ಭಾಷೆ: ದೇಶಸೂಚಕವಾಗಿ

ವ್ಯಕ್ತಿಗಳಿಬ್ಬರ ನಡುವೆ ನಡೆಯುತ್ತಿರುವ ಸಂಭಾಷಣೆಯೊಂದನ್ನು ಕೇಳಿದಾಗ ಅವರು ಮಾತನಾಡುತ್ತಿರುವ ಭಾಷೆ ನಮ್ಮದೇ ಭಾಷೆಯೋ ಅಥವಾ ಬೇರೆ ಭಾಷೆಯೋ ಎಂಬುದನ್ನು ತಿಳಿಯುವುದು ನಮಗೆ ಕಷ್ಟವೇನಲ್ಲ. ಆ ಸಂಭಾಷಣೆ ಏನೂ ಅರ್ಥವಾಗದಂತಿದ್ದರೆ ಅದು ಬೇರೆ ಭಾಷೆಯೆಂದೂ ಸುಮಾರಾಗಿ ಅಥವಾ ಚೆನ್ನಾಗಿ ಅರ್ಥವಾಗುವಂತಿದ್ದರೆ ಅದು ನಮ್ಮ ಭಾಷೆಯೆಂದೂ ತೀರ್ಮಾನಿಸುತ್ತೇವೆ. ಮಾತನಾಡುತ್ತಿದ್ದವರು ಕನ್ನಡವನ್ನು ಬಳಸುತ್ತಿದ್ದರೆ ಅವರು ಕನ್ನಡಿಗರೂ, ಕರ್ನಾಟಕದವರೂ ಇರಬೇಕೆಂದು ಊಹಿಸುತ್ತೇವೆ; ಬಂಗಾಲಿಯಲ್ಲಿ ಮಾತನಾಡುತ್ತಿದ್ದರೆ ಬಂಗಾಲಿಗಳಿರಬಹು ದೆಂದೂ, ತಮಿಳಿನಲ್ಲಿ ಮಾತನಾಡುತ್ತಿದ್ದರೆ ತಮಿಳುನಾಡಿನವರಿರಬೇಕೆಂದೂ ಊಹಿಸಬಹುದು. ಈಗ ಅವರು ಬಂಗಾಲಿ, ತಮಿಳುನಾಡಿನ ನಿವಾಸಿಗಳಾಗಿರ ದಿದ್ದರೂ ಮೂಲತಃ ಆ ಪ್ರದೇಶಗಳಿಗೆ ಸೇರಿದ್ದವರಾಗಿರಬೇಕೆಂದು ಊಹಿಸ ಬಹುದು. ಆದರೆ ಹಿಂದಿ, ಇಂಗ್ಲಿಷ್‌ಗಳಂತಹ ವಿಸ್ತಾರವಾದ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಭಾಷೆಗಳ ವಿಷಯದಲ್ಲಿ ಹೀಗೆ ಭಾಷೆಯ ಆಧಾರದಿಂದ ವ್ಯಕ್ತಿಗಳ ಊರು ಅಥವಾ ದೇಶವನ್ನು ಗುರುತಿಸುವುದು ಸಾಧ್ಯವಿಲ್ಲ. ಇಂಗ್ಲಿಷನ್ನು ಮಾತನಾಡುತ್ತಿರುವ ವ್ಯಕ್ತಿ ಕರ್ನಾಟಕದವರಿರ ಬಹುದು; ಉತ್ತರ ಪ್ರದೇಶದವರೋ ಇಂಗ್ಲೆಂಡಿನವರೋ ಅಥವಾ ಮತ್ತಾವುದೋ ಪ್ರದೇಶಕ್ಕೆ ಸೇರಿದವರೋ ಇರಬಹುದು. ಆದರೆ ಸೀಮಿತ ಪ್ರದೇಶವೊಂದರಲ್ಲಿ ಬಳಕೆಯಲ್ಲಿರುವ ಬಹುತೇಕ ಭಾಷೆಗಳ ವಿಷಯದಲ್ಲಿ ಭಾಷೆ ಯಾವುದೆಂಬುದನ್ನು ಗಮನಿಸಿಯೇ ಅದನ್ನು ಬಳಸುವ ವ್ಯಕ್ತಿಗಳು ಯಾವ ಪ್ರದೇಶಕ್ಕೆ ಸೇರಿದವ ರೆಂಬುದನ್ನು ತಕ್ಕ ಮಟ್ಟಿಗೆ ನಿರ್ಧರಿಸಬಹುದು. ಹೀಗೆ ಆಹಾರ, ಉಡಿಗೆ ಮುಂತಾದ ಆಚಾರ, ಸಂಪ್ರದಾಯಗಳಂತೆ ಭಾಷೆಯೂ ಒಂದು ಪ್ರದೇಶವನ್ನು ಸೂಚಿಸುವ ಗುರುತು.

ಉಪಭಾಷೆ: ಹಾಗೆಂದರೇನು?

ನಮ್ಮೆದುರಿನಲ್ಲಿ ನಡೆಯುತ್ತಿರುವ ಸಂಭಾಷಣೆಯೊಂದು ನಮ್ಮದೇ ಭಾಷೆಯಲ್ಲಿದೆ ಹಾಗೂ ಅದು ದಿನನಿತ್ಯದ ಸಾಮಾನ್ಯ ವಿಷಯವನ್ನೇ ಕುರಿತು ನಡೆಯುತ್ತಿದೆ ಎಂದುಕೊಳ್ಳೋಣ. ಹೀಗಿದ್ದರೂ ಈ ಸಂಭಾಷಣೆಯ ಎಲ್ಲ ವಿವರಗಳೂ, ವಾಕ್ಯ ವಾಕ್ಯವಾಗಿ ನಮಗೆ ಅರ್ಥವಾಗದೇ ಇರಬಹುದು; ಅರ್ಥೈಸಲು ಪ್ರಯಾಸಪಡಬೇಕಾಗಬಹುದು; ಅಥವಾ ಸುಲಭವಾಗಿ ಅರ್ಥವಾಗುವಂತಿರಲೂಬಹುದು. ಸುಲಭವಾಗಿ ಅರ್ಥವಾಗುವಂತಿದ್ದರೆ ಅದಕ್ಕೆ ಕಾರಣ ಸಂಭಾಷಣೆಯ ಭಾಷೆ, ಅದರ ಶಬ್ದಗಳು, ಉಚ್ಚಾರಣೆಯ ರೀತಿ, ವ್ಯಾಕರಣ ಎಲ್ಲವೂ ನಮ್ಮ ಮಾತಿನಲ್ಲಿರುವಂತೆಯೇ ಇದೆ ಎಂಬುದೇ. ಸುಲಭವಾಗಿ ಅರ್ಥವಾಗದಂತೆ ಇದ್ದರೆ ಸಂಭಾಷಣೆಯ ಭಾಷೆ ನಮ್ಮ ಭಾಷೆಯೇ ಆಗಿದ್ದರೂ ನಮ್ಮ ಮಾತುಗಳಿಗಿಂತ ಬೇರೆ ರೀತಿಯಲ್ಲಿರುವುದೇ ಇದಕ್ಕೆ ಕಾರಣ. ಎಂದರೆ ಸಂಭಾಷಣೆಯ ಭಾಷೆ ಹಾಗೂ ನಮ್ಮ ಮಾತುಕತೆಯ ಭಾಷೆ ಇವೆರಡೂ ಒಂದೇ ಭಾಷೆ ಎಂದು ಸ್ಥೂಲವಾಗಿ ಹೇಳಬಹುದಾದರೂ ನಿಜವಾಗಿ ಅದರ ಎರಡು ಬೇರೆ ಬೇರೆ ರೂಪಗಳು ಅಥವಾ ಪ್ರಭೇದಗಳು. ಒಂದೇ ಭಾಷೆಯ ಇಂತಹ ಎರಡು ಪ್ರಭೇದಗಳ ನಡುವೆ ಹಲ ಕೆಲವು ಶಬ್ದ ವ್ಯತ್ಯಾಸಗಳು ಮಾತ್ರವೇ ಇರಬಹುದು. ಉದಾಹರಣೆಗೆ, ಬೆಂಗಳೂರು ಹಾಗೂ ಮೈಸೂರು ಸುತ್ತಮುತ್ತಲಿನ ಕನ್ನಡದ ಪ್ರಭೇದಗಳ ನಡುವೆ ಶಬ್ದ ಸಂಬಂಧವಾದ ಅನೇಕ ವ್ಯತ್ಯಾಸಗಳಿವೆ. ಇತರ ಅಲ್ಪಸ್ವಲ್ಪ ವ್ಯತ್ಯಾಸಗಳೂ ಇವೆ. ಇದರಿಂದಾಗಿ ಪರಸ್ಪರ ಸಂಭಾಷಣೆ ನಡೆಸುವಲ್ಲಿ ಅಥವಾ ಅರ್ಥ ಮಾಡಿಕೊಳ್ಳುವಲ್ಲಿ ಹೆಚ್ಚಿನ ತೊಂದರೆಯೇನೂ ಆಗದು. ಬಳಸುವ ಕನ್ನಡವನ್ನು ಕೇಳಿ ಇವರು ಮೈಸೂರು ಕಡೆಯವರು ಅಥವಾ ಇವರು ಬೆಂಗಳೂರಿನವರು ಎಂದು ಗುರುತಿಸಲು ಸಾಧ್ಯವಾಗದು. ಆದರೆ ಒಂದೇ ಭಾಷೆಯ ಎರಡು ಪ್ರಭೇದಗಳ ನಡುವೆ ಶಬ್ದಗಳು, ಪ್ರತ್ಯಯಗಳು, ವ್ಯಾಕರಣ ಹಾಗೂ ಉಚ್ಚಾರಣೆಯ ರೀತಿ ಈ ಮುಂತಾದವುಗಳಿಗೆ ಸಂಬಂಧಿಸಿದ ವ್ಯತ್ಯಾಸಗಳಿದ್ದರೆ ಆಗ ಈ ಎರಡೂ ಪ್ರಭೇದಗಳಿಗೆ ಸೇರಿದ ವ್ಯಕ್ತಿಗಳ ನಡುವೆ ಲೀಲಾಜಾಲವಾಗಿ ಸಂಭಾಷಣೆ ನಡೆಯುವುದಾಗಲೀ ಪರಸ್ಪರರ ಮಾತುಗಳನ್ನು ಸುಲಭವಾಗಿ ಅರ್ಥೈಸಿ ಕೊಳ್ಳುವುದಾಗಲೀ ಸಾಧ್ಯವಾಗದು. ಹೀಗೆ ಗಮನಾರ್ಹ ವ್ಯತ್ಯಾಸಗಳುಳ್ಳ ಒಂದೇ ಭಾಷೆಯ ಪ್ರಭೇದಗಳನ್ನು ಆ ಭಾಷೆಯ ಉಪಭಾಷೆಗಳು ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ಕನ್ನಡ ಭಾಷೆಯೆಂಬುದು ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ ಬಳಕೆಯಲ್ಲಿದ್ದರೂ, ಕನ್ನಡ ಭಾಷೆ ಎಂಬ ಹೆಸರಿ ನಿಂದಲೇ ಪರಿಚಿತವಾಗಿದ್ದರೂ ಬೆಂಗಳೂರು, ಧಾರವಾಡ, ಮಂಗಳೂರು, ಗುಲ್ಬರ್ಗಾ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಸಾಮಾನ್ಯರ ಕನ್ನಡದ ರೀತಿ ಅಥವಾ ಪ್ರಭೇದಗಳು ಒಂದರಿಂದ ಇನ್ನೊಂದು ಸಾಕಷ್ಟು ಭಿನ್ನವಾಗಿವೆ. ಉದಾಹರಣೆಗೆ, ಬೆಂಗಳೂರು ಪ್ರದೇಶದ ‘ಕಡಲೆಕಾಯಿ / ಕಳ್ಳೇಕಾಯಿ’, ‘ನೇರವಾಗಿ’, ‘ಮಕ’, ‘ಬೇಗ’, ‘ಬಟ್ಟೆ’ ಮುಂತಾದ ಶಬ್ದಗಳಿಗೆ ಬದಲಾಗಿ ಧಾರವಾಡ ಪ್ರದೇಶದಲ್ಲಿ ‘ಸೇಂಗಾ’, ‘ಸೀದಾ’, ‘ಮಾರಿ’, ‘ಲಗೂ’, ‘ಅರಿವಿ’ ಮುಂತಾದ ಶಬ್ದಗಳಿವೆ; ಮೊದಲನೆಯದರಲ್ಲಿಯ ‘ಆನೆ’, ‘ಒಂಟೆ’, ‘ಕತ್ತೆ’ ಮುಂತಾದ ಎಕಾರಾಂತ ನಾಮಶಬ್ದಗಳಿಗೆ ಸಂವಾದಿಯಾಗಿ ಎರಡನೆಯದರಲ್ಲಿ ‘ಆನಿ’, ‘ಒಂಟಿ’, ‘ಕತ್ತಿ’ ಎಂಬಂತಹ ರೂಪಗಳಿವೆ; ಒಂದರಲ್ಲಿ ‘ಮನೇಲಿ’, ‘ದಾರೀಲಿ’, ಇತ್ಯಾದಿ ಸಪ್ತಮೀ ರೂಪಗಳಿದ್ದರೆ ಇನ್ನೊಂದರಲ್ಲಿ ಅವಕ್ಕೆ ಬದಲಾಗಿ ‘ಮನ್ಯಾಗ’, ‘ದಾರ್ಯಾಗ’ ಎಂಬಂತಹ ರೂಪಗಳಿವೆ;  ಒಂದರಲ್ಲಿ ‘ಅವನು’, ‘ಅವಳು’ ಇತ್ಯಾದಿ ಸರ್ವನಾಮ ರೂಪಗಳಿದ್ದರೆ ಇನ್ನೊಂದರಲ್ಲಿ ‘ಅಂವ’, ‘ಆಕಿ’ ಇತ್ಯಾದಿ ರೂಪಗಳಿವೆ.

ಶ್ರೀ ವಿಜಯನ ಕವಿರಾಜಮಾರ್ಗದಲ್ಲಿ ಕನ್ನಡದ ಎರಡು ಪ್ರಭೇದಗಳ ಉಲ್ಲೇಖವಿದೆ. ಉತ್ತರ ಮತ್ತು ದಕ್ಷಿಣ ಮಾರ್ಗಗಳೆಂದು ಅವನ್ನು ಕರೆದಿದ್ದಾರೆ. ಕವಿರಾಜಮಾರ್ಗ ರಚನೆಯ ಪ್ರದೇಶ ಇಂದಿನ ಗುಲ್ಬರ್ಗ ಜಿಲ್ಲೆಯ ಪೂರ್ವ ಭಾಗವನ್ನು ಗಮನಿಸಿದರೆ ಉತ್ತರ ಮತ್ತು ದಕ್ಷಿಣಗಳನ್ನು ಗ್ರಹಿಸುವುದು ಹೇಗೆ ಎಂಬ ಪ್ರಶ್ನೆ ಉಂಟಾಗುತ್ತದೆ. ಸಾಮಾನ್ಯವಾಗಿ ತುಂಗಭದ್ರಾ ನದಿಯನ್ನೇ ಗಡಿರೇಖೆಯನ್ನಾಗಿ ತೆಗೆದುಕೊಂಡು ಎರಡು ಕನ್ನಡಗಳನ್ನು ಗುರುತಿಸುವುದು ವಾಡಿಕೆ. ಗ್ರಹಿಕೆ ಇಂದೂ ಸಾಕಷ್ಟು ರೂಢಿಯಲ್ಲಿದೆ.

