“ನಿನ್ನ ಇಂದಿನ ಪ್ರೀತಿಯ ಬಗ್ಗೆ ಹೇಳೆ” ಂದಳು ಗೆಳತಿ.

ಮುಗಿದ ನಿನ್ನೆ ಬೆನ್ನಿಗಿದೆ. ಬರುವ ನಾಳೆ ಎದುರಿಗಿದೆ.
ನಿನ್ನೆ ನಾಳೆಗಳಿಂದ ಭಿನ್ನವಾಗಿಸಿ ಹೇಳಬಹುದೆ
ಇಂದಿನ ಪ್ರೀತಿಯನ್ನ ಭಾಷೆಯಲ್ಲಿ?

ವಾಕ್ಯವ ಹೇಳುವ ಮೊದಲು ಕರ್ತೃವಿನ ಆಯ್ಕೆಯಾಗಬೇಕು.
ಕ್ರಿಯಾಪದದ ಹೊಣೆ ಅರಿತವನು, ಅವ್ಯಯ ಪ್ರತ್ಯಯಗಳ
ವ್ಯವಹಾರ ಬಲ್ಲವನು, -ಅಂಥವನಿಗೆ ಇದ್ದರೆ ವಿಶೇಷಣ,
ಬಿರುದಾವಳಿಗಳ ಅಂಟಿಸಿ ಹುರಿದುಂಬಿಸಬೇಕು. ಅವನೇ
ತನ್ನ ಪ್ರಯಾಣದ ಉದ್ದೇಶ, ಗುರಿ, ಕಾರಣಗಳ ಶೋಧಿಸಿ,
ಕರ್ಮದ ಕರ್ಮತ್ರಯ ಸೋಸಿ, ಇಲ್ಲಿಯತನಕ
ತರಬಲ್ಲಷ್ಟು ಕರ್ಮವ ಹೊತ್ತು
ಮುಂದಡಿ ಇಡಬೇಕು.

ಪ್ರಸ್ತುತದಲ್ಲಿ ‘ನಾನು’ ಕರ್ತೃವಾದರೆ ‘ನೀನು’ಕರ್ಮ.

ನಿನ್ನಂಥ ಭಾರವಾದ ಕರ್ಮವ ಹೊರಲು
ಕರ್ತೃ ಧೀರನಾಗಿರಬೇಕಲ್ಲವೆ?
ಹೊರುವುದಕ್ಕೆ ಅರ್ಹವಾದ ಕರ್ಮವೆಂದಾದರೆ ಅದಕ್ಕೂ
ಅಂದರೆ ನಿನಗೂ ವಿಶೇಷಣ ಇರಲೇಬೇಕಲ್ಲವೆ?
ಪ್ರೀತಿಯ ಮಾತು ನೋಡು: ಶಬ್ದಗಳಲ್ಲಿ
ಮಾದಕ ಮಾಧುರ್ಯವಿರಬೇಕು. ಅಕ್ಕಪಕ್ಕದ ಪದಾರ್ಥಗಳು
ಕೈಕೈ ಹಿಡಿದು ಕರ್ಮದ ಭಾರವ
ಸಮನಾಗಿ ಹಂಚಿಹೊರುವಂತೆ ಪದಮೈತ್ರಿ ಇರಬೇಕು.

ಇಗೊ:
“ಧೀರನಾದ ನಾನು ಸುಂದರಿಯಾದ ನಿನ್ನನ್ನು”
ಹೊತ್ತು ಮುಂದಡಿ ಇಡಬೇಕು.

ನಮಗಿನ್ನೂ ಕ್ರಿಯಾಪದ ಸಿಕ್ಕಿಲ್ಲವೆಂದು ನೆನಪಿರಲಿ.
ಕ್ರಿಯೆಯೇ ಪ್ರೀತಿಯ ಪ್ರಾಣ. ಅದಿಲ್ಲವೋ
ನಡುನೀರಿನಲ್ಲಿ ನಮ್ಮ ಪ್ರೀತಿಯ ವಾಕ್ಯ ಮುಳುಗಡೆಯಾಗಬೇಕಷ್ಟೆ.
ಅವಸರ ಬೇಡ: ಮಧ್ಯೆ ವಿರಾಮದಲಿ ನಿಂತು,
ಅರೆವಿರಾಮದಲಿ ತಂಗಿ, ದಣಿವಾರಿಸಿಕೊಂಡು;
ಮುಂದುವರಿಯಲಿ ವಾಕ್ಯದ ಯಾತ್ರೆ.

