ಪಡಖಾನೆಯ ಗಾಜಿನ ಚೂರುಗಳಲು ಮೇಲೆ
ಲಕಲಕಿಸುತ್ತ ಮೂಡಿದನು ಸೂರ್ಯ,
ಬೆಳಗಿನ ಸಮಯ.

ಮುರಿದ ಕಿಡಿಕಿ, ಚೇರು,
ಅಸ್ತವ್ಯಸ್ತ ಟೇಬಲ್ಲು, ಮ್ಯಾಲೆ ಬಾಕೀ ಬಿಲ್ಲು:
ರಾತ್ರಿ ಘಮ್ಮೆಂದಿದ್ದ ಕಾಮಕಸ್ತೂರಿಯ ಮೈಯಲ್ಲಿ
ವಾಂತಿಯ ಗಲೀಜು.
ಅಲ್ಲೆ ಬಿದ್ದಿದೆ ಕೂದಲಲ್ಲಿದ್ದ ಗುಲಾಬಿಯ ಇದ್ದಿಲು,
ನೆಲದಲ್ಲಿ ಇಂಗದ ವೈನು, ಬೀರಿನ ಜಿಡ್ಡು,
ಜೀಣðವಾಗದ ಮಾಂಸದ ತುಂಡು.

ಕಂಬಕೆ ಅಂಟಿ ಗಂಭೀರ ಕುಂತಿದ್ದಾಳೆ
ಹಲವರ ಏಕಾಂತಗಳ ಅಕ್ರಮ ಆಕ್ರಮಿಸಿ,
ಬಲಗಳ ಹೀರಿ ಹಿಪ್ಪೆಯ ಮಾಡಿ ತಿಪ್ಪೆಗೆಸೆದಾಕ.
ದಿಟ್ಟಿಸಿ ನೋಡುತ್ತಿವೆ ಮೊಲೆತೊಟ್ಟು.

ಏನೆಲ್ಲ ಇವೆ ಇವಳ ನಿರ್ಜನ ನೀಲಿಕಣ್ಣಲ್ಲಿ:
ಸೀದ ಬೇಸಿಗೆ,
ಹಳಸಲು ನಗೆ,
ಕೊಳೆತ ನೆನಪು,
ಸಾಕ್ಸಿನ ಗಬ್ಬುವಾಸನೆಯ
ಸೆಕ್ಸಿನ ಕೊಳೆ ಕೊಚ್ಚೆ,

ಪತ್ರಿಕೆಯ ರದ್ದಿಯಲಿ
ಪೂತನಿಯ ಮೊಲೆಹೀರಿ ಬಿದ್ದ ಕೂಸು,
ತರಿದೊಗೆದು ಗುಡ್ಡೆಹಾಕಿದ ಸ್ತನಗಳು,
ಬಗಿದ ಬಸಿರುಗಳು-
ಇವನ್ನೆಲ್ಲ ಆಕ್ರಮಿಸಿ ಮುಚ್ಚುವ
ನೋಡಿದರೆ ಕಣ್ಣಿರಿವ ಲೋಹದ ಬೆಳಕುಗಳು,
ಮೈಪರಚುವ ಬೆಳ್ಳಿಯ ಥಳಕುಗಳು!

ಇವಳ ಎದೆಯಲ್ಲೆರಡು ಬೆಟ್ಟಗಳು.
ಬೆಟ್ಟಗಳ ಕೆಳಗೆ
ರಭಸದಲ್ಲಿ ಚಿಮ್ಮುತಿರುವ ಬಿಸಿನೀರಿನ ಬುಗ್ಗೆಗಳು…

ಅದರಿಂದಾಳ ಅಂತರಾಳದ ಒಳಗೆ ಶಾಂತ ಸರೋವರ.
ಅಲ್ಲಿ ಅರಳಬಹುದೆ ಒಂದು ಸಹಸ್ರದಳ ಕಮಲ?