ಹೀಗೆಯೇ ಇನ್ನೆಷ್ಟೋ ವ್ಯತ್ಯಾಸಗಳಿವೆ. ಇದೇ ರೀತಿ ಮಂಗಳೂರು, ಗುಲ್ಬರ್ಗಾ ಪ್ರದೇಶಗಳಲ್ಲಿರುವ ಕನ್ನಡಗಳೂ ಇವುಗಳಿಂದ ಭಿನ್ನ ಭಿನ್ನವಾಗಿವೆ. ಹೀಗೆ ಗಮನಾರ್ಹ ವ್ಯತ್ಯಾಸಗಳಿರುವ ಬೆಂಗಳೂರು, ಮಂಗಳೂರು, ಧಾರವಾಡ, ಗುಲಬರ್ಗಾ ಪ್ರದೇಶಗಳಲ್ಲಿಯ ಕನ್ನಡದ ಪ್ರಭೇಧಗಳನ್ನು ಕನ್ನಡದ ಉಪಭಾಷೆಗಳು – ಬೆಂಗಳೂರು ಕನ್ನಡ (ಉಪಭಾಷೆ), ಧಾರವಾಡ ಕನ್ನಡ (ಉಪಭಾಷೆ), ಮಂಗಳೂರು ಕನ್ನಡ (ಉಪಭಾಷೆ) ಹಾಗೂ ಗುಲಬರ್ಗಾ ಕನ್ನಡ (ಉಪಭಾಷೆ) ಎಂದಾಗಿ ಕರೆಯಲಾಗುತ್ತದೆ. ಇಂಗ್ಲಿಶ್ ಭಾಷೆ ಪ್ರಪಂಚದ ಅನೇಕ ಭಾಗಗಳಲ್ಲಿ ಬಳಕೆಯಲ್ಲಿದ್ದರೂ ಅದು ಎಲ್ಲ ದೇಶ / ಪ್ರದೇಶಗಳಲ್ಲಿಯೂ ಒಂದೇ ರೂಪದಲ್ಲಿ ಬಳಕೆಯಲ್ಲಿಲ್ಲ. ಅಮೇರಿಕೆ ಯಲ್ಲಿಯ ಇಂಗ್ಲಿಶ್, ಇಂಗ್ಲೆಂಡ್‌ನಲ್ಲಿಯ ಇಂಗ್ಲಿಶ್, ಭಾರತದಲ್ಲಿಯ ಇಂಗ್ಲಿಶ್ – ಇವೆಲ್ಲ ವ್ಯಾಕರಣ, ಶಬ್ದಕೋಶ, ಉಚ್ಚಾರಣೆಯ ರೀತಿ ಈ ವಿಷಯಗಳಲ್ಲಿ ಒಂದರಿಂದ ಇನ್ನೊಂದು ಬೇರೆಯಾಗಿವೆ. ಆದ್ದರಿಂದ ಈ ಮೂರು ಪ್ರಭೇದಗಳು ಇಂಗ್ಲಿಶಿನ ಬೇರೆ ಬೇರೆ ಉಪಭಾಷೆಗಳಿಗೆ ಉದಾಹರಣೆಗಳು.

1. ಬೇರೆ ಬೇರೆ ಪ್ರದೇಶದ ಕನ್ನಡಿಗರು ಮಾತಾಡುತ್ತಿದ್ದರೆ ಅವರಲ್ಲಿ ಯಾರು ಬೆಂಗಳೂರು ಕಡೆಯವರು, ಯಾರು ಮಂಗಳೂರು ಕಡೆಯವರು ಮತ್ತು ಯಾರು ಧಾರವಾಡದ ಕಡೆಯವರು ಎಂದು ಹೇಳುವುದು ಸುಲಭ. ಅಥವಾ ಹಾಗೆ ಸಾಮಾನ್ಯವಾಗಿ ಗುರುತಿಸುವುದು ವಾಡಿಕೆಯಲ್ಲಿದೆ. ಆದರೆ ಧಾರವಾಡದವರು ಎಂದಾಗ ಬೆಳಗಾವಿಯವರೋ ಗುಲ್ಬರ್ಗದವರೋ ಎಂದು ಕೇಳಿದರೆ ಉತ್ತರಿಸುವುದು ಎಲ್ಲರಿಗೂ ಆಗದು. ನಾವು ಬೆಂಗಳೂರಿನವರು ಎಂದು ಗುರುತಿಸಿದ ವ್ಯಕ್ತಿ ಕೋಲಾರದವರೋ, ಕೊಳ್ಳೇಗಾಲದವರೋ ಆಗಿರಬಹುದು. ಅವರವರ ಭಾಷೆಯಲ್ಲಿ ವ್ಯತ್ಯಾಸ ಗಳಿದ್ದರೂ ನಾವು ಅದನ್ನು ಗುರುತಿಸಿದರೂ ಇಂಥದೇ ಪ್ರದೇಶಕ್ಕೆ ಸೇರಿದ ವ್ಯಕ್ತಿಯೆಂದು ಹೇಳುವುದಕ್ಕೆ ಅಸಮರ್ಥರಾಗುತ್ತೇವೆ. ಆದರೂ ವ್ಯಕ್ತಿಗಳ ಭಾಷೆಗೂ ಅವರು ಯಾವ ಪ್ರದೇಶದವರೆಂಬುದಕ್ಕೂ ನಿಕಟವಾದ ಸಂಬಂಧಗಳಿವೆಯೆಂಬ ತಿಳುವಳಿಕೆ ದೃಢವಾಗಿದೆ.

ಚಲನಚಿತ್ರ, ರೇಡಿಯೋ, ದೂರದರ್ಶನದಂಥ ಮಾಧ್ಯಮಗಳಲ್ಲಿ ಪಾತ್ರಗಳನ್ನೂ, ವ್ಯಕ್ತಿಗಳನ್ನು ನಿರ್ದಿಷ್ಟ ಪ್ರದೇಶದವರೆಂದು ದಾಖಲಿಸಲು ಅವರ ಮಾತುಕತೆಯನ್ನು ಆಯಾ ಪ್ರದೇಶದ ಕನ್ನಡ ಪ್ರಭೇದದಲ್ಲಿ ನಡೆಯುವಂತೆ ಮಾಡುತ್ತಾರೆ. ಬಹುಮಟ್ಟಿಗೆ ಇದು ನಗೆಯನ್ನುಂಟು ಮಾಡಲು ಬಳಕೆಯಾಗುತ್ತದೆ. ಆದರೆ ಇನ್ನೂ ಸೂಕ್ಷ್ಮವಾದ ನೆಲೆಗಳನ್ನು ಇಲ್ಲಿ ಕಾಣಲು ಸಾಧ್ಯ. ತೆಲುಗು ಚಲನಚಿತ್ರಗಳನ್ನು ಅಧ್ಯಯನಕ್ಕಾಗಿ ಆಯ್ದುಕೊಂಡಾಗ ಚಿತ್ರದ ಖಳನಾಯಕರು ಬಹುಮಟ್ಟಿಗೆ ತೆಲಂಗಾಣ ಪ್ರದೇಶದ ತೆಲುಗು ಪ್ರಭೇದವನ್ನು ಬಳಸುವುದು ಕಂಡುಬಂತು. ಇದೇಕೆ ಹೀಗೆ ಎಂಬ ಪ್ರಶ್ನೆ ಎದುರಾಗುತ್ತದೆ. ಉತ್ತರವೇನೇ ಇರಲಿ. ವ್ಯಕ್ತಿಗೂ ಭಾಷೆಯ ಪ್ರಾದೇಶಿಕ ಪ್ರಭೇದಗಳಿಗೂ ನಂಟನ್ನು ಕಲ್ಪಿಸುವುದು ಬಳಕೆಯಲ್ಲಿದೆ ಎಂದಾಯ್ತು.

ಈ ಮೇಲಿನ ವಿವರಣೆಯಲ್ಲಿ ಸಂಭಾಷಣೆಯೊಂದರಲ್ಲಿ ತೊಡಗಿದ್ದ ವ್ಯಕ್ತಿಗಳಿಬ್ಬರಲ್ಲಿ ಒಬ್ಬರಿಗೆ ಇನ್ನೊಬ್ಬರ ಮಾತುಗಳು ಸುಲಭವಾಗಿ ಅರ್ಥವಾಗದೇ ಅರ್ಥೈಸಿಕೊಳ್ಳಲು ಹೆಚ್ಚು ಗಮನಕೊಡಬೇಕಾಗುವಂತಿದ್ದರೆ ಹಾಗೂ ಅವರೊಡನೆ ಲೀಲಾಜಾಲವಾಗಿ ಸಂಭಾಷಣೆಯನ್ನು ಮುಂದುವರೆಸಲು ಕಷ್ಟವಾಗುವಂತಿದ್ದರೆ ಅವರಿಬ್ಬರೂ ಬೇರೆ ಬೇರೆ ಉಪಭಾಷೆಗಳಲ್ಲಿ ಮಾತನಾಡುತ್ತಿದ್ದಾರೆ ಎಂದು ತೀರ್ಮಾನಿಸಬಹುದು ಎಂದು ಹೇಳಿದೆ. ಎಂದರೆ ಪರಸ್ಪರರ ಮಾತುಗಳನ್ನು ಎಷ್ಟರಮಟ್ಟಿಗೆ ಅರ್ಥಮಾಡಿಕೊಳ್ಳುವುದು ಸಾಧ್ಯ ಎಂಬುದು ಒಂದು ಉಪಭಾಷೆಯಿಂದ ಇನ್ನೊಂದು ಉಪಭಾಷೆಯನ್ನು ಪ್ರತ್ಯೇಕಿಸಿ ಗುರುತಿಸಲು ಒಂದು ಆಧಾರ ಎಂದು ಹೇಳಿದಂತಾಯಿತು. ಆದರೆ ಕೆಲವೊಮ್ಮೆ ಇದು ಅಷ್ಟೊಂದು ಉಪಯುಕ್ತವಾದ ಆಧಾರವಾಗಲಾರದು. ಕೆಲ ಸಂದರ್ಭಗಳಲ್ಲಿ ವ್ಯಕ್ತಿಗಳಿಬ್ಬರು ಬೇರೆ ಬೇರೆ ಉಪಭಾಷೆಗಳಲ್ಲಿ ಸಂಭಾಷಿಸುತ್ತಿದ್ದರೂ ಅವರಲ್ಲಿ ಒಬ್ಬರಿಗೆ ಇನ್ನೊಬ್ಬರ ಉಪಭಾಷೆ ಈಗಾಗಲೇ ಪರಿಚಿತವಾಗಿದ್ದು ಅದನ್ನು ಸುಲಭವಾಗಿ ಅರ್ಥೈಸಲು ಸಾಧ್ಯವಾಗಬಹುದು; ಆದರೆ ಆ ಇನ್ನೊಂದರಲ್ಲಿ ಮಾತನಾಡಲು ಮಾತ್ರ ಬಾರದಿರಬಹುದು. ಉದಾಹರಣೆಗೆ, ಧಾರವಾಡದ ಕನ್ನಡವನ್ನಾಡುವ ವ್ಯಕ್ತಿಗೆ ಪತ್ರಿಕೆ, ಪುಸ್ತಕ, ದೂರದರ್ಶನ ರೇಡಿಯೋ ಇತ್ಯಾದಿ ಮಾಧ್ಯಮಗಳಿಂದಾಗಿ ಅಥವಾ ಈ ಮೊದಲೇ ಆಗಾಗ ಉಂಟಾಗಿರಬಹುದಾದ ನೇರ ಸಂಪರ್ಕಗಳಿಂದಾಗಿ ಬೆಂಗಳೂರಿನ ಕನ್ನಡವು ಪರಿಚಿತವಾಗಿದ್ದು ಅದು ಅರ್ಥವಾಗಲು ಕಷ್ಟವಾಗ ದಿರಬಹುದು. ಹೀಗಿದ್ದಲ್ಲಿ ಮಾತನಾಡುವ ಉಪಭಾಷೆಗಳು ಬೇರೆ ಬೇರೆಯಾದರೂ ಸಂಭಾಷಣೆ ತೊಡಕಿಲ್ಲದೆ ಮುಂದುವರಿಯಬಹುದು. ಆದರೆ ಅವರಿಬ್ಬರಿಗೂ ಪರಸ್ಪರ ಇನ್ನೊಬ್ಬರ ಕನ್ನಡದ ರೀತಿಯಲ್ಲಿ ಮಾತ ನಾಡಲು ಸಾಧ್ಯವಾಗದಿರಬಹುದು. ಆದ್ದರಿಂದ ಸಂಭಾಷಿಸುವ ವ್ಯಕ್ತಿಗಳಿಬ್ಬರ ಉಪಭಾಷೆಗಳು ಬೇರೆ ಬೇರೆ ಎಂದು ತಿಳಿಯಲು ಅವರಿಬ್ಬರೂ ಪರಸ್ಪರರ ಮಾತುಗಳನ್ನು ಪೂರ್ಣವಾಗಿ, ಸುಲಭವಾಗಿ ಅರ್ಥೈಸಲು ಶಕ್ತರೋ ಇಲ್ಲವೋ ಎಂಬುದೊಂದೇ ಆಧಾರವಾಗಲಾರದು. ಇದಕ್ಕೆ ಬದಲಾಗಿ ಹಾಗೂ ಇದಕ್ಕಿಂತ ಮುಖ್ಯವಾಗಿ, ಒಬ್ಬರಿಗೆ ಇನ್ನೊಬ್ಬರ ಭಾಷೆ ಇದು ತನ್ನ ಭಾಷೆಯೇ ಆದರೂ (ಉದಾಹರಣೆಗೆ, ಕನ್ನಡವೇ ಆದರೂ) ಇವರು ತನಗಿಂತ ಬೇರೆಯಾದ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇವರು ಬೇರೊಂದು  ಪ್ರದೇಶದವರಿರಬೇಕು ಎಂಬ ಭಾವನೆ ಮೂಡುವಂತಿದ್ದರೆ ಆ ಇಬ್ಬರೂ  ಬೇರೆ ಬೇರೆ ಉಪಭಾಷೆ ಯನ್ನು ಮಾತನಾಡುವವರು ಎಂಬ ನಿರ್ಧಾರಕ್ಕೆ ಬರಬಹುದು. ಉದಾಹರಣೆಗೆ, ಬೆಂಗಳೂರು ಕಡೆಯ ವ್ಯಕ್ತಿಯೊಬ್ಬರು ಮೈಸೂರು ಪ್ರದೇಶದ ವ್ಯಕ್ತಿಯೊಬ್ಬರ ಮಾತುಗಳನ್ನು ಕೇಳಿದಾಗ ಈ ಮಾತುಗಳಲ್ಲಿ ಅನೇಕ ಶಬ್ದಗಳು ಅಪರಿಚಿತವಾಗಿದ್ದು, ಅವು ಅರ್ಥವಾಗದಿದ್ದರೂ ಒಟ್ಟಾರೆಯಾಗಿ ಅವರು ಮಾತನಾಡುವ ರೀತಿ ತನ್ನದಕ್ಕಿಂತ ಬೇರೆಯಾಗಿದೆ ಎಂದು ಬೆಂಗಳೂರಿನವರಿಗೆ ಎನಿಸದು. ಆದರೆ ಧಾರವಾಡದ ವ್ಯಕ್ತಿಯ ಮಾತುಗಳು ಕನ್ನಡವೇ ಆಗಿದ್ದರೂ ತನ್ನದಕ್ಕಿಂತ ತುಂಬ ಬೇರೆಯಾಗಿದೆ ಎನಿಸುವುದು ಸಾಧ್ಯ. ವ್ಯಕ್ತಿಗಳು ಸಂಭಾಷಣೆ ನಡೆಸುತ್ತಿರುವುದು ಒಂದೇ ಉಪಭಾಷೆಯಲ್ಲಿಯೇ ಅಥವಾ ಬೇರೆ ಬೇರೆ ಉಪಭಾಷೆಗಳಲ್ಲಿಯೇ ಎಂಬುದನ್ನು ನಿರ್ಧರಿಸಲು ಇದು ಉತ್ತಮವಾದ ವಿಧಾನ.

