ಮತ್ತೆ ಬಂದಿದ್ದೇವೆ
ನಮ್ಮ ಎಳೆತನಕ್ಕೆ ಸಾಕ್ಷಿಯಾದ
ನದಿ ದಂಡೆಗೆ;
ಸಾಗರಕ್ಕೆ ನದಿ ಬಂದಂತೆ.

ಅಚಲ ಕುಂತಿದ್ದಾಳೆ ಗೆಳತಿ,
ನದಿಯಲೆಗಳ ಲೀಲೆಯ
ಅವಲೋಕಿಸುತ್ತ.
ಸರಿಯುತ್ತಾವೆ ಒಂದಾದ ಮೇಲೊಂದು,
ಹಾಗೆಯೇ ಇನ್ನೊಂದು,
ಒಂದಲೆಗೆ ಇನ್ನೊಂದಲೆ ಹೆಣೆಯುತ್ತ,
ಹಿಂದೆ ಸರಿಸುತ್ತ, ಮುಂದುವರಿಯುತ್ತ.

ನೆನಪಿದೆಯೇನೆ?:
ಕನಸಿನ ಬಲೆ ಹೆಣೆದು ಯಕ್ಷಿಯ ಚಂದವ
ಹಿಡಿವ ಕವಿತೆ ಕಟ್ಟೋಣವೆಂದು ನೆನೆವಷ್ಟರಲ್ಲಿ
ಮೋಡಗಳ ರಾಡಿಯಲ್ಲಿ ಚಂದ್ರ ಮುಳುಗಿ
ಕತ್ತಲಾವರಿಸಿತು.
ಫಳ್ಳನೆ ಬೆಳಕು ಮಿಂಚಿ
ಚಂದ್ರನೊಳಗಿನ ಜಿಂಕೆ
ಕೆಳಕ್ಕೇ, ಕೋಣೆಯೊಳಕ್ಕೇ ನೆಗೆದಂತೆ
ಕರವಸ್ತ್ರ ಬಿತ್ತು!

ಎತ್ತಿಕೊಂಡರೆ ಘಮ್ಮಂತ ವಾಸನೆ ಅಡರಿ, ನೋಡಿದೆ:
ನಾಲಕ್ಕು ಅಂಚಿನಲಿ ಎಲೆ ಹೆಣೆದು ಹಬ್ಬಿದೆ ಕಸೂತಿಯ
ಬಳ್ಳಿ. ಮೂರು ಎಲೆಗಳಿಗೊಂದು ಕಳಿತ ನೇರಳೆ ಹಣ್ಣು.
ನಡುವೆ ಅರಳಿದೆ ಅಂಗೈಯಗಲ ಕೆಂಪು ಹೃದಯ!

ಬಾಡದ ಮುದ್ದು ಇಟ್ಟಿರಬಹುದು.
ಬಿಸಿ ಇನ್ನೂ ಹಾಗೇ ಇದೆ!
ಅಂಗಿಯ ಎಡಜೇಬಿನಲ್ಲಿಟ್ಟುಕೊಂಡು,
ಹಿಂದೆ ಅಡಗಿನಿಂತ ನೇರಳೆಹಣ್ಣಿನ ಕಣ್ಣಿನವಳಿಗೆ
ಹೇಳಿದೆ:

ಯಕ್ಷಿಯ ನಾನು ಕಂಡಿಲ್ಲ,
ಕಂಡಿರುವೆನೆಂದು ಹೇಳಿದ್ದು ನಿಜ.
ನೀನೇ ಅವಳೆಂದು ಹೇಳುವುದಾದರೆ
ನನ್ನ ತಕರಾರಿಲ್ಲ.

ಎಲ್ಲಿದ್ದೆಯೋ ಮಾರಾಯ್ತಿ, ಸೈ ಅಂತ ನೆಗೆದು
ಗೆಜ್ಜೆಯ ಹೆಜ್ಜೆಯಿಟ್ಟೆ ನೋಡು ನನ್ನ ಕವನಗಳಲ್ಲಿ!-
ವಸ್ತ್ರ ಹಾರಾಡುತ್ತ ಹೊರಟಿತು ಪಯಣ.

