ಅಂಬಾರದಾಚೆಯ ಬಯಲ ತುಂಬಿ
ಅಂಬುಜವರಳಿದೆ ಅಲ್ಲಿ,
ದುಂಬಿಯೊಂದು ಹಂಬಲಿಸಿ ಹಾಡುತಿದೆ
ಬಂಡೆ ಬೆಟ್ಟದಲ್ಲಿ.

ಪ್ರತಿಮಾಯೋಗದ ಚಿತ್ರ ಚರಿತ್ರನು
ಹುರಿಗೊಂಡಿದೆ ಬೆನ್ನು.
ಎಷ್ಟು ಭೇದಿಸಿದರಷ್ಟು ಅಭೇದ್ಯನು
ಬೆರಗಾಗಿದೆ ಬಾನು.

ಸಿರಿಭೂವಲಯದ ಸೀಮೆ ಸಾಲದೇ
ನಿಸ್ಸೀಮದ ಬಯಕೆ,
ಹೊದ್ದ ಮರೆವನೇ ಹರಿದು ಎದ್ದನೋ
ಮಿರಿಲೋಕದ ಗುರಿಗೆ.

ಮಣ್ಣಿನಲಿ ಹುಟ್ಟಿ ಮುಗಿಲಿನಲ್ಲಿ ತಲೆ
ಎತ್ತಿದವಗೆ ಶರಣು.
ಎರಡು ಲೋಕಗಳ ಗೂಢವರಿವ ಪರಿ
ಹೇಳಿದವಗೆ ಶರಣು.