ಉಪಭಾಷೆಗಳು: ಸಾಮಾಜಿಕ ಹಾಗೂ ಪ್ರಾದೇಶಿಕ

ಒಂದು ಭಾಷೆಯ ಉಪಭಾಷೆಗಳೆಂದು ಕರೆಯಬಹುದಾದ ಭಾಷಾ ಪ್ರಭೇದಗಳು ಬೇರೆ ಬೇರೆ ಪ್ರದೇಶಗಳಲ್ಲಿ ಬಳಕೆಯಲ್ಲಿರಬಹುದು ಅಥವಾ ಒಂದೇ ಪ್ರದೇಶದಲ್ಲಿಯೇ ಬೇರೆ ಬೇರೆ ಸಮಾಜದವರಿಂದ ಜಾತಿ ಅಥವಾ ವರ್ಗಗಳಿಂದ ಬಳಕೆಯಾಗುತ್ತಿರಬಹುದು. ಉದಾಹರಣೆಗೆ ಧಾರವಾಡದ ಕನ್ನಡ, ಮಂಗಳೂರು ಕನ್ನಡ ಎಂಬ ಈ ಎರಡು ಕನ್ನಡದ ಉಪಭಾಷೆಗಳು ಆಯಾ ಪ್ರದೇಶಗಳಲ್ಲಿ ಬಳಕೆಯಾಗುವ ಉಪಭಾಷೆಗಳು. ಹೀಗೆಯೇ ಇಂಗ್ಲೆಂಡಿನ ಇಂಗ್ಲಿಶ್ ಹಾಗೂ ಅಮೆರಿಕನ್ ಇಂಗ್ಲಿಶ್ ಇವು ಪ್ರಾದೇಶಿಕ ದೂರದಿಂದಾಗಿ ಉಂಟಾದ ಇಂಗ್ಲಿಶಿನ ಎರಡು ಉಪಭಾಷೆಗಳು. ಹೀಗೆ ಪ್ರಾದೇಶಿಕ ದೂರದಿಂದಾಗಿ ಉಂಟಾದ ಉಪಭಾಷೆಗಳನ್ನು ಪ್ರಾದೇಶಿಕ ಉಪಭಾಷೆಗಳು ಎಂದು ಕರೆಯಲಾಗುತ್ತದೆ. ಉಪಭಾಷೆಯೊಂದು ಒಂದು ಸಮಾಜಕ್ಕೆ ಸೀಮಿತವಾಗಿದ್ದರೆ ಆ ಸಮಾಜದವರು ಒಂದೇ ಪ್ರದೇಶದಲ್ಲಿರಲಿ, ಅಥವಾ ಬೇರೆ ಬೇರೆ ಪ್ರದೇಶಗಳಲ್ಲಿ ನೆಲೆಸಿರಲಿ. ಅಂತಹ ಉಪಭಾಷೆಗೆ ಸಾಮಾಜಿಕ ಉಪಭಾಷೆ ಎಂದು ಹೆಸರು. ಉದಾಹರಣೆಗೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಸಿರುವ ಹಾಲಕ್ಕಿ ಸಮಾಜದವರು ಆಡುವ ಕನ್ನಡವು ಅದೇ ಪ್ರದೇಶದಲ್ಲಿ ನೆಲೆಸಿದ ಹವ್ಯಕರ ಅಥವಾ ನಾಮಧಾರಿ ಸಮಾಜದವರ ಕನ್ನಡಕ್ಕಿಂತ ಭಿನ್ನವಾಗಿದೆ. ಹವ್ಯಕರು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ವಲ್ಲದೆ ದೂರದ ದಕ್ಷಿಣ ಕನ್ನಡ ಜಿಲ್ಲೆಯ ದಕ್ಷಿಣ ಭಾಗ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿಯೂ ಇದ್ದಾರೆ. ಆದರೂ ಹವ್ಯಕರ ಕನ್ನಡವು ಸುಮಾರಾಗಿ ಒಂದೇ ರೀತಿಯಾಗಿದ್ದು ಅದು ಹಾಲಕ್ಕಿ, ನಾಮಧಾರಿ ಕನ್ನಡಗಳಿಗಿಂತ ಬೇರೆಯಾಗಿದೆ. ಈ ಮೂರು ಬೇರೆ ಬೇರೆ ಸಮಾಜಗಳಿಗೆ ಸೇರಿದ ವಿಶಿಷ್ಟವಾದ ಕನ್ನಡದ ಪ್ರಭೇದಗಳು ಕನ್ನಡದ ಮೂರು ಸಾಮಾಜಿಕ ಉಪಭಾಷೆಗಳಾಗಿವೆ. ಆದರೆ ಒಂದು ಪ್ರದೇಶದಲ್ಲಿಯ ಎಲ್ಲ ಸಮಾಜಗಳ (ಜಾತಿ / ವರ್ಗಗಳ) ಭಾಷೆಗಳು ಹೀಗೆ ಬೇರೆ ಬೇರೆ ಉಪಭಾಷೆಗಳೇ ಆಗಿರಬೇಕಾಗಿಲ್ಲ. ಒಂದೇ ಉಪಭಾಷೆಯನ್ನು ಒಂದಕ್ಕಿಂತ ಹೆಚ್ಚು ಸಮಾಜಗಳು ಬಳಸುತ್ತಿದ್ದಿರಲೂ ಸಾಧ್ಯ. ಮುಖ್ಯವಾಗಿ ಒಂದು ಸಮಾಜದವರ ಭಾಷೆ ಇನ್ನೊಂದು ಸಮಾಜದವರ ಭಾಷೆಗಿಂತ ಎಷ್ಟು ವಿಭಿನ್ನವಾಗಿದೆ ಎಂಬುದನ್ನು ಇದು ಅವಲಂಬಿಸಿದೆ.

ಉಪಭಾಷೆ ಶಿಷ್ಟಭಾಷೆ

ಒಂದೇ ಭಾಷೆಗೆ ಸೇರಿದ ಬೇರೆ ಬೇರೆ ಪ್ರದೇಶಗಳ ಅಥವಾ ಸಮಾಜಗಳ ಸಾಮಾನ್ಯ ಜನರು, (ಮುಖ್ಯವಾಗಿ ಅವಿದ್ಯಾವಂತರು ಹಾಗೂ ಅಲ್ಪ ವಿದ್ಯಾ ವಂತರು) ದೈನಂದಿನ ವಿಷಯಗಳನ್ನು ಕುರಿತು ಮಾತನಾಡುವಾಗ ಬಳಸುವ ಭಾಷೆಯ ವಿಷಯದಲ್ಲಿ ಈ ಮೇಲೆ ಹೇಳಿದಂತಹ ಪ್ರಾದೇಶಿಕವಾದ ಅಥವಾ ಸಾಮಾಜಿಕವಾದ ವ್ಯತ್ಯಾಸಗಳು ಎತ್ತಿ ತೋರುತ್ತವೆ. ಆದರೆ ವಿದ್ಯಾವಂತರು ಗಂಭೀರವಾದ ಚರ್ಚೆ, ಭಾಷಣ ಮುಂತಾದ ಸಂದರ್ಭಗಳಲ್ಲಿ ಅಥವಾ ಲೇಖನಗಳಲ್ಲಿ ಬಳಸುವ ಭಾಷೆಯಲ್ಲಿ ಪ್ರಾದೇಶಿಕ ಅಥವಾ ಸಾಮಾಜಿಕ ವ್ಯತ್ಯಾಸಗಳು ಕಡಿಮೆಯಾಗಿ ಸುಮಾರಾಗಿ ಒಂದೇ ಬಗೆಯ ಭಾಷೆ ಆ ಭಾಷೆಯನ್ನಾಡುವ ಎಲ್ಲ ಪ್ರದೇಶಗಳಲ್ಲಿಯೂ ಬಳಕೆಯಾಗುತ್ತದೆ ಎಂದು ಹೇಳಬಹುದು. ಇಂತಹ ಸಾಮಾನ್ಯವಾದ ಭಾಷೆಯನ್ನು ಶಿಷ್ಟಭಾಷೆ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಉದಾಹರಣೆಗೆ, ಕನ್ನಡದ ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಬಳಕೆಯಾಗುವ ಭಾಷೆ, ರೇಡಿಯೋ, ದೂರದರ್ಶನಗಳಲ್ಲಿಯ ವಾರ್ತೆಗಳಲ್ಲಿ ಬಳಕೆಯಾಗುವ ಕನ್ನಡ ಕನ್ನಡದ ಶಿಷ್ಟಭಾಷೆ ಎನ್ನಬಹುದು. ಶಿಷ್ಟ ಭಾಷೆಯನ್ನು ಇಂತಹ ಪ್ರದೇಶದವರು ಅಥವಾ ಇಂತಹ ಸಮಾಜದವರು ಆಡುವ ಭಾಷೆ ಎಂದು ಹೇಳಲು ಸಾಧ್ಯವಾಗದು ಅಥವಾ ಸುಲಭವಲ್ಲ. ಇದು ಒಂದು ಭಾಷೆಯನ್ನಾಡುವ ಎಲ್ಲ ಪ್ರದೇಶ – ಸಮಾಜದವರೂ ಇದು ತಮ್ಮೆಲ್ಲರ ಭಾಷೆ ಎಂದು ಒಪ್ಪಿಕೊಳ್ಳುವಂತಹ ಭಾಷಾ ಪ್ರಭೇದವಾಗಿರುತ್ತದೆ.

ಉಪಭಾಷೆಯನ್ನು ಕುರಿತು ಹಿಂದೆ ಇದ್ದ ಧೋರಣೆ

ಉಪಭಾಷೆ ಎಂಬ ಶಬ್ದವನ್ನು ಕಳೆದ ಶತಮಾನದಲ್ಲಿ ಹಾಗೂ ಈ ಶತಮಾನದ ಮೊದಲ ಭಾಗದಲ್ಲಿ ಅನೇಕ ವಿದ್ವಾಂಸರು ಬಳಸಿದ್ದಾರೆ. ಈ ಶಬ್ದವನ್ನು ಕೆಲವೊಮ್ಮೆ ಲಿಪಿಯಿಲ್ಲದ ಭಾಷೆ ಎಂಬರ್ಥದಲ್ಲಿ ಬಳಸಲಾಗಿದೆ. ಉದಾಹರಣೆಗೆ, ಕನ್ನಡ, ತಮಿಳು ಮೊದಲಾದವನ್ನು ‘ಭಾಷೆ’ಗಳೆಂದು ಕರೆದು ತುಳು, ಕೊಡಗು ಮೊದಲಾದ ಲಿಪಿಯಿಲ್ಲದ ಭಾಷೆಗಳನ್ನು ‘ಉಪಭಾಷೆ’ ಗಳೆಂದು ಕರೆಯಲಾಗಿದೆ. ಇನ್ನು ಕೆಲವೊಮ್ಮೆ (ವಿದ್ಯಾವಂತರು ಬಳಸುವ ಶಿಷ್ಟಭಾಷೆಗಿಂತ ಭಿನ್ನವಾದ) ಅವಿದ್ಯಾವಂತರು ಬಳಸುವ ಗ್ರಾಮ್ಯಭಾಷೆಯನ್ನು ಉಪಭಾಷೆಯೆಂದು ಕರೆಯಲಾಗಿದೆ. ಈ ಎರಡೂ ಸಂದರ್ಭಗಳಲ್ಲಿ ಭಾಷೆ ಎಂಬುದು ಶಿಷ್ಟರ ಮಾತು, ಸುಸಂಸ್ಕೃತವಾದದ್ದು, ಅನುಕರಣಯೋಗ್ಯ ಹಾಗೂ ಉಪಭಾಷೆ ಎಂಬುದು ಅಸಂಸ್ಕೃತವಾದದ್ದು, ಅನುಕರಣಯೋಗ್ಯವಲ್ಲ ಎಂಬ ಭಾವನೆ ಇರುವಂತಿದೆ. ಬಹುಮಟ್ಟಿಗೆ ಎಲ್ಲ ಭಾಷೆಗಳಲ್ಲಿಯೂ ಶಿಷ್ಟಭಾಷೆಯನ್ನು ಆಧರಿಸಿಯೇ ವ್ಯಾಕರಣಗಳು ಹುಟ್ಟಿಕೊಂಡಿವೆ. ಆದರೆ ಇಂದು, ಭಾಷಾವಿಜ್ಞಾನಿಗಳ ಪ್ರಕಾರ ಉಪಭಾಷೆ ಹಾಗೂ ಶಿಷ್ಟಭಾಷೆ ಇವೆರಡೂ ಒಂದು ಭಾಷೆ ಕಾಣಿಸಿಕೊಳ್ಳುವ ಎರಡು ಬೇರೆ ಬೇರೆ ರೂಪಗಳು ಅಥವಾ ಪ್ರಭೇದಗಳು ಅಷ್ಟೇ. ಶಿಷ್ಟಭಾಷೆಯೂ ಪ್ರಾದೇಶಿಕ ಅಥವಾ ಸಾಮಾಜಿಕ ಉಪಭಾಷೆಯಂತೆಯೇ ಮತ್ತೊಂದು ಬಗೆಯ ಉಪಭಾಷೆಯಷ್ಟೇ. ಇವುಗಳಲ್ಲಿ ಯಾವುದೂ ಶ್ರೇಷ್ಠವೂ ಅಲ್ಲ; ಕನಿಷ್ಠವೂ ಅಲ್ಲ.

ಪ್ರಾದೇಶಿಕ ಉಪಭಾಷೆಗಳು ಹೇಗೆ ಉಂಟಾಗಿವೆ?

