ಸಣ್ಣವನಿದ್ದಾಗ ನನಗೂ ಬೇಕೆನಿಸಿದ ಚಂದ್ರ.
ಅವನು ನನ್ನ ಕಡೆ ನೋಡಿದ್ದೆ ತಡ
ಗಕ್ಕನೆ ಹಿಡಿದು ಕಣ್ಣ ಕನ್ನಡಿಯೊಳಗೆ
ಬಂಧಿಸಿಟ್ಟೆ.

ಕಣ್ಣು ಪಂಜರ
ಅದರಲ್ಲಿ ಚಂದಿರ.
ಅವನೊಂದು ಪಕ್ಷಿ,
ನಾ ಅದಕೆ ಸಾಕ್ಷಿ.

ಪಟಪಟ ರೆಕ್ಕೆಯ ಬಡಿದು
ಕನ್ನಡಿಯ ಮನೆಯಲ್ಲಿ ಹೆಂಗಿರಲಿ
ರಾಮ ರಾಮಾ ಅಂದ.

ಕೂಗಬೇಡ ಚಿನ್ನಾ,
ನೀನೇ ನನ್ನ ಪ್ರಾಣ
ರೆಕ್ಕೆ ಪುಕ್ಕ ನೊಂದರೆ
ನನ್ನ ಕಣ್ಣಿಗೆ ತೊಂದರೆ!

ಬೆಳ್ದಿಂಗಳೆಂದರೆ ಅರಳಿದ ಮಲ್ಲಿಗೆಯೆನ್ನು.
ಹಾಗೆಯೇ ಬೆರಗಿನ ಕಣ್ಣೂ ಎನ್ನು.
ಮಗುವೇನ ಮಾಡುತ್ತದೆ?
ಮಲ್ಲಿಗೆಯ ದಳ ದಳ ಕಿತ್ತೆಸೆದುಇ
ಮರೆತು ಕೈ ತಟ್ಟಿ ನಗುತ್ತದೆ.
ದಳ ದಳ ಬಿದ್ದಲ್ಲಿ ತಾರೆಗಳು!
ಇರುಳಿನ ಮುಡಿಗೆ ಇನ್ನಷ್ಟು ಮಲ್ಲಿಗೆ ಹೂಗಳು!

ಬೆಳ್ದಿಂಗಳೆಂದರೆ ಶಬ್ದವಲ್ಲ, ಕಲ್ಪನೆಯಲ್ಲ,
ಕಣ್ಣ ಮುಂದಿನ ಮಾಯೆಯಲ್ಲ,
ಮೈಮರೆಸುವ ಮತ್ತಲ್ಲ.
ಅದಲ್ಲ ಇದಲ್ಲವೆಂದು ಹೀಗಳೆವುದಲ್ಲ!
ಇದೆಲ್ಲವೂ ಅಲ್ಲವೆಂಬ
ಆದರೂ ಹೌದೆಂಬ ನಂಬಿಕೆ.
ನಂಬಬೇಕಣ್ಣಾ ಅದು ಬೆಳ್ದಿಂಗಳೆಂದು೧

ಬೆಳ್ದಿಂಗಳು ಮಲ್ಲಿಗೆ ಹೂವಾಗಿರಲಿ,
ಹೂವಿಗೆ ಬೆರಗಾಗುವ ಕಣ್ಣುಗಳಿರಲಿ,
ಕಣ್ಣುಗಳಲ್ಲಿ ಹೂ ಬಿಂಬಿಸಿ
ಹೂವಿನಲಿ ಕಣ್ಣರಳಲಿ
ಎಂಬ ನಂಬಿಕೆಯಿರಲಲಿ
ಸಾವಳಗಿ ಶಿವಲಿಂಗಾ.