ಲೋಕದಲ್ಲಿರೋದು ಏಕಮೇವ ಸತ್ಯವೆಂತೋ
ಅಂತೆ ವಿಶ್ವಕೊಬ್ಬನೇ ಸೂರ್ಯ-ಅದು ನಾನೇ!
-ಅಂತ ಕೊಚ್ಚಿಕೊಂಡ ಸೂರ್ಯನನ್ನು ಕೇಳಿದಳಂತೆ
ಸಂಜ್ಞೆ ಎಂಬ ಮಡದಿ:

ಅಧೆಂಗಾದೀತು ಪತಿದೇವನೆ,
ಪ್ರೀತಿಗೆ ಎರಡಾದರೂ
ಸಂದೇಹಕ್ಕೆ ಸಾವಿರ ಸತ್ಯಗಳಲ್ಲವೆ?

ಹೆಂಗಸು ಬುದ್ಧಿಗೆ ಹೊಳೆವುದಿಷ್ಟೇ ಎಂದು
ಸುಮ್ಮನಾದರು  ಸೂರ್ಯನಾರಾಯಣಸ್ವಾಮಿ.
ಸುಮ್ಮನಾಗಲಿಲ್ಲ ಮಡದಿ!

ಭೂಮಿಯ ಮ್ಯಾಲಿನ ತನ್ನ ನೆರಳಿಗೇ
ಜೀವ ಭರಿಸಿ, ‘ಛಾಯೆ’ ಎಂದು ಹೆಸರು ಕೂಗಿ,
ನೀನು ನನ್ನಂತಾಗಿ ಗಂಡನ ಕೂಡೆಂದು
ಕಳಿಸಿದಳು ಸೂರ್ಯನ ಬಳಿಗೆ.

ಹುರಿಗೊಂಡ ಬುಗುರಿ ಸೂರ್ಯ
ಅಸಲಿ ನಕಲಿಗಳ ಗುಟ್ಟುತಿಳಿಯದೆ
ನೆರಳಿನ ಒಳಸುಳಿಗಳ ಸೆಳೆತಕ್ಕೆ ಒಳಗಾಗಿ
ಕೂಡಿಯೇ ಬಿಟ್ಟ ನೆರಳಿನ ಜೊತೆಗೆ!

ಎಷ್ಟೆಂದರೂ ಭೂಮಿಗೆ ಹುಟ್ಟಿದ ಚಂಚಲ
ನೆರಳಲ್ಲವೇ ಛಾಯೆ?
ಗಂಡ ಸನಿಹದಲ್ಲಿದ್ದಾಗ ವಿನಯದಲಿ
ಕರಗಿ ಕಾಣದಿದ್ದವಳು,
ದೂರದಲ್ಲಿದ್ದಾಗ ಬೆಳೆದು ಅರ್ಧ ಭೂಮಿ-
ಯನ್ನ ಆವರಿಸಿದಳು!

ನೆರಳು ಕೆನೆಗಟ್ಟಿ ಕತ್ತಲಾಗುವ ಮಡದಿಯರ
ಗುಟ್ಟು, ಕೊನೆಗೂ ತಿಳಿಯಲಿಲ್ಲ ಬೆಳಕಿನ ದೇವರಿಗೂ!

ಲೋಕವ ಬೆಳಗುವ ಬೆಳಕಿಗೆ
ಭೂಮಿಯ ಬುಡ ಕಾಣದ ಕುರುಡು!

ಇಷ್ಟಾಯಿತಲ್ಲ, ಸೊಂಟದ ಬಿಸಿ ಆರಿದ ಮ್ಯಾಲಾದರೂ
ಮಡದಿಯ ನಿಜ ತಿಳಿದನ?
ಕೂಡಿದ ನೆರಳು ಮೂಲವಲ್ಲ, ಎಂದರಿತನ?
ಬಿಡುದ ದೇವರ ವಿಷಯ ನಮಗ್ಯಾಕೆ?

