ಯಾರೋ ಗೂಡಿನ ಮುಂದೆ ಓಡಿ ಬಂಧಂಗಾಯ್ತು,
ಕದ ಬ್ಯಾಗ ತಗೀರೆಂದು ಕೂಗಿಧಂಗಾಯ್ತು.
ಅಬ್ಬೆ ಕದ ತೆರೆದರೆ,
ಕದ ತಳ್ಳಿ ಒಳನುಗ್ಗಿ
ಬೆನ್ನ ಹಿಂದಿಲೆ ಕದ ಮುಚ್ಚಿ ನಿಟ್ಟುಸಿರಿಟ್ಟ-
ಗುರುತಿಲ್ಲದ ಯಾರೋ ಪರವೂರಿನವ.

ಬೆಂದಹೂವಿನ ಹಾಗೆ ಎಳೆಯ ಮುಖ ಬಾಡಿತ್ತು.
ಮೈ ಮುಖ ಧೂಳಿನಲಿ ಉರುಳಾಡಿಧಂಗಿತ್ತು.
ಓರೆಗೂದಲು ಕಟ್ಟಿ ನವಿಲುಗರಿ ಸಿಗಿಸಿದ್ದ.
ಮುರಿದ ಕೈದುಗಳ ಕೈಯಲ್ಲಿ ಹಿಡಿದಿದ್ದ.

ಮೊನಚಾದ ನಕ್ಷತ್ರ ಎದೆಯೊಳಗೆ ನಾಟಿತ್ತು ,
ಹನಿ ಹನಿ ನೆತ್ತರು ನೆಲಕೆ ಸೋರಿತ್ತು.
ಬೇಟೆಯಲಿ ನೊಂದ ಮಿಗ ನರಳಿಧಂಗಿತ್ತು,
ಹಿಂದಿನಿಂದ್ಯಾರೊ ಬಂದಾರೆಂಬ ಭಯವಿತ್ತು.

ಕದಕೆ ಅಗಳಿಯ ಹಾಕಿ
ಹಡೆದವ್ವಾ ರಕ್ಷಿಸೆಂದ.
ಒಳಗಿದ್ದ ಕತ್ತಲ ಕಂಡು ಬದುಕಿದೆನೆಂದ,
ಅಂಬೆಗಾಲಿಡುತ ಅಬ್ಬೆಯ ಬಳಿಬಂದ.

ಬೆಂಬತ್ತಿ ಬರುವವರು ಯಾರು ಕಂದಾ?
ಎಂದಳಬ್ಬೆ. ಅವನಂದ:
ಚಂದ್ರ ಬರುತ್ತಿದ್ದಾನೆ ಹಿಂದಿನಿಂದ

ಯಾ ರೂಪದಿಂದಲೋ ಯಾ ಮಾಯೆಯಿಂದಲೋ
ಬೇಟೆಯಾಡುತ ಚಂದ್ರ ಬಂದೆ ಬರುವ,
ಈ ನಿನ್ನ ಕಂದನ್ನ ಕಾಪಾಡೆ ಎವ್ವ.

ಅವ್ವಾ ಅಂದನೆ ಕಂದ-ಅಜ್ಜಿಯ ಮೊಲೆತುಂಬಿ
ಚಿಲ್ಲಂತ ಚಿಮ್ಮಿದವು ಹಾಲು!
ಹಾಲು ಕಂಡದ್ದೆ ಹೋ ಹಾಲು ಬೆಳ್ದಿಂಗಳಿನ
ಚಂದ್ರ ಬಂದನು ಎಂದು ಸೆಟೆದು ಬಿದ್ದ!