ಹೆಜ್ಜೆ ದನಿ ಕೇಳುವುದು ರಾತ್ರಿ,
ನೆರಳೊಂದು ಬಾಗಿಲತನಕ ಬಂದು
ಅನುಮಾನಿಸುತ ನಿಂದು-
ಬಾಗಿಲು ತೆರೆಯ ಹೋದರೆ
ಮಾಯವಾಗುವುದು ಕಳ್ಳ ಹೆಜ್ಜೆಯನಿಡುತ!

ಬಂದ ಉದ್ದೇಶವ ಮರೆತು
ಅವಸರದಲ್ಲಿ ಮರೆಯಾಗುವ,
ನನ್ನನ್ನೇ ಹೋಲುವ ಸದರಿ ನೆರಳು
ಯಾರದು?

ಇನ್ನೊಬ್ಬರ ನೆರಳಲ್ಲಿ ಕರಗುವುದ ಕಲಿತು
ಸ್ವಂತಕ್ಕೆ ನೆರಳಿಲ್ಲದಾದೆಯೋ
ಸಾವಳಗಿ ಶಿವಲಿಂಗ!