ಒಂದು ಭಾಷೆ ಬಳಕೆಯಲ್ಲಿರುವ ಪ್ರದೇಶವು (ಉದಾಹರಣೆಯಾಗಿ ಕನ್ನಡದಂತೆ) ಸಾಕಷ್ಟು  ವಿಸ್ತಾರವಾಗಿದ್ದಾಗ ಆ ಭಾಷಾ ಪ್ರದೇಶದ ಯಾವುದೇ ಒಂದು ಭಾಗದ ಜನರಿಗೆ ಇತರ ಎಲ್ಲ ಭಾಗಗಳ ಜನಸಾಮಾನ್ಯರೊಡನೆ ಸಂಪರ್ಕವಿರುವುದು ಸಾಧ್ಯವೂ ಇಲ್ಲ; ಅವಶ್ಯಕವೂ ಅಲ್ಲ. ಜನರು ತಮ್ಮ ದೈನಂದಿನ ವ್ಯವಹಾರಗಳಿಗಾಗಿ ಸುತ್ತಮುತ್ತಲಿನ ಹಳ್ಳಿಗಳೊಡನೆ ನಿಕಟ ಸಂಪರ್ಕವನ್ನೂ ಹತ್ತಿರದ ಪಟ್ಟಣಗಳೊಡನೆ ವ್ಯಾಪಾರ ವಹಿವಾಟುಗಳಿಗಾಗಿ ಅಥವಾ ಆಡಳಿತ, ಶಿಕ್ಷಣ ಮೊದಲಾದವುಗಳಿಗಾಗಿ ಕೆಲಮಟ್ಟಿನ ಸಂಪರ್ಕವನ್ನೂ ಹೊಂದಿರಬಹುದು. ಹೀಗೆ ಕೆಲವು ಪಟ್ಟಣಗಳು ತಮ್ಮ ಸುತ್ತಿನ ಹಲವಾರು ಹಳ್ಳಿಗಳ ಮಧ್ಯೆ ಸಂಪರ್ಕವನ್ನು ಬೆಸೆಯುವ ಕೇಂದ್ರಗಳಾಗಿರುತ್ತವಲ್ಲದೇ ತಮ್ಮೊಳಗೆ ಕೂಡ ಹೆಚ್ಚಿನ ಸಂಪರ್ಕವನ್ನು ಹೊಂದಿರುತ್ತವೆ. ಈ ಪಟ್ಟಣ ಕೇಂದ್ರಗಳ ಮೂಲಕ ಸುತ್ತಲಿನ ಹಳ್ಳಿಗರ ಭಾಷೆ ಪರಸ್ಪರರಿಗೆ ಪರಿಚಿತವಾಗು ತ್ತದೆ; ವಿನಿಮಯಗೊಳ್ಳುತ್ತದೆ. ಹಳ್ಳಿ ಹಳ್ಳಿಗಳ ನಡುವೆ  ಇರಬಹುದಾದ ಭಾಷಿಕ ವ್ಯತ್ಯಾಸಗಳಲ್ಲಿ ಹಲವು ಅಳಿಸಿಹೋಗಿ ಸಮಾನತೆ ಹೆಚ್ಚುತ್ತದೆ. ಬಹುಮಟ್ಟಿಗೆ ಒಂದೇ ಬಗೆಯ ಭಾಷೆ ರೂಢಿಗೆ ಬರುತ್ತದೆ; ಒಂದು ಭಾಷಾವಲಯವಾಗಿ ಅಥವಾ ಭಾಷಾ ಪ್ರದೇಶವಾಗಿ ರೂಪುಗೊಳ್ಳುತ್ತದೆ. (ಕೆಳಗಿನ ಚಿತ್ರದಲ್ಲಿಯ ಅ ಹಾಗೂ ಬ ಇಂತಹ ಸಂಪರ್ಕ ಜಾಲವನ್ನು ಹೊಂದಿದ ಎರಡು ಭಾಷಾ ವಲಯಗಳು) ಒಂದು ಭಾಷೆಗೆ ಸೇರಿದ ವಿಸ್ತಾರ ವಾದ ಪ್ರದೇಶ ಪರಸ್ಪರ ಸಂಪರ್ಕಗಳು ಹೆಚ್ಚಾಗಿರುವ ಹಲವಾರು ಭಾಷಾ ಪ್ರದೇಶಗಳಾಗಿ ಒಡೆಯುತ್ತದೆ. ಒಂದು ಪ್ರದೇಶದಲ್ಲಿರುವ ಭಾಷಾರೂಢಿ ವ್ಯತ್ಯಾಸಗಳು ಇನ್ನೊಂದು ಪ್ರದೇಶದಲ್ಲಿ ಬಳಕೆಗೆ ಬರುವುದಿಲ್ಲ. ಆದರೆ ಎರಡೂ ಪ್ರದೇಶಗಳ ಗಡಿಯಲ್ಲಿರುವ ಜನಮಾತ್ರ ಎರಡೂ ಕಡೆಯ ಭಾಷಾ ಬಳಕೆಗೆ ಪರಿಚಿತರಾಗಿರುತ್ತಾರೆ. (ಚಿತ್ರದಲ್ಲಿ ಅ, ಬ ಪ್ರದೇಶಗಳ ಗಡಿಯಲ್ಲಿರುವ ಕೆಲವು ಕೇಂದ್ರಗಳು ಪರಸ್ಪರ ಸಂಪರ್ಕ ಹೊಂದಿರುವುದನ್ನು ಚುಕ್ಕಿ ರೇಖೆಗಳಿಂದ ಸೂಚಿಸಲಾಗಿದೆ) ಹೀಗೆ ಸಂಪರ್ಕ ವ್ಯತ್ಯಾಸದಿಂದಾಗಿ ಭಾಷಾ ವ್ಯತ್ಯಾಸಗಳು ಹುಟ್ಟಿಕೊಂಡು, ಅವು ಇನ್ನೊಂದು ಪ್ರದೇಶಕ್ಕೆ ಹರಡದೇ ಪ್ರಾದೇಶಿಕವಾದ ಉಪಭಾಷೆಗಳಾಗಿ ಕಾಣಿಸಿಕೊಳ್ಳುತ್ತವೆ. ಒಂದು ಪ್ರದೇಶಕ್ಕೂ ಇನ್ನೊಂದು ಪ್ರದೇಶಕ್ಕೂ ಇರುವ ಸಂಪರ್ಕವನ್ನು ಕಡಿಮೆ ಇಲ್ಲವೇ ಕಡಿಮೆ ಮಾಡಿ ಅವೆರಡರ ಮಧ್ಯೆ ಭಾಷಾ ವ್ಯತ್ಯಾಸಗಳು ಹೆಚ್ಚಾಗುವಂತೆ ಮಾಡಿ ಪ್ರಾದೇಶಿಕ ಉಪಭಾಷೆಗಳನ್ನು ರೂಪಿಸುವಲ್ಲಿ ನದಿ, ಬೆಟ್ಟ ಮುಂತಾದ ನೈಸರ್ಗಿಕ ಅಡೆತಡೆಗಳ ಪಾತ್ರ ಹಿರಿದಾಗಿದೆ. ಇವು ಸಂಪರ್ಕಕ್ಕೆ ತಡೆಯನ್ನುಂಟು ಮಾಡುತ್ತಿದ್ದರಿಂದ ಒಂದು ಕಾಲಕ್ಕೆ ಇವೇ ಉಪಭಾಷಾ ನಿರ್ಮಾಣಕ್ಕೆ ಕಾರಣಗಳಾಗಿದ್ದವು, ಹೀಗೆ ಒಂದು ಕಾಲದಲ್ಲಿ ರೂಪುಗೊಂಡ ಉಪಭಾಷೆಗಳು ಈಗಲೂ ಉಳಿದುಕೊಂಡು ಬಂದಿರಲು ಈ ನೈಸರ್ಗಿಕ ತಡೆಗಳು ಕೆಲಮಟ್ಟಿಗೆ ಕಾರಣವಾದರೂ ಇಂದು ಅವುಗಳ ಪಾತ್ರ ಗೌಣವೆಂದೇ ಹೇಳಬೇಕು. ಹೀಗಾಗುವುದಕ್ಕೆ ಬಸ್ಸು, ರೈಲು, ದೂರವಾಣಿ, ದೂರದರ್ಶನ ಮುಂತಾದ ಸಂಪರ್ಕ ಸಂವಹನ ಮಾಧ್ಯಮಗಳು ಕಾರಣವಾಗಿವೆ. ಇಂದು ವ್ಯಾಪಾರ ವಹಿವಾಟು ಕೇಂದ್ರಗಳು ಬೇರೆ ಬೇರೆ ಸಂಪರ್ಕ ಜಾಲಗಳನ್ನು ಉಂಟುಮಾಡಿ ಉಪಭಾಷೆಗಳನ್ನು ರೂಪಿಸುವಲ್ಲಿ ಮುಖ್ಯವಾಗುತ್ತಿವೆ.

ಉಪಭಾಷೆಗಳ ಅಳಿವು ಉಳಿವು

ಇಂದಿನ ಆಧುನಿಕ ಜಗತ್ತಿನಲ್ಲಿ ಹಲವಾರು ಬಗೆಯ ಆಧುನಿಕವಾದ ಸಂಪರ್ಕ ಹಾಗೂ ಸಂವಹನ ವ್ಯವಸ್ಥೆಗಳಿಂದಾಗಿ (ನೈಸರ್ಗಿಕ ಅಡೆತಡೆಗಳು ಮುಖ್ಯವಾಗದೆ) ದೂರದೂರದ ಪ್ರದೇಶಗಳೊಡನೆಯೂ ನಿಟಕ ಸಂಪರ್ಕ ವನ್ನಿಟ್ಟುಕೊಳ್ಳುವುದು ಸಾಧ್ಯವಾಗಿದೆ. ಪರಸ್ಪರ ಸಂಪರ್ಕ ಹೆಚ್ಚಾಗುತ್ತಿದೆ. ವಿದ್ಯಾವಂತರ ಸಂಖ್ಯೆ ಹೆಚ್ಚುತ್ತಿರುವುದು ಇದಕ್ಕೆ ಇನ್ನಷ್ಟು ಪೂರಕವಾಗಿದೆ. ಒಂದು ಪ್ರದೇಶದ ಭಾಷೆ ಇನ್ನೊಂದು ಪ್ರದೇಶದವರಿಗೆ ಹೆಚ್ಚು ಹೆಚ್ಚು  ಪರಿಚಿತವಾಗುತ್ತಿದೆ. ಇದರಿಂದಾಗಿ ಉಪಭಾಷೆಗಳು ಅಥವಾ ಭಾಷೆಯ ಪ್ರಾದೇಶಿಕ ವ್ಯತ್ಯಾಸಗಳು ಕಡಿಮೆಯಾಗುತ್ತವೆಯೇ ಅಥವಾ ಅಳಸಿ ಹೋಗುತ್ತ ವೆಯೇ ಎಂಬ ಸಂದೇಹ ಮೂಡುವುದು ಸಾಧ್ಯ. ಆದರೆ ಹೀಗಾಗಲು ಸಾಧ್ಯವಿಲ್ಲ. ಒಂದು ಕಾಲದಲ್ಲಿ ಸಂಪರ್ಕದ ಕೊರತೆಯಿಂದಾಗಿ ಪ್ರಾದೇಶಿಕ ಉಪಭಾಷೆಗಳು ಉಂಟಾಗಿದ್ದರೂ ಇಂದು ಅವು ಈ ಕಾರಣದಿಂದ ಮಾತ್ರವೇ ಪ್ರತ್ಯೇಕವಾಗಿ ಉಳಿದಿಲ್ಲ. ಕನ್ನಡ (ಶಿಷ್ಟ) ಭಾಷೆ ಕನ್ನಡಿಗರನ್ನೆಲ್ಲ ‘ನಾವೆಲ್ಲ ಒಂದೇ ಭಾಷಾಸಮಾಜದವರು’ ಎಂಬ ಭಾವನೆಯನ್ನು ಜಾಗ್ರತ ಗೊಳಿಸುವಂತೆ ಒಂದು ಪ್ರದೇಶದ ಉಪಭಾಷೆಯೂ ಅದನ್ನಾಡುವವರಲ್ಲಿ ಇದೇ ಬಗೆಯ ಭಾವನೆಯನ್ನುಂಟು ಮಾಡುತ್ತದೆ. ಧಾರವಾಡ ಪ್ರದೇಶದವರು ತಾವು ಅಲ್ಲಿಯ ಸಮಾಜಕ್ಕೆ ಸೇರಿದವರು ಎಂಬುದನ್ನು ತಮ್ಮ ಆಹಾರ – ಉಡುಪು, ಸಾಮಾಜಿಕ ಆಚರಣೆ ಮೊದಲಾದವುಗಳ ಮೂಲಕವಲ್ಲದೇ, ಇವೆಲ್ಲವುಗಳಿಗಿಂತ ಹೆಚ್ಚಾಗಿ ತಮ್ಮ ಭಾಷಾ ರೂಢಿಯ ಮೂಲಕ ತೋರಿಸುತ್ತಿರುತ್ತಾರೆ. ಅವರ ಉಪಭಾಷೆಯು (ಧಾರವಾಡ ಕನ್ನಡ) ಇತರ ಪ್ರದೇಶದವರಿಂದ ಪ್ರತ್ಯೇಕವಾಗಿ, ವಿಶಿಷ್ಟವಾಗಿ ತೋರಿಸುವ ಗುರುತು ಹೇಗೋ ಹಾಗೆಯೇ ತಮ್ಮ ಪ್ರದೇಶದ ಜನರೊಂದಿಗೆ ಸೇರಿಸಿ ಒಂದಾಗಿ ಇರಿಸುವ ಸಾಧನವೂ ಹೌದು. ಅವರ ಭಾಷೆಯನ್ನು ಕೇಳಿದ ಮಾತ್ರಕ್ಕೇ ಇವರು ಧಾರವಾಡ ಪ್ರದೇಶದವರು ಎಂದು ಗುರುತಿಸಲು ಸಾಧ್ಯವಾಗುತ್ತದೆ. ಒಂದು ಉಪಭಾಷೆಯ ಜನ ತಮ್ಮಲ್ಲಿಯ ಶಬ್ದಗಳನ್ನು ಬೇರೆ ಬೇರೆ ವಯಸ್ಸಿನಲ್ಲಿ ಕಲಿತಿದ್ದರೂ ಅವುಗಳಲ್ಲಿ ಕೆಲವು ಬೇರೆ ಉಪಭಾಷೆಗಳಿಂದ ಬಂದವುಗಳಾಗಿದ್ದರೂ ಹಾಗೂ ಶಬ್ದಗಳ ಬಳಕೆಯ ಸಾಧ್ಯತೆ ಹೆಚ್ಚು ಕಡಿಮೆ ಯಾಗಿದ್ದರೂ (ಇವುಗಳಿಂದಾಗಿ ಶಬ್ದಗಳು ಬದಲಾಗುವ ಸಾಧ್ಯತೆ ಇದ್ದರೂ) ಚಿಕ್ಕಂದಿನಲ್ಲಿಯೇ ಕಲಿತ ಲಿಂಗ-ವಚನ-ವಿಭಕ್ತಿ ಮುಂತಾದ ವ್ಯಾಕರಣ ಸೂಚಕ ಪದಪ್ರತ್ಯಯಗಳು ಹಾಗೂ ಪದ ವಾಕ್ಯಗಳ ಉಚ್ಚಾರಣೆಯಲ್ಲಿ ತೋರುವ ಸ್ವರಗಳ ಏರಿಳಿತಗಳು ರೂಢಿಗತವಾಗಿರುವುದ ರಿಂದ ಅವು ಸುಲಭವಾಗಿ ಬದಲಾಗವು. ಉಚ್ಚಾರಣೆಯ ರೂಢಿ ಹಾಗೂ ತನ್ನನ್ನು ಒಂದು ಪ್ರದೇಶದ ಜೊತೆಗೆ ಸೇರಿಸಿಕೊಳ್ಳುವ ಬಯಕೆ ಇವು ಉಪಭಾಷೆಯು ನಶಿಸಿಹೋಗದ ಹಾಗೆ ತಡೆಯುತ್ತವೆ. ಆದರೆ ಉಪಭಾಷೆಯ ಗಡಿಯಲ್ಲಿರುವ ಜನರಿಗೆ ಇನ್ನೊಂದು ಉಪಭಾಷೆಯ ನೇರೆ ಸಂಪರ್ಕವೂ ಇರುವುದರಿಂದ ಅವರ ಒಲವು ಉಚ್ಚಾರಣೆಯ ರೂಢಿ (ಮುಂದಿನ ತಲೆಮಾರಿನ ಜನರಲ್ಲಿ) ಬದಲಾದರೆ ಉಪಭಾಷಾ ಪ್ರದೇಶದ ವಿಸ್ತಾರವು ಹಿಗ್ಗಬಹುದು ಅಥವಾ ಕುಗ್ಗಬಹುದು.