ಆಗಲೇ ಚಡಪಡಿಸುತ್ತಿದೆ ಕ್ರಿಯಾಪದ, ವಾಕ್ಯದ
ನಡೆಯ ತರುಬಿ.
ಎದುರಿಗೆ ಥರಾವರಿ ಕ್ರಿಯಾಪದಗಳಿವೆ ಸಾಲಾಗಿ. ನಿಷೇಧವೇ?
ಗುಣಾತ್ಮಕವೆ? ಸಮುಚಿತವಾದ ಕ್ರಿಯಾಪದದ ಆಯ್ಕೆ
ಮಾಡಿಕೊಳ್ಳಬೇಕು:
“ಧೀರನಾದ ನಾನು ಸುಂದರಿಯಾದ ನಿನ್ನನ್ನು… ಪ್ರೀತಿಸುವೆ”
ಎನ್ನಬೇಕಲ್ಲವೆ?-ಹಾಗಂದರೆ ಭವಿಷ್ಯತ್ಕಾಲವಾಯಿತು!
ಗೊತ್ತಿಲ್ಲದ ನಾಳೆಯೆಂದರೆ-ಅದು ಆಸೆ ಇಲ್ಲವೆ ಮೋಸಗಳ
ಮಾಯಾಲೋಕ! ಮುಂದಿನ ಪ್ರೀತಿಯ ಬಗ್ಗೆ ಇವತ್ತೇ
ಹೇಳುವುದು ಹ್ಯಾಗೆ? ನಾಳೆಯ ಬಿಸಿಲುಗುದುರೆ ಏರಿದವರು
ಬಯಸಿದ ಗುರಿ ತಲುಪುವ ಗ್ಯಾರಂಟಿ ಏನಿದೆ?
ಬದಲು-
“ಪ್ರೀತಿಸಿದೆ” ಎಂದರೆ ನಿನ್ನೆಯ ವಿಚಾರವಾಯಿತು.
ನಮಗೆ ಬೇಕಾದ್ದು ಇಂದಿನೀಕ್ಷಣದ ಪ್ರೀತಿ!

ಕರ್ತೃವಿಗೋ ಹೊತ್ತ ಕರ್ಮದ ಭಾರ.
ಕ್ರಿಯಾಪದ ಕಾಲೂರುವತನಕ ಕೆಳಕ್ಕಿಳಿಸುವಂತಿಲ್ಲ.
ಕ್ಷಿತಿಜದ ಆಚೆಗಿರುವ ನಾಳೆ ಸರಿಯುತ್ತಿದೆ ಮುಂದೆ ಮುಂದೆ.
ಹೆಜ್ಜೆಹೆಜ್ಜೆಗೆ ಭಾರವಾಗುವ ಕರ್ಮ ಹೆಗಲ ಮೇಲೆ. ಭೂತ ಭವಿಷ್ಯದ
ಎರಡು ಎಜ್ಜುಗಳ ಬೆಸೆವ ಜಿನುಗು ಬ್ರಿಜ್ಜಿನ ಮೇಲೆ
ನಿಂತಿದ್ದೇನೆ, ಜಾರುತ್ತಿದೆ ಕಾಲ. ಕೆಳಗೆ ಹರಿಯುವ ನೀರು!
ಕೇಳು ಪ್ರಿಯೆ-
“ಧೀರನಾದ ನಾನು ಸುಂದರಿಯಾದ ನಿನ್ನನ್ನು ಪ್ರೀತಿಸುವೆ ಅಲ್ಲ ಪ್ರೀತಿಸಿದೆ!”

“ವಾಕ್ಯದ ಕೊನೆ ಅವಸರವಾಯ್ತು, ಅಷ್ಟೇ ಕಹಿಯಾಗಿತ್ತು.
ಆಗಲೇ ಬಾಗಿದೆ ಸಂಜೆ ಕ್ಷಿತಿಜದಗುಂಟ.
ವಾಕ್ಯದ ಶಬ್ದಗಳು ಸ್ಮಾರಕಗಳಾಗಿ
ನಮ್ಮೆರಡು ಭೂತಗಳು ಮೂಡಿವೆ ನೀರಿನಲ್ಲಿ!”

“ಹಿಂದಣ ನೆನಪು ಮುಂದಣ ಕನಸು
ಇಂದಿನೀಕ್ಷಣ ಪ್ರತ್ಯಕ್ಷವಾಗುವುದು ಸಾಧ್ಯವಿಲ್ಲವೆ?”

“ಬಯಲಗಾತ್ರಕ್ಕೆ ಬಲೂನುಬ್ಬಿದರೂ
ತೂಕವಿರುವುದಿಲ್ಲ.
ಬಲೂನಿನಲ್ಲಿರುವ ಗಾಳಿಗೆ
ಮಾತೇ ಬರುವುದಿಲ್ಲ!”

ಅದಕ್ಕೇ
ಭಾಷೆ ಅಭಾಷೆಯಾಗಿ ಶಬ್ದ ನಿಶ್ಯಬ್ದವಾಗಬೇಕೆಂದ
ಸಾವಳಗಿ ಶಿವಲಿಂಗ.