ನಾವೆಲ್ಲ ಅಲ್ಲೇ ಇದ್ದು
ಅಷ್ಟೊಂದು ಗಲಾಟೆ ಮಾಡುತ್ತಿದ್ದರೆ-
ಆ ಲಂಬಾಣಿ ಹುಡುಗಿ,
ಎಲ್ಲರೆದುರಿನಲ್ಲೇ ಅಂಗೈಯಲ್ಲಿ
ಕನ್ನಡಿಯ ಹಿಡಿದು ನೋಡಿಕೊಂಬುವುದೆ?

ಏನೀ ಅವಸ್ತೆ?
ತನ್ನೆದುರು ತನ್ನನ್ನೇ ಇಟ್ಟು
ನೋಡಿಕೊಂಬ ವಿಕಳಾವಸ್ಥೆ!
ಬಿಂಬದ ಜೊತೆ ನೆರೆವ ಬಯಕೆ|

ಎಲಗೆಲಗೇ ಚೆಲುವೆ,
ಹೊರ ಮರೆತು ಒಳಗಿಣಿಕಿ ನೋಡುವವಳೆ,
ಒಳಗನ್ನ ಹೊರತಂದು ಬೆರೆಯಬಯಸಿದವಳೇ
ನೀನು ಸುಂದರಿಯಾಗುವುದಕ್ಕೆ
ನಮ್ಮ ನೋಟ ಬೇಡವೇ?

ಅಗೋ ನೋಡಿರಯ್ಯಾ-
ಕಣ್ಹುಬ್ಬು ಕುಣಿಸುವಳು,
ಕೆನ್ನೆ ಕೆಂಪಾಗುವಳು,
ಮಾತಾಡುತಿರುವಳು ಯಾರೊಂದಿಗೆ?

ನಾವಿದ್ದೂ ಕಾಣದ ಕುರುಡಿಯ
ಅಂಗೈಯಲ್ಲಿ ಕನ್ನಡಿಯೆ ಶಿವನೆ!