ಹೇಳ ಕೇಳದೆ ಸುಳಿದರ್ಯಾರ
ನಮ ಸೀಮೆಯಲಿ|
ತಿಳಿಸದೆ ಬಂದವರ್ಯಾರ ||ಪ||
ಆಡುತಾಡುತ ಬಂದು
ಬಂದ ದಾರಿಯ ಮರೆತು
ಚಿತ್ತದಲಿ ಚಕಿತರಾದವರಾ||ಅ.ಪ||

ತೆಳ್ಳಾನ ಹೊಟ್ಟೆವಳು ತಾವರೆಯ ಮುಖದವಳು
ಬ್ಯಾರೇ ಸೀಮೆಯ ನಿಲುವು ಶೈಲಿ|
ಹ್ಯಾಗೆ ಸಂಪಿಗೆ ಮೊಗ್ಗು ಹಾಗೆ ಆಕೆಯ ಮೂಗು
ಕಂಗಳೆಂದರೆ ಕಮಲ ನೀಲಿ|
ಮೊಲೆಗಳ ಭಾರಕೆ ಬಾಗಿದ ಬಾಲೆಯ
ಮುಡಿಯಿಂದ ಜಗಳ್ಯಾವು ಹೂವು||

ಮಾರಿ ಸಣ್ಣದು ಮಾಡಿ ದೂರದಲಿ ನಿಂತಾಳು
ತಿಳಿಯ ಬೆವರಿತ್ತು, ಹಣೆಯೊಳಗೆ|
ಅತಿಶಯದ ಕುಸುಮದ ವಾಸನೆ ಎಸೆದಾವು
ಸರಿದು ಬಂದಳು ಕ್ಷಿತಿಜದಂತೆ|
ಬೆದರಿದ ಎರಳೆಯೊ ದೇವರ ತರಳೆಯೊ
ನಿಜವ ತಿಳಿದವರ್ಯಾರು ಮಾಯೇ| ನಿಮ್ಮ||

ಯಾವುದೊ ಹೊಸಚಂದ್ರ ಭೂಮಿಗಿಳಿಧಾಂಗಿಹುದು
ಕಾಮಿತ ಫಲಿಸಿದ ಹಾಂಗ|
ಮೂರು ಲೋಕದ ಸುಖದ ಶಿಖರದ ಮ್ಯಾಗಿಂದ
ಕನಸು ಕೆಳಜಾರಿದ ಹಾಂಗ|
ಸಣ್ಣ ಮಿಂಚಿನ ಹಾಂಗ ಕಣ್ಣು ಹೊಡೆವಳು ಕನ್ಯೆ
ಚಿಮ್ಮುವ ಚಿಲುಮೆಯ ಹಾಂಗ|| ಹೆಂಗ?||