ತುದಿಯಿರದ ದಾರಿಯಲಿ ಬೆನ್ನಿಗ್ಯಾರೂ ಇಲ್ಲ
ನೀ ಬಂದಿಯೇ ನನ್ನ ಭವಿಷ್ಯಂತಿ.
ಕಣ್ಣಂಚಿನಲ್ಲಿತ್ತು ಯಾರು ಅರಿಯದ ಕ್ಷಿತಿಜ.
ಹತ್ತು ಬಾ ಎನುತಿತ್ತು ಬಿಸಿಲಗುದುರೆ.

ಗಂಡಿನದೇನಿದ್ದರೂ ಹಂಕಾರದ ಹೂಂಕಾರ
ನನ್ನ ಮುಂದೆ ಯಾರಿಲ್ಲೆಂದು, ದೂರ ಕಂಡ
ತನ್ನ ಬಾಲವ ತಾನೇ ನುಂಗುತ್ತ,
ವೈರಿಯ ಗೆದ್ದೆನೆಂದ ಮತ್ಸ್ಯರಾಜನ ಹಾಗೆ
ಹೂಂಕರಿಸಿದಾಗ ಅನಿರೀಕ್ಷಿತ ಸಾವಿನೇಟಿಗೆ
ಸಾಯುವುದು,-ಇಷ್ಟೆ.

ಹೆಣ್ಣು ಹಂಗಲ್ಲ ನೋಡು:
ಮೈನೆರೆದು ಕನಸಿನ ಗುಲಾಬಿಗೆ ನೀರೆರೆದು
ಅದರ ಸುತ್ತ ನೀಳಗೂದಲ ಬಲೆ ಹೆಣೆದು
ಕಾಯುವದು.
ಗಂಡು ಬಂದು ಗುಲಾಬಿಗೆ ಕೈ ಹಾಕಿದ್ದೆ ತಡ
ಗಪ್ಪನೆ ಹಿಡಿದು ಬಲೆಸುತ್ತಿ, ತೋಳಕೋಳದಲಿ ಬಂಧಿಸಿ
ಗುಲಾಬಿಯ ಮೆಲ್ಲಗೆ ಕಿತ್ತು,
ಮುಳ್ಳು ಹೊರಕ್ಕೆಸೆದು,
ಪರಿಮಳವ ಗಂಡಿಗೆ ನೀಡಿ
ತಾನು ಮಾತ್ರ ಪಕಳೆಯಲಿ ತೃಪ್ತಿಯ ಹೊಂದಿ
ಮುಳ್ಳಿವೆ ಹೊರಗಡೆ ಹೋಗದಿರೆಂದು
ತಾಕೀತು ಮಾಡಿ
ಮನೆಯ ಕಟ್ಟುವುದು

ಮೂರು ತಿಂಗಳಾಯಿತೇ,-
ಸುರು ಬೆರಳೆಣಿಕೆಯ ಲೆಕ್ಕ.
ಹುಣಸೆ ಹಣ್ಣು, ಹಳೆ ಮಣ್ಣಿಗೆ ಮೂಗರಳಿ,
ನೀರಲ್ಲಿ ತೇಲುವಿರುವೆಯ ದಡ ಮುಟ್ಟಿಸಿ
ಸಕ್ಕರೆ ಚೆಲ್ಲುವದು….
ಮಕ್ಕಳು ಮರಿ ಮಾಡಿ, ಅವರ ಹೆರಿಗೆಯನ್ನೂ ಮಾಡಿ
ಕರುಳಬಳ್ಳಿಯ ಹಬ್ಬಿಸಿ
ಸುಖಬಾಳಿರೆಂದು ಬಳಗವ ಹರಸಿ
ಮಕ್ಕಳಿಗಿಂತ ಮುಂಚೆಯೇ ಹೋಗಿ
ಸಾವಿನ ಬಾಗಿಲು ತಟ್ಟುವುದು!