ಉಪಭಾಷೆಯ ಅಧ್ಯಯನ: ಇತಿಹಾಸ

ಉಪಭಾಷೆಯನ್ನು ಕುರಿತ ಶಾಸ್ತ್ರೀಯ ಅಧ್ಯಯನ 19 ನೆಯ ಶತಮಾನದ ಉತ್ತರಾರ್ಧದ ನಂತರ ಶುರುವಾದರೂ ಹೆಚ್ಚು ಕ್ರಮಬದ್ದವಾದ ಅಧ್ಯಯನ 20 ನೇ ಶತಮಾನದ ಮಧ್ಯದ ನಂತರ ಶುರುವಾಯಿತು. ಉಪಭಾಷೆಯ ಕಲ್ಪನೆ ಸಾಕಷ್ಟು ಹಳೆಯದೇ. ಹಳೆಯ ಗ್ರೀಕ್ ಸಾಹಿತ್ಯದಲ್ಲಿ ಕೆಲವು ಸಾಹಿತ್ಯ ಪ್ರಕಾರಗಳಲ್ಲಿ ನಿರ್ದಿಷ್ಟವಾದ ಉಪಭಾಷೆಗಳನ್ನು ಬಳಸುವುದು ಉಚಿತ ಎನ್ನಲಾಗಿದೆ. ಮಹಾಕಾವ್ಯಗಳಲ್ಲಿ ಅಯೋನಿಕ್ ಉಪಭಾಷೆ, ಭಾವಗೀತೆಗಳಲ್ಲಿ ಅಯೋಲಿಕ್ ಉಪಭಾಷೆ, ನಾಟಕಗಳಲ್ಲಿ ಆಟಿಕ್ ಉಪಭಾಷೆ ಹೀಗೆ ಯಾವ ಪ್ರಕಾರಗಳಲ್ಲಿ ಯಾವ ಉಪಭಾಷೆಯಿರಬೇಕು ಎಂದಿದೆ. ಇಂಗ್ಲಿಶ್ ಸಾಹಿತ್ಯದಲ್ಲಿಯೂ ನಿರ್ದಿಷ್ಟ ಉದ್ದೇಶಗಳಿಗಾಗಿ ನಿರ್ದಿಷ್ಟ ಉಪಭಾಷೆಗಳನ್ನು ಬಳಸಲಾಗಿದೆ. ಚಾಸರ್ ಉತ್ತರ ಭಾಗದ ಇಂಗ್ಲಿಶನ್ನು ಹಾಸ್ಯವನ್ನು ತರಲು ಬಳಸಿದ್ದಾನೆ. ಸಂಸ್ಕೃತ ಸಾಹಿತ್ಯದಲ್ಲಿ ಬೇರೆ ಬೇರೆ ಗುಣಗಳನ್ನು ವ್ಯಕ್ತಪಡಿಸಲು ಗೌಡೀ, ವೈದರ್ಭೀ, ಪಾಂಚಾಲೀ ಎಂಬ ಭಾಷಾ ಶೈಲಿಗಳು ಉಪಯುಕ್ತವಾಗಿವೆ ಎನ್ನಲಾಗಿದೆ. ಈ ಶೈಲಿಗಳು ಪ್ರದೇಶಗಳ ಹೆಸರನ್ನು ಹೇಳುತ್ತಿರುವುದರಿಂದ ಇವು ಮೂಲತಃ ಆಯಾ ಪ್ರದೇಶಗಳಲ್ಲಿ ಬಳಕೆಯಲ್ಲಿದ್ದ ಸಂಸ್ಕೃತ ಭಾಷಾ ಪ್ರಭೇದಗಳಿಂದ ಉಂಟಾದ ಶೈಲಿಗಳಿರಬೇಕು. ಮೃಚ್ಛಕಟಿಕ ನಾಟಕದಲ್ಲಿ ಶ-ಸಗಳ ಭೇದ ತೋರಿಸದ ಶಕಾರನ ಪಾತ್ರ ಒಂದು ಸಮಾಜದ ಉಪಭಾಷೆಯನ್ನು ಸೂಚಿಸುವ ರೀತಿಯಲ್ಲಿ ಬಳಕೆಯಾಗಿದೆ. ಕನ್ನಡದಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಪ್ರಭೇದ ಗಳಿದ್ದು ಉತ್ತರ ಹಾಗೂ ದಕ್ಷಿಣ ಎಂಬ ಎರಡು ಮಾರ್ಗಗಳು (ಉಪಭಾಷೆಗಳು) ಪ್ರಧಾನವಾಗಿ ಇವೆ ಎಂದು 9ನೇ ಶತಮಾನದ ಕವಿರಾಜಮಾರ್ಗ ಎಂಬ ಗ್ರಂಥ ಹೇಳುತ್ತದೆ. ಆದರೆ ಉಪಭಾಷೆಯನ್ನು ಕುರಿತ ಗಂಭೀರವಾದ ಅಧ್ಯಯನ ಶುರುವಾದದ್ದು 19ನೇ ಶತಮಾನದ ಉತ್ತರಾರ್ಧದಲ್ಲಿ. ಮುಖ್ಯವಾದ  ಕೆಲವು ಪ್ರಾರಂಭಿಕ ಅಧ್ಯಯನಗಳಲ್ಲಿ ಒಂದು, ಎಲ್ಲಿಸ್ ಎಂಬಾತ ಕೈಗೊಂಡ ಇಂಗ್ಲಿಶ್ ಉಪಭಾಷೆಗಳಲ್ಲಿಯ ಧ್ವನಿವ್ಯವಸ್ಥೆಯನ್ನು ಕುರಿತ ಪರಿವೀಕ್ಷಣೆ (1889); ಇನ್ನೊಂದು, ಸ್ವಿಜರ್‌ಲ್ಯಾಂಡಿನ ಕರೆಂಜನ್ ಎಂಬ ಉಪಭಾಷೆಯನ್ನು ಕುರಿತ ವಿಂಟ್ಲರ್‌ನ ಅಧ್ಯಯನ (1876); ಮತ್ತೊಂದು ಜಾರ್ಜ್ ವೆಂಕರ್ ಜರ್ಮನಿಯಲ್ಲಿ ನಡೆಸಿದ ಅಧ್ಯಯನ (1876). ಆ ಕಾಲದಲ್ಲಿದ್ದ ‘ನವ ವೈಯ್ಯಕರಣರು’ ಎಂಬ ಹೆಸರಿನಿಂದ ಪ್ರಖ್ಯಾತರಾದ ಕೆಲವರು ಭಾಷಾಶಾಸ್ತ್ರಜ್ಞರು ನೀಡಿದ ಒಂದು ಹೇಳಿಕೆ (-‘ಧ್ವನಿವ್ಯತ್ಯಾಸಗಳು ಭಾಷೆಯಲ್ಲಿ ಅಪವಾದವೇ ಇಲ್ಲದಂತೆ ನಿಯಮಬದ್ದವಾಗಿ ನಡೆಯುತ್ತವೆ’ – ಎಂಬುದು) ನಿಜವೋ ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಉಪಭಾಷೆಗಳ ಅಧ್ಯಯನ ಮಾಡುವಂತೆ ಪ್ರೇರಣೆ ನೀಡಿತು. (ಉದಾಹರಣೆಗೆ, ಕನ್ನಡದಲ್ಲಿ 10ನೇ ಶತಮಾನದ ಹೊತ್ತಿಗೆ ಪಕಾರಾದಿಯಾದ ಶಬ್ದಗಳು ಹಕಾರಾದಿಯಾಗಿ ಬದಲಾದವು. ಪಕಾರಾದಿಯಾದ ಎಲ್ಲ ಶಬ್ದಗಳೂ ಹೀಗೆ ಬದಲಾಗಿವೆಯೇ ಇಲ್ಲವೇ ಇದಕ್ಕೆ ಅಪವಾದವಾಗಿ ಉಳಿದಿರುವ ಶಬ್ದಗಳು ಆ ಕಾಲದಲ್ಲಿ ಬಳಕೆಯಾಗಿವೆಯೇ ಎಂಬುದನ್ನು ಪರೀಕ್ಷಿಸಬಹುದು.) ಉಪಭಾಷಾ ಅಧ್ಯಯನದಿಂದ ಕಂಡುಬಂದ ಸಂಗತಿಯೆಂದರೆ ಧ್ವನಿವ್ಯತ್ಯಾಸ ಎಲ್ಲ ಶಬ್ದಗಳಲ್ಲಿ ಏಕಕಾಲದಲ್ಲಿ ನಡೆಯದು. ಕೆಲವು ಶಬ್ದಗಳು ಅಪವಾದಗಳಾಗಿ ಉಳಿಯುತ್ತವೆ. ಆದ್ದರಿಂದ ಶಬ್ದಗಳಿಗೆ ತಮ್ಮದೇ ಆದ ಇತಿಹಾಸವಿದೆ.

ವೆಂಕರ್ ತನ್ನ ಅಧ್ಯಯನ ಕಾಲದಲ್ಲಿ 40 ವಾಕ್ಯಗಳ ಪಟ್ಟಿಯೊಂದನ್ನು ಜರ್ಮನಿ ಮತ್ತು ಆಸ್ಟ್ರಿಯಾದಲ್ಲಿಯ ಐವತ್ತು ಸಾವಿರ ಅಧ್ಯಾಪಕರುಗಳಿಗೆ ಕಳಿಸಿ ಅವರಿಂದ ಆಯಾ ಪ್ರದೇಶಗಳಲ್ಲಿಯ ಉಪಭಾಷೆಗಳಲ್ಲಿ ಅನುವಾದ ಮಾಡಿಸಿ ತರಿಸಿಕೊಂಡ. ಫ್ರಾನ್ಸ್ ದೇಶದಲ್ಲಿ ಗಿಲಿಯೆರೊನ್ ಎಂಬಾತ ಎಡ್ಮಂಡ್ ಎಡ್ಮಂಟ್ ಎಂಬ ಧ್ವನಿ ವಿಜ್ಞಾನದಲ್ಲಿ ಪಳಗಿದ ವ್ಯಕ್ತಿಯನ್ನು ನೇಮಿಸಿಕೊಂಡು ಆತನೇ ನೇರವಾಗಿ ಹಳ್ಳಿಗಳಿಗೆ ಹೋಗಿ ಜನರನ್ನು ಸಂದರ್ಶಿಸಿ, ಮುಖತಃ ಮಾಹಿತಿಗಳನ್ನು ಪಡೆದು ಬರೆದುಕೊಂಡು ತರುವಂತೆ ಮಾಡಿ ಮಾಹಿತಿಯನ್ನು ಸಂಗ್ರಹಿಸಿದ. ಈ ಮಾಹಿತಿಗಳನ್ನಾಧರಿಸಿ ಹದಿಮೂರು  ಸಂಪುಟಗಳಲ್ಲಿ ಪ್ರಕಟವಾದ ಉಪಭಾಷಾ ಭೂಪಟಗಳು ಮುಂದೆ ಅನೇಕರಿಗೆ ಪ್ರೇರಕವಾದವು. ಅಮೇರಿಕಾದ ಬೇರೆ ಬೇರೆ ಭಾಗಗಳಲ್ಲಿ ಹಾನ್ಸ್ ಕುರಾತ್ ಎಂಬುವರು 1931 ರಿಂದ ದೊಡ್ಡ ಪ್ರಮಾಣದಲ್ಲಿ ಕೈಗೊಂಡ ಉಪಭಾಷಾ ಪರಿವೀಕ್ಷಣೆಯೂ ಪ್ರಸಿದ್ಧವಾದುದು. ಈ ಶತಮಾನದಲ್ಲಿ ಚೈನಾ, ಜಪಾನ್, ಗಲ್ಫ್ ದೇಶಗಳಲ್ಲಿ ಉಪಭಾಷಾ ಪರಿವೀಕ್ಷಣೆಗಳು ದೊಡ್ಡ ಪ್ರಮಾಣದಲ್ಲಿ ನಡೆದಿವೆ. ಮಲಯಾಳಕ್ಕೆ ಸಂಬಂಧಿಸಿದಂತೆ ದ್ರಾವಿಡ ಭಾಷಾವಿಜ್ಞಾನ ಸಂಸ್ಥೆ ಉಪಭಾಷಾಭೂಪಟ, ಕೋಶಗಳನ್ನು ಪ್ರಕಟಿಸಿದೆ. ತೆಲುಗಿನ ವೃತ್ತಿ ಪದಗಳ ಕೋಶವು ಪ್ರಕಟವಾಗಿದೆ. ಕನ್ನಡ ವೃತ್ತಿ ಪದಗಳ ಸಂಗ್ರಹ ಕನ್ನಡ ವಿಶ್ವ ವಿದ್ಯಾಲಯದಿಂದ ಸಿದ್ಧವಾಗಿದೆ. ಬೆಂಗಳೂರು ವಿಶ್ವವಿದ್ಯಾನಿಲಯದ ಆಶ್ರಯ ದಲ್ಲಿ ಸುಮಾರು 500 ಶಬ್ದಗಳನ್ನಾಧರಿಸಿ ದಕ್ಷಿಣ ಕರ್ನಾಟಕದ ಭಾಗಗಳಿಂದ ಸಂಗ್ರಹಿಸಿದ ಮಾಹಿತಿಗಳನ್ನಾಧರಿಸಿ ಉಪಭಾಷಾ ಕೋಶವೊಂದನ್ನು ಸಿದ್ಧ ಪಡಿಸಲಾಗಿದೆ.

