ಮ್ಯಾಲಿನ ನೀಲಿ,
ಕೆಳಗಿನ ಭೂಮಿ,
ಮಧ್ಯೆ ನಾವಿದ್ದೇವೆ
ಹಸಿರಿನ ಹಾಗೆ.

ಮಳೆಯಾಗಿ ಸುರಿದರೂ
ನೀಲಿ ಮ್ಯಾಲೇ ಇದೆ.
ಉಗಿಯಾಗಿ ಮ್ಯಾಲೇರಿದರು
ಭೂಮಿ ಕೆಳಗೇ ಇದೆ.

ಹೆಪ್ಪುಗಟ್ಟಿದ ಪ್ರೀತಿ ಹನಿಯಾಗಿ ಸುರಿದರೂ
ಸುರಿದದ್ದು ಉಗಿಯಾಗಿ ಮತ್ತೆ ಮ್ಯಾಲೇರಿದರು
ಎರಡರ ಮಧ್ಯೆ ನೀರೊಂದೆ ನಿಜ,
ನಮ್ಮ ಪ್ರೀತಿಯ ಹಾಗೆ.

ಹರಿಯುತ್ತದೆ ಪ್ರೀತಿ ಮ್ಯಾಲೆ ಕೆಳಗೆ
ಲಾಳಿಯ ಹಾಗೆ,
ಕತ್ತಲೆ ಬೆಳಕುಗಳ ನೇಯುತ್ತ;

ಇಲ್ಲಿ ಹಾಸು ಹೊಕ್ಕುಗಳ ಹೆಣೆಯುತ್ತ
ಹಸಿರು ಬೆಳೆಯುತ್ತೀಯೋ
ಸಾವಳಗಿ ಶಿವಲಿಂಗಾ.