ಕ್ಷಿತಿಜದ ಮ್ಯಾಲೆ
ಹಾರಾಡುವ ಗಾಳಿಪಟವ ನೋಡಿದ ಹುಡುಗ
ತನಗಿಲ್ಲದ್ದಕ್ಕೆ ಮರಗುತ್ತ ನಿಂತಿರಲು-
ಫಳ್ಳನೆ ಎಳೆಬಿಸಿಲು ಹೊಳೆದು
ಜಂಗಿನುಲಿಯ ಮುದಿಜಂಗಮ ಬಂದ.
ಬಾರೊ ಹುಡುಗಾ ಅಂದ.
ಬಂದರೆ ಮೊರದಗಲ ಅಂಗೈಯಲ್ಲಿದ್ದ ವಿಭಿನ್ನ
ಗಾಳಿಪಟ ಕೊಟ್ಟು
ಹಾರಿಸೋ ಕಂದ
ಅದು ಹಾರುವಷ್ಟು ಆಕಾಶ ನಿಂದೇ ಅಂದ.
ಅಂದು ಮಾಯವಾದ.

ಆ ಮುದಿ ಜಂಗಮ ಯಾರೆಂದಿರಿ?
ಸಾವಳಗಿ ಶಿವಲಿಂಗ!
ನಾನೇ ಆ ಹುಡುಗ.