ಬೆಳಗಿನ ಸಮಯ.
ಕನಸಿನಲ್ಲಿ ನಾನೊಂದು ಕೆರೆಯಾಗಿ
ತರುಮರಗಳ ಫ್ರೇಮಿನ ಕನ್ನಡಿಯಾಗಿದ್ದೆ
ಆಕಾಶಕ್ಕೆ.
ತಂಗಾಳಿಯಾಗಿ ಬೀಸಿತ್ತು ನನ್ನುಸಿರು
ಜಲತರಂಗವ ನುಡಿಸುತ್ತ.

ಹಕ್ಕಿಯ ಚಿಲಿಪಿಲಿಗೆ
ಎಚ್ಚರವಾಗಿ ನಿನ್ನೆ ಸಂಜೆ ಭೂಮಿಯ ಮ್ಯಾಲೆ ಮಡಿಚೆಟ್ಟ ಬಯಲು
ಬಿಚ್ಚಿಕೊಂಡಿತು ಮೆಲ್ಲಗೆ.

ನೀಲೀಗೋಡೆ ಹಿನ್ನೆಲೆಗಿರಲು
ಕೆಂಪು ಹಳದಿಗಳಿಂದ ಪೇಂಟು ಮಾಡಿರ್ಯೋರೊ
ಮೂಡಣ ಬೆಟ್ಟವ.
ಓಡೋಡಿ ಬಂದವು ಬಾನಂಗಳಕ್ಕೆ ಅಗೊ
ಚಿನ್ನದ ಕುದುರೆ ಓಕುಳಿಯಾಡುತ.
ಕನಸಿನ್ಲಲಿ ವಿಹರಿಸಿ ಈಗಷ್ಟೆ ಎದ್ದವನು
ಸೂರ್ಯದೇವನು ಬಂದ ಆಕಳಿಸುತ.

ಬಾನಂಗಣದಿಂದ ಕೆಳಕ್ಕೇ
ನೇರ ನನ್ನೆದೆಗೇ ಅವತರಿಸಿ
ಮುಖಶುದ್ಧಿ ಮಾಡಿಕೊಂಡು
ಕುರುಳು ತೀಡಿಕೊಳ್ಳುತ್ತಿರಲು;

ಅರೆರೇ-
ನನ್ನ ಹೃದಯ ಕಂಪಿಸಿ
ಚಿಳಿಮಿಳಿ ಮೀನು
ತೆರೆ ತೆರೆ ತಳ್ಳಿ
ತಳ್ಳಂಕವಾಡುತ್ತಿರಲು
ಫಕ್ಕನೆಚ್ಚರವಾಯ್ತು!

ಕಂಡದ್ದು ಕನಸಲ್ಲ!
ಕೆರೆಯಲ್ಲ, ನಾನು ಕೆಮೆರಾ ಆಗಿದ್ದೆ!
ಕಣ್ಣಿನ ಪಕಳೆ ತೆರೆದು ಹಿಡಿದ
ಸೂರ್ಯನ ಚಿತ್ರದ
ನೆಗೆಟಿವಿನ್ನೂ ನನ್ನ ಹೃದಯದಲ್ಲಿದೆ೧

ಇದಕ್ಕೆ ನೀನೇ ಪ್ರಮಾಣು
ಸಾವಳಗಿ ಶಿವಲಿಂಗಾ!