ವಿಷಯ ಗೊತ್ತಾಯಿತ?
ಚದುರಂಗವ ಹೆಣೆದು ಚಂದ್ರನೊಳಗಣ ಹರಿಣವ
ಬೇಟೆಯಾಡಿದರಲ್ಲ ಅಮೆರಿಕನರು,-
ವಿಷಬಾಣ ಇವನಿಗೂ ತಾಗಿ
ಚಂದ್ರಾಮ ಸತ್ತುಬಿದ್ದ!
ಉರಿಯುವ ಸೊಡರ ನೀರಲದ್ದಿದ ಹಾಗೆ
ಅಮವಾಸ್ಯೆಯ ಮುನ್ನಾದಿನ ಸಾಗರದಲ್ಲಿ
ಮುಳುಗಿದವನು ಮ್ಯಾಲೇಳಲೇ ಇಲ್ಲ.
ಆ ದಿನ ಯದ್ವಾತದ್ವಾ ಬಿರುಗಾಳಿ ಬೀಸಿದ್ದು,
ಕ್ಷಿತಿಜ ನಡುಗಿದ್ದು,
ತುಂತುರು ಮಳೆ ಹನಿದು ಬೆಳಿಗ್ಗೆ ಹುಲ್ಲಿನ ಮ್ಯಾಲೆ
ಇಬ್ಬನಿ ಬದಲು ಹನಿ ನೆತ್ತರು ಕಂಡದ್ದು,
ಇಡೀ ರಾತ್ರಿ ತಾರೆಗಳು ಉರಿದುರಿದು ಉದುರಿದ್ದು
ನೋಡಿ, ಆಗಬಾರದ್ದೇನೋ ಆಗಿದೆಯೆಂದು
ನಮಗಾಗಲೇ ಅನಿಸಿತ್ತು.

ಪಾಪ ಕವಿಯಾಗಿದ್ದ ಚಂಧ್ರ.
ಇವನ ಕಾವ್ಯದ ತುಂಬ ಬರೀ ಹುಡುಗಿಯರೇ
ಮಿನಿಯುಡುಗೆಯ ಬೆಡಗಿಯರೇ!
ಅಯ್ಯಾ ಉದಯೋನ್ಮುಖ ಕವಿಯೇ
ಪರವಾಯಿಲ್ಲಯ್ಯಾ ನಿನ್ನ ಕಾವ್ಯ ಎಂದು ಹೊಗಳಿದರಂತು
ಹಿಗ್ಗುತಾ ಕುಗ್ಗುತಾ ದಿನಕೊಂದು ಚಂದ ನಾಚುತಾ
ಕಣ್ಣು ಹೊಡೆವ ಚಂದ್ರಮುಖಿಯರಿಗೆ
ಫೋಜು ಕೊಡುತಾ, ಮಜ ಮಾಡುತಾ
ಕುಡುಗೋಲಿಂದ ವಿರಹಿಗಳ ಹೆಂಗರುಳನಿರಿಯುತಾ
ಕಿವಿಯಿಂದ ಕಿವಿತನಕ ನಗುತ್ತಿದ್ದ.

ಬದ್ಧತೆ ಬೇಕಯ್ಯಾ ಕಾವ್ಯಕ್ಕೆ ಎಂದು
ಎಡಗೈ ವಿಮರ್ಶಕ ಬರೆದರೆ
ಮೋಡಗಳಿಂದ ಹೊರಬಂದು ಗಂಭೀರ ನಿಂದು
ಕಾಳ್ಗತ್ತಲೆಯ ಮುಖಕ್ಕೆ ಬೆಳಕೆರಚಿ
ಭೀಕರವ ಮರೆಮಾಚಿ,
ಕತ್ತಲೆಯ ಗುಟ್ಟುಗಳ ಡೀಕೋಡಿಸುತ್ತ
ಬೆಳ್ಳಂಬೆಳಗು ಕನಸುಗಳ ಸುರಿಸುತ್ತ
ಇಡೀ ಬಯಲನ್ನ ತೂಬುಹಾಕಿ ತುಂಬಿ ಬಿಡುತ್ತಿದ್ದ
ಬೆಳ್ದಿಂಗಳಿಂದ!

ಅಂಥವನು ಪಾಪ ನೀರಲದ್ದಿದ ಮ್ಯಾಲೆ ಇದ್ದಿಲಾದನಂತೆ
ಅವನ ಮೂಳೆಗಳಿಂದ ಟಾಲ್ಕಂ ಪೌಡರು ಮಾಡುವ
ಕಂಪನಿಗಳೆಷ್ಟೋ ಹುಟ್ಟಿವೆಯಂತೆ ಅಮೆರಿಕದಲ್ಲಿ.
ನಮ್ಮವರೂ ಹಿಂದೆ ಬಿದ್ದಿಲ್ಲ,
ಪಳೆಯುಳಿಕೆಯ ಮ್ಯಾಲೆ ಹೌಸಿಂಗ್‌ ಬೋರ್ಡ್
ಮನೆ ಕಟ್ಟಿಸುವ ನೀಲಿ ನಕ್ಷೆ ತಯಾರಿಸಿರುವರಂತೆ,
ವ್ಯವಹಾರವಾಗಲೇ ಕುದುರಿದೆಯಂಥೆ
ಅಮೆರಿಕದವರೊಂದಿಗೆ.

ಈ ಕವಿತೆಯ ಕೊನೆಯ ಓದುಗನಿಗೆ ಹೇಳುತ್ತೇನೆ-
ಚಂದ್ರ ನಿಜವಾಗಿ ಕವಿಯಾಗಿದ್ದ ಇವರೆ,
ಅವನ ಕವಿತೆ ಈಗಲೂ ಕೇಳಿಸುತಾವೆ
ನಮ್ಮ ಮಾತನ್ನ ನಮಗೇ ತಿರುಗಿಸುವ ಕ್ಷಿತಿಜಗಳಿಂದ;
ನಮ್ಮ ಕನಸಿಗಾದ ಹುಣ್ಣುಗಳಿಂದ.