ಅಗೋ ಬಂದ ನೋಡು:
ಅಡ್ಡ ಬಂದುದ ಮುರಿಯುತ್ತ
ಉದ್ದ ಬೆಳೆದುದ ತರಿಯುತ್ತ
ಅಮೆರಿಕದ ರಾಣಿಯ ರಾಣ ಚಂಡಪ್ರಚಂಡ
ಭೂಗೋಳ ಖಗೋಳಗಳ ಮಿಂಡ!
ಅವನ ಕೂದಲು ಕೊಂಕುವುದಿಲ್ಲ.
ಟೋಪಿ ವಾಳೋದಿಲ್ಲ,
ಬಟ್ಟೆ ಮುದುಡುವುದಿಲ್ಲ,
ಮುಖದಲ್ಲಿ ಭಾವ ಮೂಡುವುದಿಲ್ಲ.
ಅದು ಮುಖವೇ ಅಲ್ಲ.
ಅವನು ಬಂದಾಗ ಬೀಸುವ ಗಾಳಿಯೇ ಬೇರೆ.
ಅದು ಬೀಸಿ, ಚರಂಡಿಗೂ ಪ್ರವಾಹ ಬಂದು,
ಜೊತೆಗಾರರು ಕೊಚ್ಚಿಕೊಂಡು ಹೋಗಿ
ದುಃಸ್ವಪ್ನದ ಜಾಗವಾಗಿದೆ ಇಡೀ ಊರು.
ಜಗದೆಲ್ಲ ಪಾಪಗಳಿಗೆ ಅಂತಿಮ ರೂಪ ಕೊಡುವಾತ,
ಗಾಳಿಗ ವಿಷ ಕುಡಿಸಿ ಮೋಜು ತಗೊಂಬಾತ,
ವಾಯುಮಂಡಳ ಪ್ರಕ್ಷುಬ್ಧಗೊಳಿಸುವಾತ,
ಸ್ಪೇಸಿನ ಸರೋವರವ ಕದಡುವಾತ.
ಗಂಧಕದ ಗಣಯಂತೆ ಉರಿವ ಕಣ್ಣುಳ್ಳಾತ,
ನಡುಹಗಲು ಸುಡುಬಿಸಿಲು
ಕಟ್ಟೇಕಾಂತದಲಿ ಬೆಟ್ಟ ಏರಿ,
ಎಲ್ಲ ಎಲ್ಲಕ್ಕು ಮ್ಯಾಲೆ ಕುಂತು
ಲೋಕದ ದೇಖರೇಖಿ ಮಾಡುವಾತ!
ಕೇಳಿಸಿತೆ ಅವನ ಮಾತ?
ಹೊಸನಾತ ಹೊಸನಾತ!
Leave A Comment