೧
ಪ್ರೇಮದ ಓಲೆಯ ಬರೆದಳು ಚೆಲುವೆ
ದುರದ ಇನಿಯನಿಗೆ.
ಕ್ಷೇಮ ಸಮಾಚಾರ ತಿಳಿಸೆಂದು ಬರೆದಳು
ಇಂತು ಈ ನಿನ್ನವಳಿಗೆ.
ಉತ್ತರ ಬರಲಿಲ್ಲ, ಪತ್ರವೂ ಬರಲಿಲ್ಲ
ಮತ್ತೊಂದು ಬರೆದಳು ಚೆಲುವೆ:
೨
“ನಮ್ಮವರು ನನ್ನನ್ನ ಏನೇನೊ ಅನ್ನುವರು
ಹೊರ ಮರೆತು ಒಳಗೇನೇ ನೆನೆವೆ?
ಪರಗ್ಯಾನ ಪರಚಿತ್ತ ಏನೀ ವಿಕಳಾವಸ್ಥೆ?”
ನಿಮಗು ಸಹ ಹೀಗೆ ಆಗುವುದೆ?
ಕೌಲೆತ್ತು ಬಂದಿತ್ತು ಮನದಲ್ಲೆ ಕೇಳಿದೆನು-
ಉತ್ತರ ಬರಬಹುದೆ ಇದಕಾದರು?
ಬಲಗಾಲನೆತ್ತಿತ್ತು, ಶುಭಸನ್ನೆ ಮಾಡಿತ್ತು,
ಕತ್ತನ್ನ ತೂಗಿತ್ತು ಮ್ಯಾಲೆ ಕೆಳಗು.
ನನ್ನ ಅಂಚೆವಿಳಾಸ ಸರಿಯಾಗಿ ಗೊತ್ತಲ್ಲ?
ಕೆಳಗಿದೆ ನೋಡಿರಿ ಮರೆತಿದ್ದರೆ.
ಪತ್ರವೂ ಬಾರದೆ ಉತ್ತರವೂ ಬಾರದೆ
ಮತ್ತೊಂದು ಬರೆದಳು ಚೆಲುವೆ:
೩
ದಾಸಯ್ಯ ಊರಾಡಿ ನಮ್ಮನೆಗೆ ಬಂದಿದ್ದ
ಗೊಲ್ಲರ ಬಡವಿಯ ಕತೆ ಹೇಳಿದ:
ಗಲಿರೆಂಬ ಜಂಗಿನ ಜೋಗಿ ಜಂಗಮ ಬಂದ
ಹಟ್ಟಿಯ ತುಂಬೆಲ್ಲ ಬೆಳಕಾಡಿತೊ!
ಅಂಗಳ ರಜ ಗುಡಿಸಿ ರಂಗೋಲೆ ಗೆರೆ ಎಳೆವ
ಬಡವಿಯ ಹೃದಯವೆ ಕಳವಾಯಿತೊ!
ಮಾರನೆ ದಿನದಿಂದ ಜಂಗಮ ಬಾರದೆ
ಕುಂತೆ ಇರುವಳು ನೋಡಿ
ಗೊಲ್ಲರ ಬಡವಿ.
ಬಡವಿಯ ಹೆಸರು ಕೇಳಿದೆ-
“ಅಯ್ಯೋ ಮರೆತೇ ಹೋಗಿದೆ.”
ಮರೆತ ಹೆಸರಿನ ಬಡವಿ ನಾನೇ ಹೌದೆ?
ಈ ಪತ್ರಕಾದರು ಉತ್ತರಿಸಿ ತಪ್ಪದೆ
ಕತೆಯ ನೆನೆದಾಗೆಲ್ಲ ಅಳು ಬರುತಿದೆ.
ಪತ್ರವೂ ಬರಲಿಲ್ಲ ಉತ್ತರವೂ ಬರಲಿಲ್ಲ.
ಮತ್ತೊಂದು ಬರೆದಳು ಚೆಲುವೆ:
೪
ನಿನ್ನೆ ರಾತ್ರಿ
ಕಂಡರಿಯದ ಹಕ್ಕಿಯೊಂದು
ಕೇಳರಿಯದ ಹಾಡು ಹೇಳಿ
ಬೆರಗಿನಲಿ ಮ್ಯಾಲೆ ನೋಡಿದೆ:
ಅಂಬರದ ಅಂಗಳದಿ ಚಂದ್ರಾಮನೆಂಬುವ
ಬಿಳಿ ನವಿಲು ಗರೆಗೆದರಿ ಕುಣಿದು,
ಅಗೊ ನವಿಲ ಗರಿಯಲ್ಲಿ
ಮಿನ ಮಿನ ಮಿನುಗುತಿವೆ
ತಾರಾಖಚಿತ ಚಿಕ್ಕೆಗಣ್ಣು!
ನನ್ನ ಕಣ್ಣಿಂದ್ಯಾರೊ ಚಂದ್ರನ್ನ ನೋಡುವರೆ?
ಹೌದೆನಿಸಿ ಹುಡುಕಿದೆ ಮನೆಯ ತುಂಬ,
ಯಾರೊ ಆಗಂತುಕರು ಉರುಳಾಡಿಧಂಗಿತ್ತು
ಹಾಸಿಗೆ ಕೆದರಿತ್ತು ಅಸ್ತವ್ಯಸ್ತ!
ಮ್ಯಾಲಿನುಪ್ಪರಿಗೆಯಲಿ ಜ್ಯೋತಿ ಉರಿಯುತ್ತಿತ್ತು
ಗಾಳಿಗಲುಗದೆ ಶಾಂತ ಚಿತ್ತ.
ತನ್ನ ಪಾಡಿಗೆ ತಾನು ಒಂಟಿ ಹಾಡನು ಗುನುಗಿ
ನದಿಯು ಹರಿಯುತ್ತಿತ್ತು ಆತ್ಮತೃಪ್ತ!
ಈ ಪತ್ರಕಾದರು ಉತ್ತರ ಕೊಡಿರಯ್ಯ
ನಿನ್ನೆ ಬಂದಿದ್ದವರು ನೀವು ತಾನೆ?
ಪತ್ರವೂ ಬರಲಿಲ್ಲ ಉತ್ತರವೂ ಬರಲಿಲ್ಲ
ನಿಶ್ಯಬ್ಧವಾದಳು ಚೆಲುವೆ!
Leave A Comment