ಆಟಕ್ಕೆ ಹೋಗಿದ್ದ ಮೊಮ್ಮಗಳ ಕಾಯುತ್ತ
ಅಜ್ಜ ಕೂತಿದ್ದ ಪಾರ್ಕಿನಲಿ.
ಮೈ ಕೊರೆವ ಚಳಿಯಿತ್ತು, ಗಾಳಿ ಜೋರಾಗಿತ್ತು
ಮುದಿ ಮರವೆ ಅಲುಗಿತ್ತು ಪಕ್ಕದಲ್ಲಿ.

ಹಕ್ಕಿ ಉಲಿದಂತಾಯ್ತು ಮರದಲ್ಲಿ, ನೋಡಿದರೆ
ಬರಡು ಟೊಂಗೆಯಲೊಬ್ಬ ಮರಿದೇವತೆ;
ಎಳೆಯ ನಗೆಗಳ ನಕ್ಕು ಬಲಿತ ಶಬ್ದಗಳಲ್ಲಿ
ಕೇಳಿದಳು “ಮುದಿಯನೆ ಚಳಿಯೆ ನಿನಗೆ?”

ದೇವತೆಯ ದರುಶನಕೆ ಹರುಷಗೊಂಡನು ಮುದುಕ
ಅವಳ ಬಿರುನುಡಿಗಳಿಗೆ ಖೇದಗೊಂಡ.
ಶಾಲು ತಂದಿರಲಿಲ್ಲ ಥಂಡಿ ಹಿಂಡುತ್ತಿತ್ತು
ಕತ್ತು ಅಲುಗಾಡಿಸುತ ಬೇಡವೆಂದ.

ಇದ್ದುದಿದ್ದಂತೆಯೇ ಮುದಿಹೊಂಗೆ ಮರದಲ್ಲಿ
ಮಾಂದಳಿರು ತೂಗಿ ಕೋಗಿಲೆಯು ಕೂಗಿ
ಸುತ್ತ ತರುಮರ ಜಾತಿ ತೇಲಿದವು ಹಸಿರುಡೆಯ
ಚೈತ್ರ ಮಾಸದ ಹಿತದ ಸಡಗರದಲಿ.

ಬೆಚ್ಚಿದನು ಮುದುಕ ಅನಿರೀಕ್ಷಿತಕೆ. ಇದಕೆಲ್ಲ
ದೇವತೆಯ ಮಹಿಮೆ ಕಾರಣವೆ?
“ಅನುಮಾನವೆ ನರನೆ? ಹೇಳಿಂಥ ಅಘಟಿತವ
ಯಾರು ಮಾಡಲು ಸಾಧ್ಯ ನಾನಲ್ಲದೆ?

ಇದೊ ಬಂತು ಹೊಸಗಾಳಿ ಚಳಿ ಹೋಯಿತೇ ಮುದುಕ?
ನಾ ಯಾರ ಮಗಳೆಂದು ಗೊತ್ತಾಯಿತೇ?”
“ಮೈ ಬೆಚ್ಚಗಾಯಿತು ಧನ್ಯವಾದಗಳಮ್ಮ
ನನ್ನ ಅರಿವಿಗು ಬಂತು ನಿನ್ನ ಮಹಲಿಮೆ.

ಅಗೊ ಆಡಿ ಬಂದರು ಪುಟ್ಟ ದೇವರ ಹಿಂಡು
ಹಿಗ್ಗಿನ ಬಾಗಿಲು ತೆರೆದುಕೊಂಡೇ.
ನೀನು ಮಾಡಿದ ಚೈತ್ರಕೆಲ್ಲ ಹೂಮುಡಿಸಿದರು
ಅವರ ನಗೆ ಅರಳಿ ಹೊಂಬಿಸಿಲಾಗಿದೆ.

ಮಂಜೀನ ಒಳಗಿಂದ ಮುಂಜಾವು ಹೊಳೆದಂತೆ
ನನ್ನ ಕಡೆ ಬರುವಳಗೊ ಮರಿದೇವತೆ
ನಗೆಗೊಂದು ಹೊಸ ವಸಂತಗಳ ತರುವಳು ಮನೆಗೆ
ಅವಳ್ಯಾರ ಮೊಮ್ಮಗಳು ಗೊತ್ತಾಯಿತೇ?”