ಉಪಭಾಷೆಯ ಅಧ್ಯಯನ: ಉದ್ದೇಶ ಹಾಗೂ ವಿಧಾನ

ಉಪಭಾಷೆಗಳನ್ನು ಕುರಿತ ಅಧ್ಯಯನ ಎರಡು ರೀತಿಯದ್ದಾಗಿರಬಹುದು; ಒಂದು, ಉಪಭಾಷೆಯೊಂದರ ಧ್ವನಿವ್ಯವಸ್ಥೆ, ಪದರಚನೆ, ವಾಕ್ಯರಚನೆ ಈ ಎಲ್ಲ ಅಂಗಗಳನ್ನು ವರ್ಣಿಸುವ ವ್ಯಾಕರಣವನ್ನು ಸಿದ್ಧಪಡಿಸುವುದು; ಎರಡು, ಭಾಷೆಯೊಂದರ ಧ್ವನಿಗಳು, ಶಬ್ದಗಳು ಅಥವಾ ಇತರ ಭಾಷಾಂಶ ಗಳಲ್ಲಿ ಕೆಲವನ್ನು ಆಯ್ದು ಕೆಲವು ಅವು ಯಾವ ಯಾವ ಪ್ರದೇಶಗಳಲ್ಲಿ (ಅಥವಾ ಸಮಾಜಗಳಲ್ಲಿ) ಯಾವ ಯಾವ ರೂಪದಲ್ಲಿ ಅಥವಾ ರೀತಿಯಲ್ಲಿ ಬಳಕೆಯಾಗುತ್ತಿವೆ ಎಂಬುದನ್ನು ಕಂಡುಹಿಡಿದು ಅವುಗಳ ಪ್ರಾದೇಶಿಕ (ಅಥವಾ ಸಾಮಾಜಿಕ) ವ್ಯಾಪ್ತಿಯನ್ನು ನಿರ್ಧರಿಸುವುದು. ಉದಾಹರಣೆಗೆ, ಕನ್ನಡದ ‘ಆಮೆ’ ಎಂಬ ಶಬ್ದವು ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ‘ಆಮೆ’, ‘ಕೂಮ’, ‘ತಾಂಬೇಲಿ’ ಇತ್ಯಾದಿ ರೂಪಗಳಲ್ಲಿ ಬಳಕೆಯಲ್ಲಿದೆ. ಆಯಾ ಕ್ಷೇತ್ರಗಳಿಗೆ ಹೋಗಿ ಮಾಹಿತಿ ಸಂಗ್ರಹಿಸುವುದರ ಮೂಲಕ ಈ ರೂಪಗಳು ಯಾವ ಯಾವ ಪ್ರದೇಶಗಳಲ್ಲಿವೆ ಎಂಬುದನ್ನು ತಿಳಿಯಬಹುದು. ಅನಂತರದಲ್ಲಿ ಇವುಗಳ ಪ್ರಾದೇಶಿಕ ವ್ಯಾಪ್ತಿಯನ್ನು ಭೂಪಟದಲ್ಲಿ ಗುರುತಿಸಿ ಉಪಭಾಷಾ ಭೂಪಟಗಳನ್ನು ಸಿದ್ಧಪಡಿಸಬಹುದು. ಅಧ್ಯಯನದ ಈ ಎರಡು ಬಗೆಗಳಲ್ಲಿ ಯಾವುದೇ ಇರಲಿ, ಇವುಗಳನ್ನು ಪ್ರಾರಂಭಿಸಿದಾಗ ಇದ್ದ ಉದ್ದೇಶಗಳೆಂದರೆ (ಈ ಮೇಲೆ ಹೇಳಿದಂತೆ) ಭಾಷೆಯಲ್ಲಿ ಜರುಗುವ ಧ್ವನಿ ವ್ಯತ್ಯಾಸಗಳು ಕ್ರಮಬದ್ಧವೇ ಎಂಬುದನ್ನು ಪರೀಕ್ಷಿಸುವುದು, ಒಂದು; ಉಪಭಾಷೆಗಳ ಅಧ್ಯಯನದಿಂದ ಭಾಷೆಯ ಹಿಂದಿನ ರೂಪಗಳನ್ನು ಪುನಾರಚಿಸಲು ಸಾಧ್ಯ ವಾಗುತ್ತದೆ ಎಂಬುದನ್ನು ಇನ್ನೊಂದು; ಆಧುನೀಕರಣದಿಂದಾಗಿ ಹಳೆಯ ರೂಪಗಳೆಲ್ಲ ನಶಿಸಿ ಹೋಗುವುದರಿಂದ ಅದಕ್ಕೆ ಮೊದಲೇ ಅವನ್ನು ಸಂಗ್ರಹಿಸಿ ರಕ್ಷಿಸಿಡುವುದು ಮೂರನೆಯ ಇನ್ನೊಂದು ಉದ್ದೇಶವಾಗಿತ್ತು. ಉಪಭಾಷಾ ಅಧ್ಯಯನದಿಂದ ಭಾಷೆಯ ಹಿಂದಿನ ರೂಪಗಳ ಪುನಾರಚನೆಗೆ ಕೆಲಮಟ್ಟಿಗೆ ಸಹಾಯವಾಗುತ್ತೆಂಬುದು ನಿಜವೇ. ಆದರೆ ಇಂದು ಇದರ ಉದ್ದೇಶ ಮುಖ್ಯವಾಗಿ ಎರಡು ಬಗೆಯದು: ಮೊದಲನೆಯದು, ಯಾವುದೇ ಒಂದು ಭಾಷಾ ರೂಪದ (ಧ್ವನಿ, ಶಬ್ದ ಅಥವಾ ವ್ಯಾಕರಣಾಂಶದ) ಅಥವಾ ಭಾಷಾ ರೂಪಗಳ ಪ್ರಾದೇಶಿಕ ಪ್ರಸಾರವನ್ನು ಕಂಡುಹಿಡಿಯುವುದು ಅರ್ಥಾತ್ ಅವು ಯಾವ ಯಾವ ಪ್ರದೇಶವನ್ನು ವ್ಯಾಪಿಸಿವೆ ಎಂದು ನಿರ್ಧರಿಸುವುದು. ಇದಕ್ಕೆ ಭಾಷಾಭೂಗೋಲ ಎಂದು ಹೆಸರು; ಎರಡನೆಯದು, ಪ್ರಾದೇಶಿಕ ಪ್ರಸಾರ ಹಾಗೂ ಅದರಲ್ಲಾಗುವ ವ್ಯತ್ಯಾಸಗಳನ್ನು ಗಮನಿಸಿ ಭಾಷೆಯ ರಚನೆ ಹಾಗೂ ಬದಲಾವಣೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸುವುದು. ಇದಕ್ಕೆ ಭೌಗೋಲಿಕ ಭಾಷಾಧ್ಯಯನ ಎಂದು ಹೆಸರು.

ಉಪಭಾಷೆಗಳ ಅಧ್ಯಯನದಲ್ಲಿ ಮಾಹಿತಿಗಳ ಸಂಗ್ರಹಣ ಒಂದು ಹಂತ. ಅಧ್ಯಯನ ಮಾಡುವ ವ್ಯಕ್ತಿಯೇ ನೇರವಾಗಿ ಆಯಾ ಸ್ಥಳಗಳಿಗೆ ಭೇಟಿಯಿತ್ತು ಅಲ್ಲಿಯ ಜನರಿಂದ ತನಗೆ ಬೇಕಾದ ಭಾಷಾಮಾಹಿತಿಗಳನ್ನು ಕೇಳಿ ಪಡೆಯಬಹುದು ಅಥವಾ ಇತರರನ್ನು ಕಳಿಸಿ ಮಾಹಿತಿ ಸಂಗ್ರಹಿಸಬಹುದು. ದೊಡ್ಡ ಪ್ರಮಾಣದಲ್ಲಿ ಮಾಹಿತಿ ಸಂಗ್ರಹಿಸುವಾಗ ಎರಡನೆಯ ಬಗೆ ಅನಿವಾರ್ಯವಾಗುತ್ತದೆ. ಮಾಹಿತಿಗಳನ್ನು ಸಂಗ್ರಹಿಸುವಾಗ ಅಲ್ಲಿಯೇ ಅವು ಗಳನ್ನು ಬರೆದಿಟ್ಟುಕೊಳ್ಳಬಹುದು ಅಥವಾ ಟೇಪ್ ಮಾಡಿಕೊಳ್ಳಬಹುದು. ಇವುಗಳಲ್ಲಿ ಎರಡನೆಯ ರೀತಿಯೇ ಹೆಚ್ಚು ಉಚಿತ ಹಾಗೂ ಅನುಕೂಲಕರ ಎಂದು ತಿಳಿಯಲಾಗಿದೆ. ಜನರಿದ್ದಲ್ಲಿಗೇ ಹೋಗಿ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಕ್ಷೇತ್ರಕಾರ್ಯವೆಂದು ಹೆಸರು. ಮಾಹಿತಿ ನೀಡುವವರಿಗೆ ಪ್ರತಿವಕ್ತ ರೆಂದು ಹೆಸರು. ಕ್ಷೇತ್ರಕಾರ್ಯದ ಮೂಲಕ ನಡೆಸುವ ಒಟ್ಟೂ ಅಧ್ಯಯನಕ್ಕೆ ಉಪಭಾಷಾ ಪರಿವೀಕ್ಷಣೆ ಎಂದು ಕರೆಯಲಾಗುತ್ತಿದೆ.

ಅಧ್ಯಯನ ಮಾಡುವ ವ್ಯಕ್ತಿ ಕ್ಷೇತ್ರಗಳಿಗೆ ಹೋಗಿ ಭಾಷಾ ರೂಪದ ಮಾಹಿತಿಗಳನ್ನು ಸಂಗ್ರಹಿಸುವ ಮೊದಲು ಕೆಲವು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಅವಶ್ಯಕ. ಎಷ್ಟೆಷ್ಟು ದೂರದಲ್ಲಿಯ ಯಾವ ಯಾವ ಹಳ್ಳಿ ಗಳನ್ನು ಆರಿಸಿಕೊಳ್ಳಬೇಕು, ಮಾಹಿತಿಗಾಗಿ ಎಂತಹವರನ್ನು ಪ್ರತಿವಕ್ತರನ್ನಾಗಿ ಆರಿಸಿಕೊಳ್ಳಬೇಕು, ಮಾಹಿತಿ ಪಡೆಯುವುದು ಹೇಗೆ ಇತ್ಯಾದಿಗಳನ್ನು ನಿರ್ಧರಿಸಿ ಕೊಳ್ಳಬೇಕು. ಹಿಂದಿನ ಅಧ್ಯಯನಗಳಲ್ಲಿ ಇತರ ಭಾಷೆಗಳ ಅಥವಾ ಪ್ರದೇಶ ಗಳಲ್ಲಿ ಬಳಕೆಯಲ್ಲಿರುವ ರೂಪಗಳ ಮಿಶ್ರಣವಾಗದ ಅದೇ ಸ್ಥಳದ, ‘ಶುದ್ಧಭಾಷೆ’ಯ ರೂಪಗಳನ್ನು ಪಡೆಯುವ ಉದ್ದೇಶದಿಂದ ಹಳ್ಳಿಗಳನ್ನು ಮಾತ್ರ ಆರಿಸಿಕೊಂಡು ಅಲ್ಲಿಯ ಕೆಲವೇ ಅವಿದ್ಯಾವಂತ ಮಧ್ಯವಯಸ್ಕ ವ್ಯಕ್ತಿಗಳನ್ನು ಉತ್ತಮ ಪ್ರತಿವಕ್ತರೆಂದು ಭಾವಿಸಿ ಅವರಿಂದ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿತ್ತು. ಆದರೆ ಈಗಿನ ಅಧ್ಯಯನಗಳಲ್ಲಿ ಪಟ್ಟಣಗಳನ್ನೂ ಒಳಗೊಳ್ಳಲಾಗುತ್ತದೆ. ಅಲ್ಲದೆ (ವಯಸ್ಸು, ಲಿಂಗ, ವಿದ್ಯೆ, ಸಾಮಾಜಿಕ ಸ್ಥಾನಮಾನ ಇತ್ಯಾದಿಗಳ ದೃಷ್ಟಿಯಿಂದ) ಎಲ್ಲ ಬಗೆಯ ವ್ಯಕ್ತಿಗಳಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತದೆ. ಮಾತ್ರವಲ್ಲ, ಒಂದೇ ಸಮಾಜ / ಪ್ರದೇಶದಲ್ಲಿ ಒಂದೇ ಅರ್ಥದಲ್ಲಿ ಬೇರೆ ಬೇರೆ ವ್ಯಕ್ತಿಗಳು ಬೇರೆ ಬೇರೆ ರೂಪಗಳನ್ನು ಬಳಸಿದ್ದರೆ ಅವುಗಳ ಬಳಕೆಯ ಪ್ರತಿಶತ ಪ್ರಮಾಣವನ್ನೂ ನಿರ್ಧರಿಸುವ ರೀತಿಯಲ್ಲಿ ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ. ಪ್ರತಿವಕ್ತರಿಂದ ಭಾಷಾ ಮಾಹಿತಿಗಳನ್ನು ಪಡೆಯಲು ಅನುಕೂಲವಾಗುವಂತೆ ಮೊದಲೇ ಆಯ್ದ ಕೆಲವು ಶಬ್ದಗಳು ಅಥವಾ ಪ್ರಶ್ನೆಗಳನ್ನು ಪಟ್ಟಿಮಾಡಿಕೊಳ್ಳಲಾಗುತ್ತದೆ. ಇದಕ್ಕೆ ಪ್ರಶ್ನಾವಳಿ ಎಂದು ಹೆಸರು. ಇದನ್ನು ಆಧರಿಸಿಯೇ ಕ್ಷೇತ್ರಕಾರ್ಯ ನಡೆಯುತ್ತದೆ.