ಇತ್ತ ಛಾಯೆಯ ಹಸನಾದ ಮೋರೆಯಲಿ
ಶಿಶು ಜನನದ ಬೇನೆ ತಲೆದೋರಿ
ಮೂಡುಬೆಟ್ಟದ ತುಂಬ ಬಾಣಂತಿಯ ಸಡಗರ!
ಕೋ ಅಂತ ಬೆಳಗಿನಬ ಕೋಳಿ ಕೂಗಿ,
ಸೂರ್ಯದೇವರು ಕದ ತಟ್ಟಿದರೆ ಅಗೋ ಅಗೋ-
ಬೊಗಸೆ ತುಂಬ ಮುಂಜಾನೆಯ ಹಿಡಿದುಕೊಂಡೇ
ಬಂದವೆರಡು ಮಕ್ಕಳು: ಶನಿ ಮತ್ತು ಯಮವ!
ನಮ್ಮನ್ನು ಕಾಡುವುದಕ್ಕೆ ಇನ್ನೆರಡು ಸತ್ಯಗಳು!

ಈಗ ಹೇಳು: ಲೋಕದಲ್ಲಿರೋದು ಒಂದು ಸತ್ಯವ?
ಹಗಲಿಗೊಂದೇ ಕಣ್ಣಾದರೆ ಕತ್ತಲೆಗೆ ಸಾವಿರ!
ಹಗಲಿಗೆ ಒಂದೇ ಸತ್ಯವಾದರೆ, ಕತ್ತಲೆಗೆ
ಕಣ್ಣು ಹೊಡೆದು ಚಳ್ಳೇಹಣ್ಣು ತಿನ್ನಿಸುವ
ಸತ್ಯಗಳು ಸಾವಿರಾರು!

ಚಿತೆಯ ಗತಿಗಾಣದೆ
ಅನೇಕ ನಕ್ಷತ್ರಗಳು ಸತ್ತಿದ್ದಾವೆ ಆಕಾಶದಲ್ಲಿಲ,
ನಮ್ಮ ಪಾಲಿಗಿನ್ನೂ ಅವುಗಳ ಬೆಳಕಿದೆ!
ಕೆಲವು ಇತ್ತೀಚೆಗೆ ಹುಟ್ಟಿದ್ದಾವೆ,
ಅವುಗಳ ಬೆಳಕಿನ್ನೂ ತಲುಪಿಲ್ಲ ನಮಗೆ!
ಸೂರ್ಯನಿಗೆ ಇದ್ಯಾವುದರ ಅರಿವೂ ಇಲ್ಲ!

ಹೋಗಲಿ ಆಕಾಶದ ನೆಲೆಗಟ್ಟು ನೀಲಿ ಎಂದನಲ್ಲ ಸೂರ್ಯ,
ಅದಾದರೂ ನಿಜವೇ ಹೇಳಿ.
ಸೂರ್ಯನಿಗೆ ಕ್ಯಾರೇ ಅನ್ನದ, ಅವನಿದ್ದಾಗ ನಂದಿ
ಇಲ್ಲದಾಗ ಬಡಿವಾರ ಮಾಡುವ ತಾರೆಗಳೆಷ್ಟೋ ಇವೆ
ನಮ್ಮೀ ವಿಶ್ವದಲ್ಲೆ! ಅದು ಗೊತ್ತೆ ರವಿಗೆ?
ಇದೂ ಹೋಗಲಿ, ಸೂರ್ಯನೂ ಒಂದು ದಿನ
ಇದ್ದಿಲಾಗುವ ತಾರೆ ತಾನೆ? ಬಿಡು ಬಿಡು.
ಮೂಲವೆಂದು ಭ್ರಮಿಸಿ ನೆರಳಿನೊಂದಿಗೇ
ಸಂಸಾರ ಮಾಡಿದವನಿಗೆ
ಕಣ್ಣಿವೆಯೆಂದು ನಂಬುವುದು ಹ್ಯಾಗೆ?

ಸೂರ್ಯನಿಗೆ ಬಿದ್ದ ನಮ್ಮೀ ನೆರಳು
ನಮ್ಮ ಸತ್ಯದ ತಿರುಳು!
ಇಷ್ಟು ತಿಳಿದರೆ ಸಾಕು.