ಎಲ್ಲೋ ಮಗು ಅಳುತಾ ಇದೆ
ಒಂದೇ ಸಮನೆ-
ದೂರದ ಬಿರುಗಾಳಿಯ ಮೊರೆಯಂತೆ
ಮುಗಿಲಿಂದಿಳಿಯುವ ಧಾರಾಕಾರದ
ಮಳೆಯಂತೆ
ದಡವನು ಅಪ್ಪಳಿಸುವ ಅಲೆಯಂತೆ
ಎಲ್ಲೋ ಮಗು ಅಳುತಾ ಇದೆ
ಒಂದೇ ಸಮನೆ.

ಕೈಗೆಟುಕದ ರೊಟ್ಟಿಯ ಚೂರಾಗಿದೆ ಚಂದಿರ
ಬಾನಿನ ತಟ್ಟೆಯಲಿ
ಹಸಿವಿನ ತುಣುಕುಗಳಂದದಿ ಚಿಕ್ಕೆಗಳುರಿಯುತ್ತಿವೆ
ಶೂನ್ಯದ ಹೊಟ್ಟೆಯಲಿ
ಸೊಕ್ಕಿದ ತೇಗಿನ ತೆರ ಝಗಝಗಿಸಿವೆ
ನಗರದ ಬೆಳಕಿನ ವಿಸ್ತಾರ
ಸುತ್ತಲು ಛಳಿಗಾಳಿಗೆ ನಡುಗುತಲಿವೆ
ಎಲೆಯುದುರಿದ, ಕೈ ಚಾಚಿದ
ಅನಾಥ ಮರಗಳ ಪರಿವಾರ.

ಎಲ್ಲೋ ಮಗು ಅಳುತಾ ಇದೆ
ಒಂದೇ ಸಮನೆ-
ಸಾವಿರ ಹೆಜ್ಜೆಗಳೊದೆಯುತ ನಡೆದಿವೆ
ಬಿದ್ದ ಬೀದಿಯನು ನಿರಂತರ
ಗಡಿಬಿಡಿಗಳ ಕಂಬಿಯ ಮೇಲುರುಳುತ್ತಿದೆ
ದಿನ ನಿತ್ಯದ ವ್ಯವಹಾರ
ಇದ್ದುದರಲ್ಲೇ ಹೇಗೋ ಸದ್ದಿಲ್ಲದೆ ಸಾಗಿದೆ
ಮನೆ ಮನೆಯೊಳಗಣ ಸಂಸಾರ.

ಮಗು ಅಳುತಾ ಇದೆ ಎಲ್ಲೋ
ಒಂದೇ ಸಮನೆ-
ಗುಡಿ-ಮಠ-ಚರ್ಚಿನ ಗಣಗಣ ಗಂಟೆಯ
ಧೂಪ ದೀಪಗಳ ಉದ್ದಕ್ಕೂ
ದೇಶೋದ್ಧಾರದ ರಾಜಕಾರಣದ
ಜೇಡನ ಬಲೆಗಳ ಅಗಲಕ್ಕೂ
ನಗರಾರಣ್ಯದ ಗಗನ ಚುಂಬಿಗಳ
ಹುತ್ತದ ನೆತ್ತಿಗಳೆತ್ತರಕೂ
ಎಲ್ಲೋ ಮಗು ಅಳುತಾ ಇದೆ
ಒಂದೇ ಸಮನೆ.

ಮಗು ಅಳುತಾ ಇದೆ ಒಂದೇ ಸಮನೆ,
ಶತಶತಮಾನದ ಬೆವರಿನ ತೆನೆಗಳ-
ನೆತ್ತಿದ ಹೊಲ-ಗದ್ದೆಗಳಲ್ಲಿ
ಕವಿ-ವಿಜ್ಞಾನಿಯ-ಕ್ರಾಂತಿಕಾರಿಗಳ
ಸಾಧನೆ-ಅನ್ವೇಷಣೆಗಳ ಹಾದಿಯಲಿ
ಬಿರುಗಣ್ಣುರಿಯಲಿ ಕಮರುವ ಕನಸಿನ
ಚಿತೆಯ ಜ್ವಾಲೆಗಳ ಧೂಮದಲಿ
ಚರಿತ್ರೆಯುದ್ದಕು ಕೆನೆವ ಕುದುರೆಗಳ
ರಥ ಚಕ್ರದ ಕೆಂಧೂಳಿಯಲಿ
ಎಲ್ಲೋ ಮಗು ಅಳುತಾ ಇದೆ
ಒಂದೇ ಸಮನೆ.