ಕಗ್ಗತ್ತಲ ಕರಾಳದೊಳಗೆ
ಮನೆಯ ವಿವರಗಳು ಕರಗಿರುವಾಗ
ಛಾವಣಿಯ ಮ್ಯಾಲೆ ಕಳ್ಳರ ಪಿಸುದನಿ ಕೇಳಿಸಿ
ಮೂಲೆಯಲ್ಲಿ ಹುದುಗಿ ಮೌನಿಯಾದೆ.

ಬೆಳಕಿನ ಕೋಲು ಹಿಡಿದು
ಕೆಳಗಿಳಿದು ಬಂದರು ಆರೇಳು ಜನ
ಕೋಲು ಬೆಳಕಿನವರು!

ತುಟಿಯ ಮ್ಯಾಲೆ ಬೆರಳಿಟ್ಟು
ಪರಸ್ಪರ ಸದ್ದಡಗಿಸಿ ಹುಡುಕಿದರು.
ಯಾರಿಲ್ಲವೆಂದು ಖಾತ್ರಿಯಾಗಿ
ಹೋ ಅಂತ ಚಪ್ಪಾಳೆ ತಟ್ಟಿ
ಬೆರಳಿಗೆ ಬೆರಳು ಹೆಣೆದಾಡಿ
ಗೆಜ್ಜೆಯ ಹೆಜ್ಜೆಹಾಕಿ
ತಕ್ಕತೈ ಕರಗ ಕುಣಿದರು.
ಕಾರಿರುಳ ಹಿಂಡಿ ಬೆಳ್ದಿಂಗಳ ಸೋರಿಸಿ
ಮನೆತುಂಬ ನಗೆಯ ಚೆಲ್ಲಾಡಿದರು!

ಶಬ್ದ ನಿಶ್ಯಬ್ದವಾಗಿ
ಮನೆಯೆಲ್ಲ ಬೆಳಕಿನ ಬಯಲಾದಾಗ
ಮೈ ಮನಸಿಗೆ ಬೆಳ್ದಿಂಗಳ ಲೇಪಿಸಿಕೊಂಡು,
ಮೈಮರೆತು ಶಬ್ದಮುಗ್ಧವಾದೆನೋ
ಸಾವಳಗಿ ಶಿವಲಿಂಗಾ.