ಅವ್‌ ನೋಡ ಕೊಳಲೂದಿ ಕುಣಿಯುವ ಹುಡುಗ
ಹುಚ್ಚು ಕೆರಳಿಸತಾನ ಅಂಗಾಂಗದೊಳಗ
ಹೆಗಲಿನ ಗೊಂಗಡಿ ನೆತ್ತೀ ತುರಾಯಿ
ಗರಿಬಿಚ್ಚಿ ಕುಣಿಧಾಂಗ ಶ್ರಾವಣದ ಸೋಗಿ||

ಕಲ್ಲೆಂದು ಮೆಲ್ಲಗೆ ಸೊಲ್ಲಿಲ್ಲದೆ ಬಂದಾ
ಎಡದ ಕೈಯಲಿ ಎನ್ನ ಸೋರ್ಮುಡಿಯ ಹಿಡಿದಾ
ಬಲಗೈಲಿ ಮುಡಿಗೆ ಮಲ್ಲಿಗೆ ಸುತ್ತಿ ನಲಿದಾ
ಮುಂಗುರುಳು ನ್ಯಾವರಿಸಿ ಕಣ್ಣು ಹಬ್ಬಾದ||

ತಡೆಯಲಾಗಲೆ ಇಲ್ಲ ನಮ್ಮ ಮೈ ನವಿರಾ
ಮೈತುಂಬ ಸಳಸಳ ತುಳುಕ್ಯಾವ ಬೆವರಾ
ಹಟ್ಟೀ ಸ್ವಾಮಿಯೆ ನಿನ್ನ ಕಟ್ಟಳೆಯ ಹೊರತಾ
ಅರೆಗಳಿಗೆ ಇರಲಾರೆ ನಾ ನಿನ್ನ ಮರೆತಾ||

ನಿಲ್ಲೊ ಗೊಲ್ಲರ ಹುಡುಗ ಕೊಳಲೂದಬ್ಯಾಡ
ನಮ್ಮ ರಾಗದ ಹುಚ್ಚ ಕೆರಳಿಸಬ್ಯಾಡ
ಮಂದಿ ಏನಂದಾರು ನಾ ಹಿಂದೆ ಬರಲು
ವಾರೀಗಿ ದೇವರು ಕೋಪಗೊಂಡಾರು||

ತಿಳಿಯಬಲ್ಲವರೆಲ್ಲ ತಿಳಿ ಹೇಳಿರವ್ವಾ
ಸುರರ ಜಾತಿಗೆ ನಾನು ಹೊರತಾದೆನವ್ವಾ
ನಾವು ಹಂಗಿಗರವ್ವ ಚೆಲುವನ ಕಲೆಗೆ
ಕಲೆಯೊಂದಿಗೇ ಇವನ ಮುಗ್ಧ ಒಲುಮೆಗೆ||