ಗಂಡಿನ ಸಾವುಗಳೆಲ್ಲ ಆಕಸ್ಮಿಕವೆ
ಯಾಕೆಂದರೆ ಸಾವಿಗೆ ಇವನ ಮೇಲೆ
ಇವನಿಗೆ ಸಾವಿನ ಮೇಲೆನಂಬಿಕೆ ಇಲ್ಲ!

ನೆನಪಿದೆಯೇನೆ?-
ಕಟ್ಟಿದ್ದೆವಲ್ಲ ಇಲ್ಲಿಯೇ, ಇದೇ ಮಳಲಿನಲ್ಲಿ ಮನೆಯೊಂದನ್ನ?
ವಿಶಾಲ ಬೆಡ್‌ರೂಮನ್ನ,
ಗೀಚಿದ್ದೆವಲ್ಲ ಜೋಡಿ ಹೆಸರುಗಳನ್ನ!

ಕಲ್ಪಿಸಿದ್ದೆವು ಗೆಳತಿ ಇದೇ ಬೆಡ್‌ರೂಮಿನಲ್ಲಿ
ನಮ್ಮಿಬ್ಬರ ಟೆಕ್ನಿಕಲರಿನ ತಸಬೀರುಗಳನ್ನ
ನೇತುಹಾಕುವ ರೀತಿ ಮತ್ತು ಸ್ಥಳಗಳನ್ನ!

ಈಗ ನೋಡು:
ಮನೆಯಲ್ಲಿ ಮಕ್ಕಳು ನೇತಾಡುತ್ತಿದ್ದ
ಮಳೆಬಿಲ್ಲುಗಳಿಲ್ಲ!
ಹಿತ್ತಲಲ್ಲಿ ಹಸಿರಿಲ್ಲ, ಹುಲ್ಲಿನೆಸಳಿಲ್ಲ!
ಸಂತೆಸೇರಿದ ದುರ್ದೈವಗಳೆಲ್ಲ ತುಳಿದು
ದರೋಡೆಗೊಳಗಾದಂತೆ
ಮಣ್ಣಾಗಿದೆ ಮನೆ.

ಅಳಿದುಳಿದ ಅವಶೇಷಂಗಳಲ್ಲಿ
ಅಲೆದಾಡುತಿವೆ ಎರಡು ಭೂತಗಳು,
ಸವೆದು ಕರಿಬಿಳಿಯಾದ ತಸಬೀರಿನ ಮೇಲಿನ
ಕಾಲನ ಧೂಳೊರೆಸುತ್ತ!
ಭೂತಗಳ ಗುರುತು ಸಿಕ್ಕಿತೆ ಗೆಳತಿ?
ನಾನು ಮತ್ತು ನೀನು!

ದಾಖಲಾಗುವುದಿಲ್ಲ ಕಣ್ಣೀರು, ಚರಿತ್ರೆಯಲ್ಲಿ.
ಬಹುಬೇಗ ಒಣಗುತ್ತವೆ ಒಣ ಹವೆಯಲ್ಲಿ.
ಇಲ್ಲವೆ ಇಂಗಿ ಹೋಗುತ್ತವೆ ಮಣ್ಣಿನಲ್ಲಿ.
ನೋಡು ಅಲ್ಲೇ ಇದೆ ಕಪ್ಪು ಕಲೆ,
ಕಣ್ಣೀರೊಣಗಿ ಉಳಿದದ್ದು.
ನಿನ್ನ ಹೆಸರ ಬರೆದಿದ್ದೇನೆ, ಅದರಡಿಯಲ್ಲಿ,
ಸುತ್ತ ಗೆರೆ ಕೊರೆದು
ನೆನಪಿನ ಗೋರಿಯ ಮೇಲೆ ಬರೆದಂತೆ.

ತಾಳು, ನೆನಪಿನ ಮೇಲಿನ ಕಪ್ಪುಕಲೆಗಳ
ಒರೆಸಿ ಸ್ವಚ್ಛ ಮಾಡುತ್ತೇನೆ.

