ಶಿಕಾಗೋದಲ್ಲಿ ಪುಟ್ಟ ಪುಟ್ಟ ಪೆಟ್ಟಿ ಅಂಗಡಿಗಳ
ಸಾಲು ಸಾಲು ಮಾಡಿ ಪೆಟ್ಟಿಗೆಯಲಿಟ್ಟಂತೆ
ಅದೊಂದು ಬಗೆಯ ಸಂಕೀರ್ಣ; ಅಂದರದು
ಕನಸು ಮಾರುವ ಮಾರ್ಕೆಟ್ಟು!
ಒಂದೊಂದಂಗಡಿಯ ಮುಂದೊಂದು ಬಟನಿದೆ.
ಬಟನಿಗೊಂದು ಬಿಲ, ಬಿಲದಡಿ ಒಬ್ಬ ಸುಂದರಿ-
‘ಬಾ ರಾಜಾ ಐತೆ ಮಜ!’ ಎಂದು ಕೈ ಮಾಡಿ
ಕಣ್ಣು ಹೊಡೆವ ಚಿತ್ರ!
ನೀವು ೫೦ ಸೆಂಟಿನ ನಾಣ್ಯವ ಬಿಲದಲ್ಲಿ ಬಿಟ್ಟರೆ
ಬಾಗಿಲು ತೆರೆಯುತ್ತದೆ. ಒಳಗೆ ಒಬ್ಬರೇ
ಕೂತುಕೊಂಬಷ್ಟು ಸ್ಥಳ.
ಒಳಹೊಕ್ಕರೆ ನೀವು, ನೀವಿರುವಷ್ಟು ಸಮಯ
ಸದರಿ ಸುಂದರಿ ಬೇರೆಯವರ ಕರೆಯುವುದಿಲ್ಲ,
ಹೊರಗೆ ಕಾಣಿಸಿಕೊಂಬುದೂ ಇಲ್ಲ.
ಇದಪ್ಪ ಗುಟ್ಟು ಕಾಪಾಡುವ ವ್ಯವಹಾರ ನೀತಿ.

ಒಳಗೆ ಕೂತಿರಲ್ಲ-
ನಿಮ್ಮೆದುರು ಎರಡಡಿ ಉದ್ದಗಲದ ತೆರೆ,
ಅದರ ಮ್ಯಾಲೆ ನಿಮ್ಮನ್ನ ಕರೆದ ಸುಂದರಿ ಬಂದು
ನಿಮ್ಮ ಕಡೆಗೊಂದು ಚುಂಬನ ತೂರಿ
ನಿಮ್ಮೆದುರಿಗೇ, ನೀವು ಬೆರಗಾಗುವಂಥ,
ಇನ್ನಿಲ್ಲವೆಂಬಂಥ ಮೈಮಣಿತ ಕುಣಿತಗಳಿಂದ
ಬಿಸಿ ಬಿಸಿ ಮೈಮಸಾಲೆಯ ಕನಸು ತಯಾರಿಸಿ
ಐದೇ ನಿಮಿಷ ಸ್ವರ್ಗದ ಸ್ಯಾಂಪಲ್‌ ತೋರಿಸಿ,
ಇನ್ನಷ್ಟು ಮತ್ತಿಷ್ಟೆಂದು ನೀವು ಗೋಗರೆವಾಗಲೇ
ಮಟಾಮಾಯವಾಗುತ್ತಾಳೇ!

ಹೊರಬಂದರೆ ಇನ್ನೊಂದು ಪೆಟ್ಟಿಗೆಯಲ್ಲಿ ಇನ್ನೊಬ್ಬಳು,
ಮತ್ತೊಂದರಲ್ಲಿ ಮತ್ತೊಬ್ಬಳು-
ಹೀಗೇ ಸಾಲು ಸಾಲು ಸುಂದರಿಯರು;
ಮರಳುಗಾಡಲ್ಲಿ ಉಪ್ಪು ನೀರು ಮಾರುವವರು.
ಕುಡಿದಷ್ಟೂ ಧಗೆ ಹೆಚ್ಚು.
ಧಗೆ ಹೆಚ್ಚಿದಷ್ಟೂ ನೀರು ಕುಡಿ.
ಇಗೊ ಪೆಟ್ಟಿಗೆ ಖಾಲಿ ಇದೆ,
ಬಟನ್ನೊತ್ತಿ ಒಳಗೆ ನಡೆ.