ಕ್ಷೇತ್ರಕಾರ್ಯದಲ್ಲಿ ತೊಡಗಿದವರಿಗೆ ಪ್ರತಿವಕ್ತರಿಂದ ಮಾಹಿತಿಗಳನ್ನು ಹೇಗೆ ಪಡೆಯಬೇಕೆಂಬುದು ಗೊತ್ತಿರಬೇಕು. ಮುಕ್ತ ಮನಸ್ಸಿನಿಂದ ಸಂಭಾಷಣೆಗೆ ತೊಡಗುವಂತೆ ಮಾಡಲು ಪ್ರತಿವಕ್ತನ ಜೊತೆಗೆ ಉತ್ತಮವಾದ ಸಂಬಂಧವನ್ನು ಕುದುರಿಸಿಕೊಳ್ಳಬೇಕು. ದೊರೆತ ಮಾಹಿತಿ ಸರಿಯಾಗಿದೆ ಎಂಬುದನ್ನು ಖಚಿತಪಡಿಸಿ ಕೊಳ್ಳಬೇಕು. ಉದಾಹರಣೆಗೆ, ಕನ್ನಡದ ಆಮೆ ಎಂಬ ಶಬ್ದಕ್ಕೆ ಕೆಲವೆಡೆ ‘ಆಮೆ’ ಎಂತಲೂ ಇನ್ನು ಕೆಲವೆಡೆ ‘ಕೂಮ’ ಎಂತಲೂ ಮತ್ತೆ ಕೆಲವೆಡೆ ‘ತಾಂಬೇಲಿ’ ಎಂತಲೂ ಹೇಳಲಾಗುತ್ತದೆ. ಕೆಲವು ಊರುಗಳಲ್ಲಿ ‘ಆಮೆ’ ‘ಕೂಮ’  ಎಂಬ ಎರಡೂ ರೂಪಗಳ ಬಳಕೆಯಿದೆ. ಈ ಎರಡೂ ರೂಪಗಳು ಬಳಕೆಯಲ್ಲಿರುವ ಕೆಲವು ಹಳ್ಳಿಗಳಲ್ಲಿ ಇವೆರಡೂ ಸಮಾನಾರ್ಥಕಗಳಾಗಿದ್ದು ಬೇರೆ ಬೇರೆ ವಯಸ್ಸಿನವರಿಂದ ಅಥವಾ ಬೇರೆ ಬೇರೆ ಸಮಾಜದವರಿಂದ ಬಳಕೆಯಾಗುತ್ತಿವೆ. ಆದರೆ ಬೇರೆ ಕೆಲವು ಹಳ್ಳಿಗಳಲ್ಲಿ ಇವೆರಡೂ ರೂಪಗಳು ಆಮೆಯ ಎರಡು ಬಗೆಗಳನ್ನು (ಬಿಳಿಯ ಬಣ್ಣವುಳ್ಳದ್ದು ‘ಆಮೆ’, ಕಪ್ಪು ಬಣ್ಣವುಳ್ಳದ್ದು ‘ಕೂಮ’) ಸೂಚಿಸಲು ಬಳಕೆಯಾಗುತ್ತದೆ. ಇದೇ ರೀತಿ ಕಾಮನ ಬಿಲ್ಲಿಗೆ ‘ಕಾಮನಬಿಲ್ಲು’ ಹಾಗೂ ‘ನೀರ‌್ಗೊರಡು’ ಎಂಬ ಎರಡು ರೂಪಗಳಿದ್ದು ಅವು ಚಿಕ್ಕ ಅರ್ಥ ವ್ಯತ್ಯಾಸವನ್ನು ಹೇಳುತ್ತದೆ. (ವೃತ್ತಾಕಾರದ ರೂಪವುಳ್ಳದ್ದು ‘ಕಾಮನಬಿಲ್ಲು; ಭಾಗಶಃ ಮಾತ್ರ ಮೂಡಿ, ಬಹುಮಟ್ಟಿಗೆ ನೇರವಾಗಿ ಕಾಣುವ ರೂಪ ‘ನೀರ‌್ಗೊರಡು’ ಎನ್ನಿಸಿಕೊಳ್ಳುತ್ತದೆ.) ಇದು ತಿಳಿಯದಿದ್ದಲ್ಲಿ ಸಂಶೋಧಕನು ಇವುಗಳನ್ನು ಸಮಾನಾರ್ಥಕಗಳೆಂದು ತಪ್ಪಾಗಿ ಭಾವಿಸಬಹುದು. ಸಾಧ್ಯವಾದೆಡೆ ಚಿತ್ರಗಳನ್ನು ಬಳಸಿ ಈ ಗೊಂದಲವನ್ನು ನಿವಾರಿಸಿಕೊಳ್ಳಬಹುದು. ಕೆಲವೊಮ್ಮೆ ಪೂರ್ವಾನುಭವದ ಮೇಲೆ ಪುನಃ ಕ್ಷೇತ್ರಕಾರ್ಯಕ್ಕೆ ತೊಡಗಬೇಕಾಗಬಹುದು.

ಉಪಭಾಷೆಯ ಅಧ್ಯಯನ: ಭೂಪಟಗಳ ಸಿದ್ಧತೆ

ಕ್ಷೇತ್ರಕಾರ್ಯದಿಂದ ನಿರ್ದಿಷ್ಟ ಶಬ್ದವೊಂದಕ್ಕೆ (ಅಥವಾ ಧ್ವನಿಗೆ ಅಥವಾ ನುಡಿಗಟ್ಟಿಗೆ) ಬದಲಾಗಿ ಬೇರೆ ಬೇರೆ ಊರುಗಳಲ್ಲಿ ಯಾವ ಯಾವ ರೂಪಗಳಿವೆ ಎಂಬುದನ್ನು ತಿಳಿದುಕೊಂಡ ನಂತರ ಪ್ರತಿಯೊಂದು ರೂಪಕ್ಕೂ ಒಂದೊಂದು ಚಿಹ್ನೆ ನೀಡಿ ಅವುಗಳನ್ನು ಭೂಪಟದಲ್ಲಿ ಆಯಾ ಸ್ಥಾನಗಳಲ್ಲಿ ಗುರುತಿಸಿಕೊಂಡರೆ ಬೇರೆ ಬೇರೆ ರೂಪಗಳ ಪ್ರಾದೇಶಿಕ ಹಂಚಿಕೆಯ ಚಿತ್ರ ದೊರೆಯುತ್ತದೆ. ನಕ್ಷೆ 1, 2 ಹಾಗೂ 3 ರಲ್ಲಿ ಅನುಕ್ರಮವಾಗಿ ‘ಕಡೆಗೋಲು’, ‘ಗಂಡುಬೆಕ್ಕು’ ಹಾಗೂ ‘ಕಡಲೆಕಾಯಿ’ – ಈ ಶಬ್ದಗಳಿಗಿರುವ ವಿಭಿನ್ನ ರೂಪಗಳು ದಕ್ಷಿಣ ಕರ್ನಾಟಕದ ವಿವಿಧ ಭಾಗಗಳಲ್ಲಿ ಹೇಗೆ ವ್ಯಾಪಿಸಿವೆ ಎಂಬುದನ್ನು ತೋರಿಸಲಾಗಿದೆ. (ಇದು 1971 ರಲ್ಲಿ ನಡೆಸಿದ ಕ್ಷೇತ್ರಕಾರ್ಯದ ಮಾಹಿತಿಯನ್ನಾಧರಿಸಿದೆ) ಹೀಗೆ ವಿವಿಧ ರೂಪಗಳ ಪ್ರಾದೇಶಿಕ ಹಂಚಿಕೆಯನ್ನು ತೋರಿಸುವ ಭೂಪಟಗಳು ಉಪಭಾಷಾ ಭೂಪಟಗಳಲ್ಲಿ ಒಂದು ವಿಧ. ಇಂತಹ ಭೂಪಟಗಳಲ್ಲಿ ಭಾಷಾರೂಪಗಳ ಜೊತೆಗೆ ಹಿನ್ನೆಲೆಯಾಗಿ (ನದಿ, ಬೆಟ್ಟ ಮೊದಲಾದ) ನೈಸರ್ಗಿಕ ಹಿನ್ನೆಲೆಯನ್ನೂ ಹೆದ್ದಾರಿ, ರೈಲುಮಾರ್ಗ ಮೊದಲಾದ ಪ್ರಧಾನ ಸಂಚಾರ ವ್ಯವಸ್ಥೆಯನ್ನೂ ಗುರುತಿಸಿಕೊಡಬಹುದು. ಇದು ಭಾಷಾ ರೂಪಗಳ ಹಂಚಿಕೆಯನ್ನು ವ್ಯಾಖ್ಯಾ ನಿಸಲು ಸಹಾಯವಾಗಬಹುದು. ಭೂಪಟದಲ್ಲಿ ಆಯಾ ಭಾಷಾ ರೂಪಗಳ ಪ್ರಾದೇಶಿಕ ವ್ಯಾಪ್ತಿಯನ್ನು ರೇಖೆಗಳನ್ನೆಳೆದು ತೋರಿಸಬಹುದು. (ನಕ್ಷೆ 4 ರಲ್ಲಿ ಗಂಡುಬೆಕ್ಕು, ನೆಲಗಡೆಲೆ ಹಾಗೂ ಕಡೆಗೋಲು – ಈ ಮೂರು ಪದಗಳಿಗೆ ಇರುವ ಬೇರೆ ಬೇರೆ ಪ್ರಾದೇಶಿಕ ರೂಪಗಳ ಗಡಿರೇಖೆಗಳನ್ನು ಸೂಚಿಸಿದೆ.) ಇಂತರ ರೇಖೆಗಳನ್ನು ಸೀಮಾರೇಖೆಗಳು ಎಂದು ಕರೆಯ ಲಾಗುತ್ತದೆ. ಉಪಭಾಷಾ ಪರಿವೀಕ್ಷಣೆಗಳನ್ನು ಪ್ರಾರಂಭಿಸಿದ ವರುಷಗಳಲ್ಲಿ ಸೀಮಾರೇಖೆಗಳು ಉಪಭಾಷಾಗಡಿಗಳನ್ನು ಗುರುತಿಸಲು ಸಹಾಯಕ ವಾಗುತ್ತವೆಯೆಂದು ನಂಬಲಾಗಿತ್ತು.

ಗಂಡು ಭಾಷೆ ಹೆಣ್ಣು ಭಾಷೆ

ಕೆಲವೊಮ್ಮೆ ಒಂದು ಉಪಭಾಷೆಯವರು ಇನ್ನೊಂದು ಉಪಭಾಷೆಯನ್ನು ತಮ್ಮದರೊಂದಿಗೆ ಹೋಲಿಸಿ ವಿಶಿಷ್ಟವಾದ ಪದಗಳ ಮೂಲಕ ಬೆಲೆ ಕಟ್ಟುವುದಿದೆ. ಕನ್ನಡದಲ್ಲಿ ಮೈಸೂರು ಕಡೆಯವರು ಉತ್ತರ ಕರ್ನಾಟಕದ ಭಾಷೆಯನ್ನು ಕುರಿತು ಬರೆಹ ಭಾಷಣಗಳಲ್ಲಿ ಗಂಡು ಭಾಷೆಯೆಂದೂ ತಮ್ಮದು ಸುಕುಮಾರ ಭಾಷೆಯೆಂದೂ ಹೇಳುವುದಿದೆ. ಉತ್ತರ ಕರ್ನಾಟಕದ ಕನ್ನಡದ ವಾಕ್ಯಗಳಲ್ಲಿ ಆಘಾತ, ಸ್ವರಗಳ ಏರಿಳಿತ ಇವು ತಮ್ಮದಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿ ಇರುವುದನ್ನು ಗಮನಿಸಿ ಹೀಗೆ ವರ್ಣಿಸುತ್ತಿರ ಬಹುದು. ಕರಾವಳಿಯ ಕನ್ನಡದ ಬಗ್ಗೆ ಇಂತಹ ವಿಶೇಷಣಗಳೇನೂ ಇದ್ದಂತಿಲ್ಲ. ಉತ್ತರ ಕನ್ನಡದ ಕರಾವಳಿಯ ಆಡುಗನ್ನಡದ ಒಂದು ವೈಶಿಷ್ಟ್ಯವೆಂದರೆ ಪ್ರಶ್ನಾರ್ಥಕ ವಾಕ್ಯಗಳನ್ನು ಬಳಸುವಾಗ ಇತರೆಡೆ ಇದ್ದಂತೆ ಕೊನೆಯಲ್ಲಿ ಅಥವಾ ಎಂಬ ಪ್ರತ್ಯಯ ಬಳಸದೆ (ಉದಾ: ಅವರು ಬಂದ್ರಾ? / ಬಂದರೋ?) ಹೇಳಿಕೆಯ ವಾಕ್ಯದಲ್ಲಿಯೇ ಕೊನೆಯಲ್ಲಿ ಸ್ವರವನ್ನು ಏರಿಸಿ ಪ್ರಶ್ನೆಯಾಗಿ ಬಳಸುವುದು. ಉದಾ: ಅವರು ಬಂದ್ರು â (ಹೇಳಿಕೆ); ಅವರು ಬಂದ್ರು? á (ಪ್ರಶ್ನೆ).

ಎರಡು ಉಪಭಾಷೆಗಳ ಗಡಿ ಪ್ರದೇಶದಲ್ಲಿ ಅನೇಕ ಸೀಮಾರೇಖೆಗಳು ಒಟ್ಟೊಟ್ಟಿಗೆ ಸರಪಣಿಯಂತೆ ಬಹುಮಟ್ಟಿಗೆ ಸಮನಾಂತರವಾಗಿ ಸಾಗಿರುವುದನ್ನು ನಿರೀಕ್ಷಿಸಲಾಗಿತ್ತು. ಆದರೆ ವಾಸ್ತವದಲ್ಲಿ ಹೀಗಿರದೆ ಅವು ಕೆಲವೊಮ್ಮೆ ಒಟ್ಟೊಟ್ಟಿಗೆ ಸಾಗಿ ಕೆಲವೊಮ್ಮೆ ಬೇರೆ ಬೇರೆ ದಿಕ್ಕುಗಳಿಗೆ ಚೆದುರಿರುವುದು ಉಪಭಾಷಾಭೂಪಟಗಳಿಂದ ತಿಳಿಯಿತು. ನಕ್ಷೆ 5ನ್ನು ಉದಾಹರಣೆಯಾಗಿ ಗಮನಿಸಿ ಕರ್ನಾಟಕದ ಪೂರ್ವದ ಗಡಿಯಿಂದ ದಾವಣಗೆರೆ, ಜಗಳೂರುವರೆಗೆ ಮೂರು ಸೀಮಾರೇಖೆಗಳು ಒಂದೇ ದಿಕ್ಕಿನಲ್ಲಿ ಹರಿದು ಮುಂದೆ ಬೇರೆಯಾಗಿವೆ. ಈ ಮೂರು ರೇಖೆಗಳು ಹೀಗೆ ಹರಿಯಲು ಇದೇ ಪ್ರದೇಶದಲ್ಲಿ ಸಮನಾಂತರವಾಗಿ ಹರಿಯುವ ತುಂಗಭದ್ರಾ ನದಿ ಕಾರಣವಾಗಿರಬಹುದು. ಹೀಗೆಯೇ ಕರಾವಳಿಗುಂಟ, ಉತ್ತರ-ದಕ್ಷಿಣವಾಗಿ ಸೀಮಾರೇಖೆಗಳು ಹರಿದಿರುವುದನ್ನೂ ಗಮನಿಸಿ. ಆದರೆ ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಇವು ಓರೆಕೋರೆಯಾಗಿ ಹರಡಿರುವುದನ್ನು ಗಮನಿಸಿ.  ಈ ಜಿಲ್ಲೆಗಳು ತಮ್ಮದೇ ಆದ ಭಾಷೆಯ ಛಾಪನ್ನು ಹೊಂದಿಲ್ಲದಿರುವುದನ್ನೂ ಬೇರೆ ಬೇರೆ ಉಪಭಾಷೆಗಳ ಲಕ್ಷಣಗಳು ಇಲ್ಲಿ ಮಿಶ್ರವಾಗಿರುವುದನ್ನೂ ಇದು ಸೂಚಿಸುತ್ತಿರಬಹುದು. ಆದರೆ ಕೇವಲ ಎರಡು ಮೂರು ಶಬ್ದ ಗಳನ್ನಾಧರಿಸಿ ಸೀಮಾರೇಖೆಗಳನ್ನು ಮಾತ್ರ ಆಧರಿಸಿ ಹೀಗೆ ವಿವರಣೆ ನೀಡುವುದು ಸಮಂಜಸವಲ್ಲ. ಇದಕ್ಕೆ ಇನ್ನೂ ಅನೇಕ ಉದಾಹರಣೆಗಳು ಬೇಕು.