ಕಾಲು ಉರುಳುತ್ತದೆ, ಋತು ಬದಲಿ
ಏನೇನೋ ನಡೆಯುತ್ತದೆ.
ಅಂದುಕೊಂಡದ್ದು ಆಗೋದಿಲ್ಲ.
ಆದದ್ದಕ್ಕೆ ಸಮ್ಮತಿಯಿಲ್ಲ.
ಕ್ರಮ ಮರೆತ ಕನಸು ತಲೆಕೆಳಗಾಗಿ
ಹಿಂದೆ ಸರಿಯುತ್ತವೆ.
ನಕ್ಕದ್ದು ಅತ್ತಂತೆ, ಕುಣಿದದ್ದು ಲಾಗ ಹಾಕುತ್ತದೆ.

ನಾವು ಆಡಿದ್ದು ಮಾಡಿದ್ದು
ಹರಿದುಹೋಗಿದೆ ನದಿಯ ತೆರಗಳೊಡನೆ.
ನಿನ್ನೆಯ ಸತ್ಯ ಇಂದಿನ ಚೇಷ್ಟೆಯಾಗಿ
ಕೂಸು ಜೋಗುಳ ಹಾಡಿ ನಮ್ಮನ್ನ ಮಲಗಿಸುತ್ತಿದೆ!

ಯೌವನದ ದಿನಗಳು ಹಿಂದೆ ಸರಿದ ಹಾಗೆ
ನಾವು ದುರ್ಬಲರಾಗಿ ಸಣ್ಣಸಣ್ಣವರಾಗಿ
ಪರಸ್ಪರ ಮುಟ್ಟುವುದರೊಳಗೆ
ನಡುವೆ ಬಂದು ಬಿಟ್ಟಿದೆ ದೇಹ
ಪ್ರೀತಿಯನ್ನಳೆವ ಮಾಪಕವಾಗಿ!

ಗಾಳಿ ಬೀಸಿದಾಗೊಮ್ಮೆ ಸವೆಯುವುದದರ ಚಾಳಿ.
ಹಸುಗಾಯಿ ಹಣ್ಣಾಗಿ ಮಾಗಿದನುಭವದ ಕಳೆ
ನಿನ್ನ ಮುಖದಲ್ಲೀಗ ಹೊಳೆಯುತ್ತಿದೆ.
ಕೊಡುವುದೇನೋ ಇತ್ತು ಪಡೆವುದೇನೋ ಇತ್ತು
ಕೊಟ್ಟು ಪಡೆದೆವು ಏನೆಂದು ತಿಳಿಯದೇನೆ.
ಕಸಿಯಬಲ್ಲನೆ ಹೊರತು ಕೊಡಲುಬಾರದ ಕಾಲ
ನಮಗ್ಯಾಕೆ ಬೇಕು ಅಂಥವನ ಗೊಡವೆ?

ನನಗಾಗಿ ಒಂದಷ್ಟು ಆಯುಷ್ಯವನ್ನ
ಇಟ್ಟಿದ್ದರೆ-ಬಾ ಇತ್ತ.
ಬದುಕುವುದಕ್ಕೆ ಏನು ಬೇಕು?
ಒಂದಷ್ಟು ಭ್ರಮೆಗಳು, ಅಷ್ಟಿಷ್ಟು ಕನಸುಗಳು!
ತರುಣ ಕನಸುಗಳುಂಟು, ಹಸೀ ಭ್ರಮೆ ನೂರುಂಟು!
ಮೈಚಳಿ ಬಿಟ್ಟ ಮುದಿಮರವೂ ಚಿಗುರಲುಂಟು!
ಕೊಡುವುದಕೆ ಪಡೆವುದಕೆ ಇನ್ನು ಇದೆ ಅಷ್ಟಿಷ್ಟು
ಕ್ಷಿತಿಜವನ್ನು ಎತ್ತಿಹಿಡಿಯಲು ಇಷ್ಟು ಸಾಕು.