ನು
ರೇಪು ಮಾಡುವರೆಂದು ಕೊಚ್ಚಿಕೊಂಬ-
ಸ್ವಘೋಷಿತ ಜಗನ್ಮೋಹಿನಿಗೆ
ನಮಸ್ಕಾರ.