ಶಬ್ದಗಳನ್ನು ಆಧಾರವಾಗಿಟ್ಟುಕೊಂಡಂತೆಯೆ ವಿಭಕ್ತಿ ಪ್ರತ್ಯಯ, ಆಖ್ಯಾತ ಪ್ರತ್ಯಯ ಅಥವಾ ಇನ್ನಿತರ ವ್ಯಾಕರಣದ ಸಂಗತಿಯನ್ನಾಧರಿಸಿಯೋ ಅಥವಾ ಧ್ವನಿವ್ಯತ್ಯಾಸ, ಅರ್ಥವ್ಯತ್ಯಾಸಗಳನ್ನು ಆಧರಿಸಿಯೋ ಮಾಹಿತಿಗಳನ್ನು ಸಂಗ್ರಹಿಸಿ ಸೀಮಾರೇಖೆಗಳನ್ನು ಗುರುತಿಸಬಹುದು. (ಉದಾ: ಹಕಾರದ ಉಚ್ಚಾರಣಕ್ಕೆ ಸಂಬಂಧಿಸಿದಂತೆ ಉತ್ತರ ದಕ್ಷಿಣ ಕರ್ನಾಟಕಗಳಲ್ಲಿ ವ್ಯತ್ಯಾಸ ವಿದೆ; ದಕ್ಷಿಣ ಭಾಗದ ಹೆಚ್ಚಿನ ಸಮಾಜಗಳಲ್ಲಿ ಹಕಾರವನ್ನು ಉಚ್ಚರಿಸದೇ ಇರುವ ರೂಢಿಯಿದ್ದರೆ ಉತ್ತರ ಭಾಗದ ಹೆಚ್ಚಿನ ಜನರು ಅದನ್ನು ಉಚ್ಚರಿಸುತ್ತಾರೆ.) ಅದೇ ಶಬ್ದವನ್ನೋ ಅಥವಾ ಪ್ರತ್ಯಯವನ್ನೋ ಆಧರಿಸಿ ಬೇರೆ ಬೇರೆ ಕಾಲಗಳಲ್ಲಿ ಪರಿವೀಕ್ಷಣೆ ನಡೆಸಿ, ಗುರುತಿಸಿಕೊಂಡ ಸೀಮಾ ರೇಖೆಗಳನ್ನು ಹೋಲಿಸುವುದರಿಂದ ಆ ಶಬ್ದ ಅಥವಾ ಪ್ರತ್ಯಯವು ಹೆಚ್ಚು ಪ್ರದೇಶಗಳಿಗೆ ಹರಡುತ್ತಿಯೇ, ಹರಡುತ್ತಿದ್ದರೆ ಯಾವ ಕಡೆಗೆ ಎಂಬುದನ್ನು ತಿಳಿಯಲು ಸಾಧ್ಯ ಹಾಗೂ ಇದರಿಂದಾಗಿ ಭಾಷೆಗೆ ಸಂಬಂಧಿಸಿದ ಸಾಮಾಜಿಕ ಸಂಗತಿಗಳನ್ನು ಚರ್ಚಿಸಲೂ ಸಾಧ್ಯವಾಗುತ್ತದೆ.

ಭಾಷೆ ಮತ್ತು ವೃತ್ತಿ ಒಂದು ಭಾಷೆ ಅಥವಾ ಉಪಭಾಷೆಯನ್ನಾಡುವವರು ಒಂದು ನಿರ್ದಿಷ್ಟ ವೃತ್ತಿಗಾಗಿ ಪ್ರಸಿದ್ಧರಾಗಿದ್ದರೆ ಅವರ ವೃತ್ತಿ, ಭಾಷೆ ಹಾಗೂ ಪ್ರದೇಶಗಳ ನಡುವೆ ನಂಟನ್ನು ತರುವುದುಂಟು. ಸಿನಿಮಾ, ದೂರದರ್ಶನಗಳಲ್ಲಿ ಸಂಗೀತದ ಅಧ್ಯಾಪಕನೊಬ್ಬ (ಹೆಚ್ಚಾಗಿ ಹಿಂದಿ ಸಿನಿಮಾಗಳಲ್ಲಿ) ಸಾಮಾನ್ಯವಾಗಿ ತಮಿಳಿಗನಾಗಿರುತ್ತಾನೆ. ಕನ್ನಡದ ಚಿತ್ರಗಳಲ್ಲಿ ಅಥವಾ ದೂರದರ್ಶನದ ಕತೆ / ಧಾರಾವಾಹಿಗಳಲ್ಲಿ ಅಡಿಗೆಯವರು ಸಾಮಾನ್ಯವಾಗಿ ಮಾತು ಮಾತಿಗೆ ಉಂಟು, ಮಾರಾಯ್ರೆ ಎಂದು ಹೇಳುವ ದಕ್ಷಿಣ ಕನ್ನಡದವರಾಗುತ್ತಾರೆ.

ಭಾಷೆ ಮತ್ತು ಹಾಸ್ಯ

ಒಂದು ಭಾಷೆ ಅಥವಾ ಉಪಭಾಷೆಯವರ ನುಡಿಗಟ್ಟು, ಉಚ್ಚಾರಣೆಯ ರೀತಿಗಳು ಇನ್ನೊಂದು ಭಾಷೆ ಅಥವಾ ಉಪಭಾಷೆಯವರಿಗೆ ಅಪರಿಚಿತವಾಗಿರುವುದರಿಂದ ಇವು ತಮಾಷೆಗೆ ಕಾರಣವಾಗಬಹುದು. ಪ್ರವೃತ್ತಿ ಭಾಷೆ ಉಪಭಾಷೆಯ ಪ್ರತ್ಯೇಕತೆಯನ್ನು ತಿಳಿಸುವ ರೀತಿಯೂ ಆಗುತ್ತದೆ. ತಮಿಳು ಭಾಷೆ ಹೇಗಿರುತ್ತದೆಂಬುದಕ್ಕೆ ಕರ್ನಾಟಕದ ಅನೇಕ ಭಾಗಗಳಲ್ಲಿ ಒಂದು ಜನಪ್ರಿಯ ವಿವರಣೆ ಹೀಗಿದೆ. ಒಂದು ತಗಡಿನ ಡಬ್ಬಿಯಲ್ಲಿ ಕಲ್ಲೊಂದನ್ನು ಹಾಕಿ ಅದನ್ನು ಅಲ್ಲಾಡಿಸಿದರೆ ಉಂಟಾಗುವ ಶಬ್ದವೇ ತಮಿಳಿನ ಉಚ್ಚಾರಣೆಯಾಗುತ್ತದೆ! ಮೈಸೂರು ಕಡೆಯವರು ಧಾರವಾಡ ಕಡೆಯ ಕನ್ನಡವನ್ನು ಲೇವಡಿ ಮಾಡುವಾಗ ಅವರು ಇಳಿಯಾಕ ಹತ್ಯಾರ್ಯಿ ಎನ್ನುವುದುಂಟು. ತರಗತಿಯಲ್ಲಿ ಅಧ್ಯಾಪಕರೊಬ್ಬರು ಒಮ್ಮೆ, ನಾವು ನ್ಯಾಯಾಧೀಶರಿಗೆ ಜಡ್ಜ್ ಎನ್ನುತ್ತೀವಿ. ಧಾರವಾಡದ ಕಡೆ ಅವರನ್ನು ಜಜ್ಜ್ ಎಂದು ಜಜ್ಜಿಬಿಡುತ್ತಾರೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಧಾರವಾಡದ ಕಡೆಯವರು ಅವರ್ ಮನೀಗ್ ಹೋಗ್‌ಬಿಟ್ಟ್, ಇದನ್ನ್ ಕೊಟ್ಟಬಿಟ್ಟ್, ಹೇಳಿಬಿಟ್ಟ್ ಬರ‌್ತೀನಿ ಎಂಬಂತಹ ವಾಕ್ಯಗಳನ್ನೋ, ನೀವು ಸ್ಟ್ರೇಟ್ ಹೋಗಿ ಲೆಫ್ಟ್ ತಿರುಗಿ ಆಮೇಲೆ ರೈಟಿಗೆ ಟರ್ನ್ ಮಾಡಿದ್ರೆ ಅವ್ರ್‌ಮನೆ ಸಿಕ್ಕತ್ತೆ ಎಂದೋ ಲೇವಡಿ ಮಾಡುವುದಿದೆ.

ಕೆಲವೊಮ್ಮೆ ಯಾವುದೋ ಒಂದು ಶಬ್ದವೋ, ಧ್ವನಿಯೋ, ವ್ಯಾಕರಣಕ್ಕೆ ಸಂಬಂಧಿಸಿದ ವಿಷಯವೋ ಯಾವುದೋ ಒಂದು ಚಿಕ್ಕ ಪ್ರದೇಶದಲ್ಲಿ ಮಾತ್ರ ಕಂಡುಬರಬಹುದು. ಅಥವಾ ಅನೇಕ ಭಾಷಾ ಲಕ್ಷಣಗಳು ಚಿಕ್ಕ ಪ್ರದೇಶಕ್ಕೆ ಸೀಮಿತವಾಗಿರಬಹುದು. ಇಂತಹ ಪ್ರದೇಶಗಳಿಗೆ ಭಾಷಾ ನಡುಗಡ್ಡೆಗಳು ಎಂದು ಹೆಸರು. ಉದಾಹರಣೆಗೆ, ಉತ್ತಮಪುರುಷ ಬಹುವಚನವನ್ನು ಹೇಳಲು ‘ನಾವು’ ಹಾಗೂ ‘ಎಂಗೊ’ ಎಂಬ ಎರಡು ರೂಪಗಳಿರುವುದು ಉತ್ತರ ಹಾಗೂ ದಕ್ಷಿಣ ಕನ್ನಡದ ಕೆಲಭಾಗಗಳಲ್ಲಿ (ಹವ್ಯಕರಲ್ಲಿ) ಮಾತ್ರ ಕಂಡುಬಂದಿದೆ. ಕನ್ನಡದಲ್ಲಿ ಹಿಂದೆ ಒಂದು ಕಾಲದಲ್ಲಿ ಇದ್ದ ಈ ಉಭಯ ರೂಪಗಳು ಇಂದು ಈ ಎರಡು ಜಿಲ್ಲೆಗಳ ಕೆಲವು ತಾಲೂಕುಗಳಿಗೆ ಸೀಮಿತವಾಗಿವೆ. ಬಹುಶಃ ಹಿಂದೆ ವಿಸ್ತಾರವಾದ ಪ್ರದೇಶದಲ್ಲಿ  ಬಳಕೆಯಲ್ಲಿದ್ದ ಕೆಲವು ರೂಪಗಳು, ಭಾಷೆ ಬದಲಾದಂತೆ ಜನಬಳಕೆಯಿಂದ ತಪ್ಪಿಹೋಗಿ ಇಂದು ಯಾವುದೋ ಒಂದು ಪ್ರದೇಶಕ್ಕೆ ಸೀಮಿತವಾಗಿರುವುದಕ್ಕೆ ಇದು ಒಂದು ಉದಾಹರಣೆ.

ಉಪಭಾಷೆಗಳ ಅಧ್ಯಯನದಲ್ಲಿ ಉಪಭಾಷಾಭೂಪಟಗಳನ್ನು ಸಿದ್ಧಪಡಿಸು ವುದು ಹಾಗೂ ಭೂಪಟಗಳಲ್ಲಿ ಕಾಣಿಸಿಕೊಳ್ಳುವ ಭಾಷಾರೂಪಗಳ ಪ್ರಾದೇಶಿಕ ಹಂಚಿಕೆಗಳಿಗೆ ಕಾರಣಗಳನ್ನು ಹುಡುಕುವುದು ಕೊನೆಯ ಹಾಗೂ ಮುಖ್ಯವಾದ ಘಟ್ಟ.

ಕಮ್ಮಾರ : ಎಲ್ಲೆಲ್ಲಿ ಏನೇನು?

1. ಕಮ್ಮಾರ : ಮೊಳಕಾಲ್ಮೂರು, ಜಗಳೂರು, ಹಿರಿಯೂರು, ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿ, ಸೊರಬ, ಸಾಗರ, ತೀರ್ಥಹಳ್ಳಿ, ಶಿವಮೊಗ್ಗ, ಭದ್ರಾವತಿ, ಮಡಿಕೇರಿ, ಸಿರಾ, ಮಧುಗಿರಿ.

2. ಕಮ್ಮಾರ / ಕಂಬಾರ : ಚಳ್ಳಕೆರೆ, ಚಿತ್ರದುರ್ಗ, ಹೊಳಲ್ಕೆರೆ.

3. ಕಮ್ಮಾರ / ಬಡಿಗಿ : ಹೊಸದುರ್ಗ, ಟಿ. ನರಸಿಪುರ.

4. ಕುಲಮೇವ್ನ : ಶಿಕಾರಿಪುರ, ಕಡೂರು, ಅಲಕಲಗೂಡು, ನೆಲಮಂಗಲ, ಕನಕಪುರ, ದಕ್ಷಿಣ ಬೆಂಗಳೂರು, ದೇವನಹಳ್ಳಿ, ಮಾಲೂರು, ಶ್ರೀನಿವಾಸಪುರ.

5. ಆಚಾರಿ : ಹೊಸನಗರ, ಶೃಂಗೇರಿ, ನ.ರಾ. ಪುರ, ಕೊಪ್ಪ, ತರಿಕೆರೆ, ಚಿಕ್ಕಮಗಳೂರು, ಕೆ.ಆರ್. ನಗರ, ಮೈಸೂರು, ಹುಣಸೂರು, ಶ್ರೀರಂಗಪಟ್ಟಣ, ಪಾಂಡವಪುರ, ಮಂಡ್ಯ, ಕುಣಿಗಲ್, ಮಾಗಡಿ, ರಾಮನಗರ, ಕೋಲಾರ.

6. ಕಬ್ಬಿಣದ್ ಆಚಾರಿ : ಮೂಡಿಗೆರೆ, ಸಕಲೇಶಪುರ.

7. ಕಂಬಾಚಾರಿ : ಬೇಲೂರು.

8. ಕಮ್ಮಾರ / ಆಚಾರಿ : ಆಲೂರು, ಹಾಸನ, ಗುಬ್ಬಿ, ತುಮಕೂರು.

9. ಆಚಾರಿ / ಬಡಿಗಿ : ಅರ‌್ಕಲಗೂಡು, ಸೋಮವಾರಪೇಟೆ, ತುರುವೆಕೆರೆ.

10. ಗೆಜ್ಜ್‌ಗಾರ : ಹೆಗ್ಗಡದೇವನಕೋಟೆ, ಗುಂಡ್ಲುಪೇಟೆ, ಚಾಮರಾಜನಗರ, ನಂಜನಗೂಡು, ಕೃಷ್ಣರಾಜಪೇಟೆ, ಹೊಳೆನರಸಿಪುರ.

11. (ಕಬ್ಬಿಣದ್) ವಾಜ / ಆಚಾರಿ : ಮಳವಳ್ಳಿ. ಮದ್ದೂರು, ಚನ್ನಪಟ್ಟಣ, ಉತ್ತರ ಬೆಂಗಳೂರು.

12. ವಾಜ : ಹೊಸಕೋಟೆ, ದೊಡ್ಡಬಳ್ಳಾಪುರ, ಬಂಗಾರಪೇಟೆ, ಮುಳಬಾಗಲು, ಚಿಂತಾಮಣಿ, ಚಿಕ್ಕಬಳ್ಳಾಪುರ, ಶಿಡ್ಳಗಟ್ಟ.

13. (ಕಬ್ಬಿಣದ್) ಅಕ್ಕಸಾಲಿಗ : ಕೊಳ್ಳೆಗಾಲ, ಅನೇಕಲ್ಲು.

14. ಬಡ್ಗಿ, ಕೊಲ್ಲ : ವೀರರಾಜಪೇಟೆ (ಬಡ್ಗಿ-ದ.ಕ. ಜಿಲ್ಲೆಯಿಂದ ಬಂದ ಕಮ್ಮಾರ; ಕೊಲ್ಲ-ಕೇರಳದಿಂದ ಬಂದು ನೆಲೆಸಿದ ಕಮ್ಮಾರ.)