ನೋಡಿ ನೋಡಿ ಇದರ ಮೋಡಿಯ
ಟೀವಿಯೆಂಬ ಒಕ್ಕಣ್ಣಿನ ಕನ್ನಡಿಯ೧
ಹರಿವ ಕಂಗಳ ತನ್ನಲ್ಲೆ ಕೀಲಿಸಿಕೊಂಬುದಕೆ
ಗಮ್ಮತ್ತುಗಳ ಕುಣಿವುದೇನು
ಮಜಮೋಜುಗಳ ತುಳುಕುವುದೇನು
ಕಂಗಳ ರೇಪು ಮಾಡುವುದೇನು
ಇಸ್ಪೀಟೆಲೆಯಂತೆ ದೃಶ್ಯಗಳ
ರೀಶಫಲ್ ಮಾಡುವುದೇನು!
ನಾವು ನೋಡಿದ ಒಂದು ತರುಮರವಿಲ್ಲ
ಪ್ರಾಣಿ ಪಕ್ಷಿಗಳಿಲ್ಲ.
ಕಿಟಕಿ ಗಾಜಿನ ಮೇಲೆ ಹೊಳೆವ
ಅಕಾಲ ಬಿಸಿಲು ಅಥವಾ ಬೆಳಂದಿಂಗಳು.
ಮೈ ಪರಚಿಕೊಂಬ ರಸ್ತೆ
ಹಲ್ಲು ಕಿರಿವ ದೀಪಗಳು
ಗಿಜಿ ಗಿಜಿ ಅಪರಿಚಿತರು
ಸ್ವಾಮಿಗಳು ದಳ್ಳಾಳಿಗಳು ವ್ಯಾಪಾರಿಗಳು
ಹೈಫೈ ಗರತಿಯರು, ಸೂಳೆಯರು
ಬೆರಳು ಚೀಪುವ ಮಂತ್ರಿಗಳು
ರಾಜಕಾರಣಿಯ ಹೃದಯ ಚಿಕಿತ್ಸೆಯ ವೈದ್ಯರು
ಕತ್ತು ಚೆಲ್ಲಿದ ಕಚೇರಿಯ ಧ್ವಜಗಳು.
ದೇಗುಲ ಕುಸಿದು ಹೂತು ಹೋದ ಗಂಟೆಗಳು
ಮ್ಯಾಲೆದ್ದು ಬಂದು ವರ ಕೊಡುವ ದೇವರ ಮೂರ್ತಿಗಳು
ಅವರ ಪಾದ ಮುಟ್ಟಿದರೆ
ಎಲ್ಲಿಂದಲೋ ಮಿಡಿವ ಗಂಟೆಗಳು
ಇದು ಪವಾಡವೆಂಬ ಪೂಜಾರಿಗಳು.
ಮರುಕ್ಷಣವೆ ಮರುಭೂಮಿಗೆ
ಅಪ್ಪಳಿಸುವ ಮುಗಿಲುಗಳು
ಕೆಳಗಡೆ ತಾಯಿ ಬರೆದ
ಮೊಳಕೆಯ ಚಿತ್ರಗಳು
ಅದನ್ನು ನೋಡುತ್ತ
ಮುಳುಗುತ್ತಿರುವ ಸೂರ್ಯ!
ದಯವಿಟ್ಟು ಸ್ವಿಚಾಫ್ ಮಾಡ್ರಿ!
Leave A Comment